ಸಿದ್ದೇಶ್ವರ ವಿಶ್ವಾಸ
ದಾವಣಗೆರೆ, ಏ.15 – ಕೇಂದ್ರದ ಮೋದಿ ಸರ್ಕಾರದ ಸಾಧನೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸಾಧನೆ ಹಾಗೂ ತಾವು ಸಂಸದರಾಗಿ ಮಾಡಿರುವ ಸಾಧನೆಗಳಿಂದಾಗಿ ಬಿಜೆಪಿಗೆ ಜಯ ಸಿಗಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ಗಾಯತ್ರಿ ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆರು ಬಾರಿ ಚುನಾವಣೆ ಗೆದ್ದಿದ್ದೇವೆ. ಈ ಬಾರಿಯ ಚುನಾವಣೆಯನ್ನೂ ಸರಳ ಹಾಗೂ ಸುಲಲಿತವಾಗಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬರುವ ಏ.19ರಂದು ಇನ್ನೊಂದು ಸೆಟ್ ನಾಮಪತ್ರವನ್ನು ಮೆರವಣಿಗೆ ಮೂಲಕ ಸಲ್ಲಿಸಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಬೈರತಿ ಬಸವರಾಜ್, ಮುರುಗೇಶ್ ನಿರಾನಿ, ಜನಾರ್ದನ ರೆಡ್ಡಿ, ಶ್ರೀರಾಮುಲು, ಮಾಧುಸ್ವಾಮಿ ಹಾಗೂ ನಟಿ ಶ್ರುತಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಿದ್ದೇಶ್ವರ ಇದೇ ಸಂದರ್ಭದಲ್ಲಿ ಹೇಳಿದರು.
ಗಾಯತ್ರಿ ಸಿದ್ದೇಶ್ವರ ಆಸ್ತಿ ಮೌಲ್ಯ 32.84 ಕೋಟಿ ರೂ.
ಬಿಜೆಪಿ ಅಭ್ಯರ್ಥಿ ಯಾಗಿ ಗಾಯತ್ರಿ ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಸಿ ದ್ದು, ಅವರ ಆಸ್ತಿಗಳ ಒಟ್ಟು ಮೌಲ್ಯ 32.84 ಕೋಟಿ ರೂ. ಆಗಿದೆ. ಗಾಯತ್ರಿ ಅವರು 6.11 ಕೋಟಿ ರೂ.ಗಳ ಚರಾಸ್ತಿ ಹಾಗೂ 26.73 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಬ್ಯಾಂಕ್ ಇತ್ಯಾದಿಗಳಲ್ಲಿ 48.44 ಲಕ್ಷ ರೂ.ಗಳ ಠೇವಣಿ, 51.48 ಲಕ್ಷ ರೂ.ಗಳ ಬಾಂಡ್ ಇತ್ಯಾದಿ, 22.34 ಲಕ್ಷ ರೂ.ಗಳ ಹೂಡಿಕೆ, 2.09 ಕೋಟಿ ರೂ.ಗಳ ವೈಯಕ್ತಿಕ ಸಾಲ ನೀಡಿದ್ದಾರೆ ಮತ್ತು 2.38 ಕೋಟಿ ರೂ.ಗಳ ಆಭರಣಗಳನ್ನು ಹೊಂದಿದ್ದಾರೆ.
14.70 ಲಕ್ಷ ರೂ.ಗಳ ಕೃಷಿ ಜಮೀನು, 5.08 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, 21.50 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. 5.89 ಲಕ್ಷ ರೂ.ಗಳ ಸಾಲವನ್ನೂ ಹೊಂದಿದ್ದಾರೆ.
ಅವರು ಶಿವಮೊಗ್ಗದ ಕಸ್ತೂರಬಾ ಬಾಲಕಿಯರ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.
ಹಿಂದೂ ಅವಿಭಕ್ತ ಕುಟುಂಬದಡಿ ತಮ್ಮ ಪತಿಯೊಂದಿಗೆ ಜಂಟಿಯಾಗಿ 8.33 ಕೋಟಿ ರೂ. ಮೌಲ್ಯದ ಆಸ್ತಿಯನ್ನೂ ಹೊಂದಿದ್ದಾರೆ. ಇದರಲ್ಲಿ 4.87 ಕೋಟಿ ರೂ. ಚರಾಸ್ತಿ ಹಾಗೂ 3.46 ಕೋಟಿ ರೂ. ಸ್ಥಿರಾಸ್ತಿಯಾಗಿದೆ.
ಅವರ ಪತಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಆಸ್ತಿ ಮೌಲ್ಯ 26.62 ಕೋಟಿ ರೂ. ಆಗಿದೆ. ಅವರು 9.88 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 16.74 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. 1 ಕೋಟಿ ರೂ. ಮೌಲ್ಯದ ಸಾಲವನ್ನೂ ಹೊಂದಿದ್ದಾರೆ.
ಪಾಲಿಕೆ ಸದಸ್ಯರು ಹೋಗಿದ್ದಾರೆ, ಮತದಾರರು ನಮ್ಮೊಂದಿಗಿದ್ದಾರೆ
ಜಗಳೂರಿನ ಮಾಜಿ ಶಾಸಕ ಗುರುಸಿದ್ದನಗೌಡ ಹಾಗೂ ಅವರ ಪುತ್ರ ಡಾ. ಟಿ.ಜಿ. ರವಿಕುಮಾರ್ ಅವರು ಬಿಜೆಪಿ ತೊರೆದಿರುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದ ಸಂಸದ ಜಿ.ಎಂ.ಸಿದ್ದೇಶ್ವರ, ಅವರು ನನ್ನ ಬಿಟ್ಟು ಹನ್ನೆರಡು ವರ್ಷಗಳೇ ಆಗಿವೆ ಎಂದಿದ್ದಾರೆ.
ನಾಲ್ವರು ಪಾಲಿಕೆ ಸದಸ್ಯರು ಕಾಂಗ್ರೆಸ್ ಸೇರಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಾಲಿಕೆ ಸದಸ್ಯರು ಮಾತ್ರ ಹೋಗಿದ್ದಾರೆ. ಮತದಾರರು ಹೋಗುವುದಿಲ್ಲ. ಅವರ ಪಕ್ಷಾಂತರದಿಂದ ಜನ ಅಸಮಾಧಾನಗೊಂಡಿದ್ದಾರೆ. ಇನ್ನೂ ಹೆಚ್ಚು ಮತಗಳು ಬಿಜೆಪಿಗೆ ಸಿಗಲಿವೆ ಎಂದು ಸಿದ್ದೇಶ್ವರ ಹೇಳಿದರು.
ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಜನರ ಸ್ಪಂದನೆ ಚೆನ್ನಾಗಿದೆ. ಗೆಲುವಿನಲ್ಲಿ ಯಾವುದೇ ಸಂದೇಹ ಇಲ್ಲ. ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ತೆರೆ ಮುಂದೆ ಬಂದಿದ್ದೇನೆ. ಜನರ ಬೆಂಬಲ ಇನ್ನೂ ಹೆಚ್ಚಾಗಿದೆ. ಇನ್ನೂ ಉತ್ತಮ ಕೆಲಸ ಮಾಡುವ ವಿಶ್ವಾಸ ಜನರಲ್ಲಿದೆ ಎಂದು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಪುತ್ರಿ ಜಿ.ಎಸ್.ಅಶ್ವಿನಿ, ಜಿ.ಎಲ್.ರಾಜೀವ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಜೊತೆಯಲ್ಲಿ ತೆರಳಿ ಗಾಯತ್ರಿ ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಸಿದರು.