ಕೆರೆಗಳಲ್ಲಿ ವರ್ಷವಿಡೀ ನೀರಿನ ಲಭ್ಯತೆಗೆ ಕ್ರಮ

ಕೆರೆಗಳಲ್ಲಿ ವರ್ಷವಿಡೀ ನೀರಿನ ಲಭ್ಯತೆಗೆ ಕ್ರಮ

ಮಾಯಕೊಂಡ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್

ಮಾಯಕೊಂಡ, ಏ. 17- ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಇನ್ನಷ್ಟು ಬಲಗೊಳಿಸಿ ವರ್ಷವಿಡೀ ಕೆರೆಗಳಲ್ಲಿ ನೀರಿನ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕಾಗಿದೆ ಎಂದು  ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಲವರ್ತಿ, ಕೆಂಚಮ್ಮನಹಳ್ಳಿ, ಉಳುಪಿನ ಕಟ್ಟೆ, ಹೊಸಹಳ್ಳಿ, ನೀರ್ಥಡಿ, ಲಕ್ಕಮುತ್ತೇನಹಳ್ಳಿ, ಹೆಬ್ಬಾಳು ಮತ್ತಿತರೆ ಗ್ರಾಮಗಳಲ್ಲಿ ಇಂದು ಪಕ್ಷದ ಮುಖಂಡರು, ಕಾರ್ಯಕರ್ತರು ಮತು ಅಪಾರ ಅಭಿಮಾನಿಗಳು ಜೊತೆಗೂಡಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ನೀರಿನ ಅವಶ್ಯಕತೆ ಅಧಿಕವಾಗಿದೆ. ಅದರಲ್ಲಿಯೂ ಕಳೆದ ಹಿಂಗಾರು-ಮುಂಗಾರು ಮಳೆಗಳು ವಿಫಲವಾದ ಕಾರಣ ಬರಗಾಲ ತಲೆದೋರಿದ್ದು, ರೈತರು ಕಷ್ಟಕ್ಕೀಡಾಗಿದ್ದಾರೆ.  ಅಲ್ಲದೆ ಜನ- ಜಾನುವಾರುಗಳಿಗೂ ಸಹ  ಕುಡಿಯವ ನೀರಿನ ಸಮಸ್ಯೆ ಉಲ್ಭಣಿಸಿದೆ ಹಾಗಾಗಿ ನೀರಿನ ಸಂಗ್ರಹ ಅತ್ಯವಶ್ಯವಾಗಿದೆ. ಈ ದಿಸೆಯಲ್ಲಿ ಕೆರೆ ತುಂಬಿಸಿ ಕೊಳ್ಳುವ ಯೋಜನೆಯ ಕೆಲಸ ವೇಗ ಪಡೆದುಕೊಳ್ಳಬೇಕಾಗಿದೆ. ಕೆರೆಗಳಲ್ಲಿ ವರ್ಷವಿಡೀ ನೀರು ಲಭ್ಯವಿರುವಂತೆ ನೋಡಿ ಕೊಳ್ಳಬೇಕಾಗಿದೆ. 

ಅಲ್ಲದೆ ಜಿಲ್ಲೆಯಲ್ಲಿ ನೀರಾವರಿ ಪ್ರದೇಶವೂ ಹೆಚ್ಚು ವಿಸ್ತೀರ್ಣವಾಗಬೇಕಿದ್ದು, ಈ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಗಮನಹರಿಸಿದ್ದಾರೆ. 

ಕ್ಷೇತ್ರದ ಜನತೆ ಈ ಚುನಾವಣೆಯಲ್ಲಿ ನನ್ನನ್ನು ಬಹುಮತ ನೀಡಿ ಆಶೀರ್ವದಿಸಿದರೆ ಕೇಂದ್ರದಿಂದ ಆಗುವ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಲು ಶ್ರಮಿಸುವುದಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಭರವಸೆ ನೀಡಿದರು.

ಮತ ಯಾಚನೆಗಾಗಿ ಆಗಮಿಸಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. 

ಶರಬತ್ತು, ಮಜ್ಜಿಗೆ ನೀಡಿ ಸತ್ಕರಿಸಿದರು. ಮಹಿಳೆಯರು ಕಳಸದಾರತಿ ಬೆಳಗಿದರು, ಶಾಲು ಹೊದಿಸಿ ಸನ್ಮಾನಿಸಿದರು. ಅಭಿಮಾನಿಯೊಬ್ಬ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿನ ನೆನಪಿನ ಕಾಣಿಕೆ ನೀಡಿದರು.      

ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ನಾಗರಾಜ್, ಅಣಜಿ ಚಂದ್ರಣ್ಣ, ಗುರುಸ್ವಾಮಿ, ಕೊಟ್ರೇಶ್‍ನಾಯ್ಕ್ ಸೇರಿದಂತೆ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

error: Content is protected !!