ಹಿರಿಯರು, ವಿಶೇಷ ಚೇತನರಿಂದ ಮನೆಯಿಂದಲೇ ಮತದಾನ ಶುರು
ದಾವಣಗೆರೆ, ಏ.24 – ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನದ ಮೊದಲ ಹಂತ ಆರಂಭವಾಗಿದೆ. ಮನೆಯಿಂದಲೇ ಮತದಾನ ಮಾಡಲು ಅವಕಾಶ ಪಡೆದಿರುವವರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಪೈಕಿ 2,262 ಜನರು ಮನೆಯಿಂದಲೇ ಮತದಾನ ಮಾಡುವ ಆಯ್ಕೆ ಬಯಸಿದ್ದಾರೆ.
ದಾವಣಗೆರೆ ಕ್ಷೇತ್ರದಲ್ಲಿ ವಿಶೇಷಚೇತನರು 804 ಹಾಗೂ ಹಿರಿಯ ನಾಗರಿಕರಾದ 85 ವರ್ಷ ಮೇಲ್ಪಟ್ಟವರು 1,458 ಮತದಾರರು ನೋಂದಾಯಿಸಿದ್ದಾರೆ. ಗುರುವಾರದಿಂದ ಇವರು ಮತದಾನ ಆರಂಭಿಸಿದ್ದು, ಏ. 27ರವರೆಗೆ ಈ ಪ್ರಕ್ರಿಯೆ ನಡೆಯಲಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಮತಗಟ್ಟೆ 71 ರಲ್ಲಿ ಬರುವ 90 ವರ್ಷದ ಎನ್.ಸುಮತಿ ಭಟ್ ಅವರು ಮನೆಯಿಂದಲೇ ಮತದಾನ ಮಾಡಿದರು. ಮತಗಟ್ಟೆ 75 ರಲ್ಲಿನ ವಿಶೇಷ ಚೇತನರಾದ ಹೆಚ್. ವಿನೋದಬಾಯಿ ಇವರು ಮನೆಯಲ್ಲಿಯೇ ಮತದಾನ ಮಾಡಿದರು.
ಮನೆಗೇ ಬರುವ ಮತಗಟ್ಟೆ
ಮನೆಯಲ್ಲಿ ಮತದಾನ ಮಾಡುವ ಪ್ರಕ್ರಿಯೆ ಒಂದು ರೀತಿ ಮನೆ ಬಾಗಿಲಿಗೇ ಮತಗಟ್ಟೆ ಬಂದ ರೀತಿಯಲ್ಲಿದೆ. ಮನೆಯಿಂದಲೇ ಮತದಾನ ಮಾಡುವಾಗ ಮತ ಪತ್ರ ಬಳಸಲಾಗುತ್ತದೆ.
ಪ್ರತಿ ಮತದಾರರ ಮನೆಗೆ ಪಿಆರ್ಓ, ಸೆಕ್ಟರ್ ಅಧಿಕಾರಿ, ಮೈಕ್ರೋ ಅಬ್ಸರ್ವರ್, ಮತದಾನ ಅಧಿಕಾರಿ, ಬಿಎಲ್ಓ, ವೀಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿಗಳ ತಂಡ ತೆರಳುತ್ತದೆ.
ಚುನಾವಣಾ ಆಯೋಗದ ಪ್ರಕಟಣೆಯನ್ನು ಓದುವ ಮೂಲಕ ಮತದಾರರಿಗೆ ತಿಳಿಸಿ, ಮನೆಯಲ್ಲಿಯೇ ಮತದಾನ ಮಾಡಲು ಮತದಾರರ ವಹಿ ಹಾಗೂ ನಮೂನೆ-13 ಕ್ಕೆ ಸಹಿ ಪಡೆಯಲಾಗುತ್ತದೆ. ಮತ ಪತ್ರ ದಲ್ಲಿರುವಂತೆ ಅಭ್ಯರ್ಥಿಗಳ ವಿವರ ಹಾಗೂ ಮತ ಚಲಾಯಿಸುವ ವಿಧಾನದ ಬಗ್ಗೆ ತಿಳಿಸಲಾಗುತ್ತದೆ. ನಂತರ ಮತದಾನದ ಗೌಪ್ಯತೆ ಕಾಯ್ದುಕೊಂಡು ಮತ ಚಲಾವಣೆಗೆ ಅವಕಾಶ ನೀಡಲಾಗುತ್ತದೆ.
ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ವೀಕ್ಷಿಸಿದರು. ಮನೆಯಲ್ಲಿ ಮತದಾನ ಮಾಡು ವಾಗ ಮತದ ಗೌಪ್ಯತೆ ಮತ್ತು ಮಹತ್ವ ಕಾಪಾಡಿ ಕೊಳ್ಳಬೇಕು ಎಂದು ಸಿಬ್ಬಂದಿಗೆ ತಿಳಿಸಿದರು.
ಮನೆಯಿಂದಲೇ ಮತದಾನ ಮಾಡಿದ ನಂತರ ಜಿಲ್ಲಾಧಿಕಾರಿ ವೆಂಕಟೇಶ್ ಜೊತೆ ಮಾತನಾಡಿದ ಸುಮತಿ ಭಟ್, ಈವರೆಗೂ ಯಾವುದೇ ಚುನಾವಣೆಯಲ್ಲಿ ಮತ ಹಾಕುವುದನ್ನು ಬಿಟ್ಟಿಲ್ಲ. ಚುನಾವಣಾ ಆಯೋಗ ನನ್ನಂತಹ ಅನೇಕರಿಗೆ ಮನೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ನಿರ್ಧಾರ ಎಂದರು.
ಈ ಹಿಂದಿನ ಚುನಾವಣೆಗಳಲ್ಲಿ ಮಗ ಹಾಗೂ ಸೊಸೆಯೊಂದಿಗೆ ಮತಗಟ್ಟೆಗೆ ಹೋಗಿ ಮತ ಹಾಕುತ್ತಿದ್ದೆ. ಈಗ ಮನೆಯಲ್ಲೇ ಮತದಾನಕ್ಕೆ ಅವಕಾಶ ನೀಡಿದ್ದು, ಇನ್ನಷ್ಟು ಅನುಕೂಲ ತಂದಿದೆ ಎಂದರು.
ಈ ವೇಳೆ ಸಹಾಯಕ ಚುನಾವಣಾಧಿಕಾರಿ ರೇಣುಕಾ, ಇಸ್ಮಾಯಿಲ್, ಚುನಾವಣಾ ಸಿಬ್ಬಂದಿಗಳಾದ ನಾಗರಾಜಪ್ಪ, ಶೌಕತ್ ಅಲಿ, ಸೆಕ್ಟರ್ ಅಧಿಕಾರಿ ಶಾಂತಾನಾಯ್ಕ, ಮೈಕ್ರೋ ಅಬ್ಸರ್ವರ್ ಸುಜಿತ್ ಎಸ್.ವಿ, ಬಿ.ಎಲ್.ಒ. ಅಂಜಲಿ ಉಪಸ್ಥಿತರಿದ್ದರು.