ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು

ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು

ತ್ಯಾವಣಗಿ : ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ದಾವಣಗೆರೆ, ಏ. 15- ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗಾಯಿತ್ರಿ ಸಿದ್ಧೇಶ್ವರ ಅವರು 1.5 ರಿಂದ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ಯಾವಣಗಿ ಗ್ರಾಮದಲ್ಲಿ  ಇಂದು ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಈಗಾಗಲೇ 18-20 ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿ, ಇಂದು ದಾವಣಗೆರೆಗೆ ಬಂದಿದ್ಧೇನೆ. ಎಲ್ಲೆಡೆಯೂ, ಎಲ್ಲರ ಬಾಯಿಯಲ್ಲಿ ಮೋದಿ ಮೋದಿ ಎಂಬ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್‌ಗೆ ತಾಕತ್ತಿದ್ದರೆ ತಾವು ಗೆಲ್ಲುವ ಒಂದೆರಡು ಕ್ಷೇತ್ರದ ಹೆಸರು ಹೇಳಲಿ ಎಂದು ಸವಾಲು ಹಾಕಿದರು.

ದೇಶದಲ್ಲಿ ಕಾಂಗ್ರೆಸ್ ಮುಳುಗುವ ಹಡಗು. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಧೂಳಿಪಟವಾಗಲಿದೆ. ಕಾಂಗ್ರೆಸ್ ಇಷ್ಟು ವರ್ಷ ಹಣ, ಹೆಂಡ, ತೋಳ್ಬಲ, ಅಧಿಕಾರ ಬಲದಿಂದ ಜಾತಿಯ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರುತ್ತಿದೆ. ಆದರೆ, ಈಗ ಕಾಂಗ್ರೆಸ್‌ನ ಆಟ ನಡೆಯುವುದಿಲ್ಲ. ಜನ ಬುದ್ಧಿವಂತರಾಗಿದ್ದಾರೆ. ಮೋದಿ ಅವರ ಆಡಳಿತ ಮೆಚ್ಚಿಕೊಂಡಿದ್ದಾರೆ. ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು, ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗುವುದು ನಿಶ್ಚಿತ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಗಾಯಿತ್ರಿ ಸಿದ್ದೇಶ್ವರ ಅವರು ಇಲ್ಲಿ ಗೆಲ್ಲುವುದು, ನರೇಂದ್ರ ಮೋದಿ ಅವರ ಪ್ರಧಾನಿ ಆಗುವುದು ಅಷ್ಟೇ ಸತ್ಯ ಎಂದರು.

ನೀವೆಲ್ಲರೂ ಇಂದಿನಿಂದಲೇ ಗ್ರಾಮಗಳ ಮನೆ ಮನೆಗೂ ಹೋಗಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಬೇಕು. ಮೋದಿ ಸರ್ಕಾರ, ವಿಕಸಿತ ಭಾರತ, ವಿಕಸಿತ ದಾವಣಗೆರೆ ನೀವು ಮುನ್ನುಡಿ ಬರೀಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿ. ನಿನ್ನೆ ತಾನೆ ಅಂಬೇಡ್ಕರ್ ಜಯಂತಿ ಮಾಡಿದ್ಧೇನೆ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಕಾಂಗ್ರೆಸ್ ಎಸ್ಸಿ-ಎಸ್ಟಿ ಸಮುದಾಯದ ವಿರೋಧಿ. ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ಧಿಗೆ ಇಟ್ಟಿದ್ದ 11 ಸಾವಿರ ಕೋಟಿ ಹಣವನ್ನು ಬೇರೆಯದಕ್ಕೆ ವ್ಯಯಿಸಿ ಅವರಿಗೆ ಅನ್ಯಾಯ ಮಾಡಿದೆ ಎಂದು ಯಡಿಯೂರಪ್ಪ ದೂರಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಅವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬರತ್ತೋ ಆಗ ಬರಗಾಲವೂ ಬರುತ್ತದೆ. ಈ ಬಾರಿಯೂ ರಾಜ್ಯದಲ್ಲಿ ಬರಗಾಲ ಬಂದಿದ್ದು, ಕುಡಿವ ನೀರಿಗೂ ಹಾಹಾಕಾರ ಉಂಟಾಗಿದೆ ಎಂದರು.

ನರೇಂದ್ರ ಮೋದಿ ಅವರು ರೈತರಿಗಾಗಿ ಕಿಸಾನ್ ಸನ್ಮಾನ್ ಯೋಜನೆ ಜಾರಿಗೆ  ತಂದಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಕೇಂದ್ರ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ 6 ಸಾವಿರ ಹಾಕಿದರೆ, ನಾವು 4 ಸಾವಿರ ಸೇರಿ ಒಟ್ಟು 10 ಸಾವಿರ ಕೊಡುತ್ತಿದ್ದೇವು. ಈಗ ಕಾಂಗ್ರೆಸ್ ಸರ್ಕಾರ 4 ಸಾವಿರ ರೂಪಾಯಿ ನಿಲ್ಲಿಸಿದೆ. ಕೇಂದ್ರದ 6 ಸಾವಿರ ಮಾತ್ರ ರೈತರಿಗೆ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ ಎಂದರು.

ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ಧೇಶ್ವರ ಮಾತನಾಡಿ, ದೇಶದ 80 ಕೋಟಿ ಜನರಿಗೆ 5 ಕೆಜಿ ಉಚಿತ ಪಡಿತರ ನೀಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯ ಮೂಟೆ ಮೇಲೆ ಕಾಂಗ್ರೆಸ್ ತನ್ನ ಹೆಸರು ಹಾಕಿಕೊಳ್ಳುತ್ತಿದೆ. ನರೇಂದ್ರ ಮೋದಿ ಅವರಿಗೆ ಸಮನಾದ ನಾಯಕ ಕಾಂಗ್ರೆಸ್ನಲ್ಲಿ ಇಲ್ಲ. ನಾವು ಧೈರ್ಯದಿಂದ ಹೇಳುತ್ತೇವೆ. ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜೀ ಅಂತ. ಕಾಂಗ್ರೆಸ್ ನವರಿಗೆ ತಾಕತ್ ಇದ್ದರೆ ತಮ್ಮ ಪ್ರಧಾನಿ ಅಭ್ಯರ್ಥಿ ಹೆಸರು ಹೇಳಲಿ ಎಂದು ಸವಾಲು ಹಾಕಿದರು.

ದೇಶದಲ್ಲಿ ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಕೆಲಸಗಳು, ದಾವಣಗೆರೆಯಲ್ಲಿ ಜಿ.ಎಂ.ಸಿದ್ಧೇಶ್ವರ ತಂದಿರುವ ಯೋಜನೆಗಳನ್ನು ಗಮನಿಸಿ ಜನ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ನೀವು ನೀಡುವ ಒಂದೊಂದು ಮತ ದೇಶದ ಬದಲಾವಣೆ, ರಕ್ಷಣೆ, ವಿಶ್ವಗುರು ಮಾಡುತ್ತಿದೆ. ಮಹಿಳಾ ಸಬಲೀಕರಣ, ಯುವ ಶಕ್ತಿ ಬಲಪಡಿಸಲು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಜನರ ಆಶಯ. ನೀವು ನನ್ನ ಕಮಲದ ಗುರುತಿಗೆ ಮತ ಹಾಕುವ ಮೂಲಕ ನನ್ನನ್ನು ಗೆಲ್ಲಿಸಿ, ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ನಾವು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಮೈತ್ರಿ ಧರ್ಮ ಪಾಲಿಸಬೇಕು. ಗಾಯಿತ್ರಿ ಸಿದ್ಧೇಶ್ವರ್ ಅವರ ಗೆಲುವಿಗೆ ನಾವು ಶ್ರಮಿಸೋಣ ಎಂದು ಜೆಡಿಎಸ್ ಮುಖಂಡ ತೇಜಸ್ವಿ ಪಟೇಲ್ ಕರೆ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ಎಂಎಲ್ಸಿ ರವಿಕುಮಾರ್, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಬಸವರಾಜ ನಾಯ್ಕ, ಎಸ್.ವಿ.ರಾಮಚಂದ್ರ, ಎಚ್.ಎಸ್.ಶಿವಶಂಕರ್, ಎಚ್.ಪಿ.ರಾಜೇಶ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾಜ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಜೆಡಿಎಸ್ ಮುಖಂಡ ತೇಜಸ್ವಿ ಪಟೇಲ್, ಹಾರಿಕಾ ಮಂಜುನಾಥ್, ಮಾಡಳ್ ಮಲ್ಲಿಕಾರ್ಜುನ್, ಮಹಿಮಾ ಜೆ. ಪಟೇಲ್, ದೇವೇಂದ್ರಪ್ಪ, ಶಿವಾನಂದಮೂರ್ತಿ, ಎಸ್. ಶ್ಯಾಮ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಮತ್ತು ಇತರರು ಉಪಸ್ಥಿತರಿಸದ್ದರು.

error: Content is protected !!