ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿ ಮತ ಪ್ರಚಾರದಲ್ಲಿ ಗಾಯತ್ರಿ ಸಿದ್ದೇಶ್ವರ್
ಹೊನ್ನಾಳಿ, ಏ.11- ತಾಲ್ಲೂಕಿನ ತುಂಗಾ ನಾಲಾ ಆಧುನೀಕರಣಕ್ಕೆ 343 ಕೋಟಿ ರೂಪಾಯಿ ಅನುದಾನ ನೀಡಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಂಪುರ-ಗೋವಿನಕೋವಿ ನಡುವಿನ ತುಂಗ ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಹಾಗೂ ಹೊನ್ನಾಳಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಭರವಸೆ ನೀಡಿದರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಹೊನ್ನಾಳಿ-ನ್ಯಾಮತಿ ತಾಲ್ಲೂಕು ಅಭಿವೃದ್ಧಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಸಹೋದರ ಎಂ.ಪಿ.ರೇಣುಕಾಚಾರ್ಯ ಅವರು ಕ್ಷೇತ್ರದ ಕೆಲಸ, ಕಾರ್ಯಗಳ ಪಟ್ಟಿಯನ್ನು ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ನೀಡಿ ಕೇಂದ್ರದಿಂದ ಅನುದಾನ ತರಿಸುವಲ್ಲಿ ಯಶಸ್ವಿಯಾದ ಪರಿಣಾಮ ಇಂದು ತುಂಗಾ ನಾಲೆ ಆಧುನೀಕರಣ ಕಾಮಗಾರಿ ನಡೆದಿದೆ ಎಂದರು.
ರಾಂಪುರ – ಗೋವಿನಕೋವಿ ನಡುವೆ ಇರುವ ತುಂಗ ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಬೇಡಿಕೆ. ಸೇತುವೆ ನಿರ್ಮಾಣಕ್ಕೆ ಈಗಾಗಲೇ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯಲಾಗಿದ್ದು, ತಾತ್ವಿಕ ಅನುಮೋದನೆ ಪಡೆಯಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಹೊನ್ನಾಳಿ-ಶಿವಮೊಗ್ಗ ರಸ್ತೆ ಅಗಲೀಕರಣ ಮಾಡಬೇಕು ಅನ್ನೋ ಬೇಡಿಕೆಯೂ ಇದೆ. ಮರಿಯಮ್ಮನಹಳ್ಳಿ-ಹರಪನಹಳ್ಳಿ,ಹರಿಹರ-ಹೊನ್ನಾಳಿ, ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿ ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದರು. ಪ್ರಧಾನ ಮಂತ್ರಿ ಅಮೃತ್ ಸರೋವರ್ ಯೋಜನೆ ಅಡಿ ಹೊನ್ನಾಳಿ ತಾಲೂಕಿನ 29 ಕರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಎಚ್.ಕಡದಕಟ್ಟೆ ಗ್ರಾಮದ ಸಮೀಪ 2.17 ಕೋಟಿ ವೆಚ್ಚದಲ್ಲಿ ಸಮಗ್ರ ಕೃಷಿ ಪದ್ಧತಿ ಉತ್ತೇಜಿಸಲು ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ತೆರೆಯಲಾಗಿದೆ. ಹೊನ್ನಾಳಿ ಪಟ್ಟಣದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಘನ ತ್ಯಾಜ್ಯ ವಸ್ತು ನಿರ್ವಹಣೆಗೆ 5.73 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ನ್ಯಾಮತಿ ಪಟ್ಟಣ ಪಂಚಾಯಿತಿಗೆ 15ನೇ ಹಣಕಾಸು ಯೋಜನೆಯಲ್ಲಿ 56 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ದೇಶ ಸರ್ವಾಂಗೀಣ ಅಭಿವೃದ್ಧಿ ಹೊಂದುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೂ ಅಭಿವೃದ್ಧಿ ಪರ್ವ ಆರಂಭವಾಗಿದೆ. ಕಾಂಗ್ರೆಸ್ 65 ವರ್ಷಗಳ ಕಾಲ ಮಾಡದ ಅಭಿವೃದ್ಧಿಯನ್ನು ಮೋದಿ ಜೀ ಅವರು ಕೇವಲ 10 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆದರೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತದೆ. ಭಾರತ ವಿಶ್ವಗುರು ಆಗುತ್ತದೆ. ನೀವು ನಿಮ್ಮ ಅಮೂಲ್ಯ ಮತವನ್ನು ನನಗೆ ನೀಡುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಕರೆ ನೀಡಿದರು.
ಮಾಸಡಿ ಗ್ರಾಮದಲ್ಲಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಇದೇ ವೇಳೆ ಕೆಲ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.