ದೇಶದ ಯುವಕರಿಗೆ ಮೋದಿಯೇ ಗ್ಯಾರಂಟಿ

ದೇಶದ ಯುವಕರಿಗೆ ಮೋದಿಯೇ ಗ್ಯಾರಂಟಿ

ಹರಪನಹಳ್ಳಿ ತಾಲ್ಲೂಕಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪ್ರಚಾರ 

 ಹರಪನಹಳ್ಳಿ, ಏ.22- ಯುವಕರು ಈ ದೇಶದ ಭವಿಷ್ಯ. ಅಂತಹ ಯುವಕರಿಗೆ ಮೋದಿ ಜೀ ಅವರೇ ಒಂದು ನಿಜವಾದ ಗ್ಯಾರಂಟಿ. ಅಗ್ನಿವೀರ್ ನೇಮಕಾತಿ ಮೂಲಕ ಯುವಕರಿಗೆ ಉದ್ಯೋಗ ಕೊಡುವ ಜೊತೆಗೆ ರಾಷ್ಟ್ರ ಪ್ರೇಮ ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಸ್ಟಾರ್ಟಪ್‌ ಇಂಡಿಯಾ, ಮುದ್ರಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಹೊಸ ಉದ್ಯಮ ಮತ್ತು ಕೋಟ್ಯಂತರ ಉದ್ಯೋಗ ಸೃಷ್ಟಿಗೆ ಕಾರಣೀಕರ್ತರಾಗಿ ಈ ದೇಶದ ಯುವಕರಿಗೆ ನಿಜವಾದ ಗ್ಯಾರಂಟಿಯಾಗಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.

ಹರಪನಹಳ್ಳಿ ತಾಲ್ಲೂಕಿನ ಬಾಗಳಿ, ಮೈದೂರು, ಚಿಗಟೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಅವರ ಜೊತೆ ಮತ ಯಾಚಿಸಿ ಮಾತನಾಡಿದ ಅವರ, ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಸುಳ್ಳಿನ ಗ್ಯಾರಂಟಿ ನೀಡಿದೆ. ಅದೇ ಮೋದಿ ಅವರು ದೇಶದ ಯುವಕರಿಗೆ, ಸಾಮಾನ್ಯ ಜನರಿಗೆ ನಿಜವಾದ ಗ್ಯಾರಂಟಿ ನೀಡಿದ್ದಾರೆ ಎಂದರು.

ರಾಜ್ಯ ಸರ್ಕಾರ ನಿರುದ್ಯೋಗಿ ಯುವಕರಿಗೆ ಯುವ ನಿಧಿ ನೀಡುತ್ತೇವೆ ಎಂದು ಹೇಳಿ ಯಾಮಾರಿಸಿದೆ. ಇಲ್ಲಿ ಇರುವ ಎಷ್ಟು ಯುವಕರಿಗೆ ಯುವ ನಿಧಿ ಹಣ ಬಂದಿದೆ ಕೈ ಎತ್ತಿ ನೋಡೋಣ ಎಂದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗೆ ಮರುಳಾದರೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಭವಿಷ್ಯ ಇರುವುದಿಲ್ಲ. ದೇಶದ ರಕ್ಷಣೆ, ನಮ್ಮ ನಿಮ್ಮ ರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ. ನೀವೆಲ್ಲರೂ ನನ್ನ ಕ್ರಮ ಸಂಖ್ಯೆ 1, ಹೆಸರು ಗಾಯತ್ರಿ ಸಿದ್ದೇಶ್ವರ್, ಗುರುತು ಕಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರೆ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಗುಳೇ ತಪ್ಪಿಸಲು ಕ್ರಮ : ಹರಪನಹಳ್ಳಿ ಭಾಗದ ಕೆಲ ಗ್ರಾಮಗಳ ಜನ ಉದ್ಯೋಗ ಅರಸಿಕೊಂಡು ಮಲೆನಾಡಿನ ಕಾಫಿ ತೋಟಗಳ ಕಡೆಗೆ ಗುಳೇ ಹೋಗುವುದು ಸರ್ವೇ ಸಾಮಾನ್ಯವಾಗಿದೆ.  ಗುಳೇ ಹೋಗುವುದನ್ನು ಶಾಶ್ವತವಾಗಿ ತಡೆಗಟ್ಟಿ ಅವರವರ ಗ್ರಾಮಗಳಲ್ಲಿಯೇ ಉದ್ಯೋಗ ಖಾತ್ರಿ ಯೋಜನೆ ಮೂಲಕ ಉದ್ಯೋಗ ದೊರಕಿಸಿಕೊಟ್ಟು ಈ ಭಾಗದ ಕೂಲಿ ಕಾರ್ಮಿಕರು ಗುಳೇ ಹೋಗದೆ ಸ್ವಗ್ರಾಮಗಳಲ್ಲಿಯೇ ನೆಮ್ಮದಿಯಿಂದ ಜೀವನ ನಡೆಸುವಂತಾಗಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ಮಾತನಾಡಿ, ಹರಪನಹಳ್ಳಿ ತಾಲ್ಲೂಕು ಅಭಿವೃದ್ಧಿಗೆ ನಾನು ಸಿದ್ದೇಶಣ್ಣ ಸಾಕಷ್ಟು ಅನುದಾನ ತಂದಿದ್ದೇವೆ. ನಿಮ್ಮ ಗ್ರಾಮಗಳಿಗೆ ಸಿಸಿ ರಸ್ತೆ, ಚರಂಡಿ, ಕುಡಿವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಕೊಟ್ಟಿದ್ದು ನಾವೇ. ಈ ಬಾರಿ ಗಾಯತ್ರಿ ಸಿದ್ದೇಶ್ವರ ಅವರು ಹೆಚ್ಚಿನ ಮತಗಳ ಅಂತರದಿಂದ ಗೆದ್ದು ದೆಹಲಿಗೆ ಹೋದರೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ. ನಮ್ಮ ಕಾರ್ಯಕರ್ತರು ನೀವೇ ಅಭ್ಯರ್ಥಿ ಎಂದುಕೊಂಡು ಮನೆ ಮನೆಗೂ ಹೋಗಿ ಗಾಯತ್ರಿ ಸಿದ್ದೇಶ್ವರ ಅವರ ಪರ ಮತಯಾಚಿಸಬೇಕು ಎಂದು ಕರೆ ನೀಡಿದರು.

ಶ್ರೀಮತಿ ಕಮಲಾ ನಿರಾಣಿ, ಬಿಜೆಪಿ ಮುಖಂಡರಾದ ಗಣೇಶ್,  ಚಿಗಟೇರಿ ಮಂಜುನಾಥ್, ಬೆಣ್ಣೆಹಳ್ಳಿ ಮಾರುತಿ, ಲೋಕೇಶ್, ಕಲ್ಲಣ್ಣಗೌಡ, ಮಂಜುನಾಥ್, ಹನುಮಂತಪ್ಪ‌, ಮಹಾಂತೇಶ್, ಬಸವರಾಜ್, ಅಂಜಿನಪ್ಪ ಮತ್ತು ಇತರರು ಉಪಸ್ಥಿತರಿದ್ದರು.

ಬಿಜೆಪಿ ಸೇರ್ಪಡೆ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಹಾಗೂ ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ಅವರ ಸಮ್ಮುಖದಲ್ಲಿ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಮೈದೂರು ಗ್ರಾಮದಲ್ಲಿ ಮುಖಂಡರಾದ ಅರವಿಂದ್ ಗೌಡ, ಲೋಹಿತ್, ಸುರೇಶ್, ಮಂಜುನಾಥ್ ಮತ್ತು ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಬೆಣ್ಣೆಹಳ್ಳಿ ಗ್ರಾಮದಲ್ಲಿ ರೇವಣಸಿದ್ದಪ್ಪ ಮತ್ತು ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ನರೇಂದ್ರ ಮೋದಿ ಅವರ ಆಡಳಿತ, ಸಿದ್ದೇಶಣ್ಣನ ಅಭಿವೃದ್ಧಿ ಕೆಲಸ ನೋಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ ಎಂದರು.

error: Content is protected !!