ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ

ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾಮಪತ್ರಕ್ಕೆ ವ್ಯವಸ್ಥೆ

ದಾವಣಗೆರೆ, ಏ. 10 – ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 12 ರ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಕರ್ತವ್ಯ ದಿನಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿಗಳ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನ ಎಂದರು.

ದಾವಣಗೆರೆ ಲೋಕಸಭೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,946 ಮತಗಟ್ಟೆ ಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 387 ಕ್ರಿಟಿಕಲ್ ಹಾಗೂ 11 ವಲ್ನೇರಬಲ್ ಮತಗಟ್ಟೆ ಗಳಿವೆ. ಶೇ.50ರಷ್ಟು ಮತಗಟ್ಟೆಗಳ ವೆಬ್‌ಕಾಸ್ಟಿಂಗ್ ಮಾಡಲಾಗುವುದು ಎಂದವರು ಹೇಳಿದರು.

ಏಪ್ರಿಲ್ 10 ರ ವರೆಗೆ 8,50,393 ಪುರುಷ, 8,55,079 ಮಹಿಳೆ, 135 ಇತರೆ ಹಾಗೂ 562 ಸೇವಾ ಮತದಾರರು ಸೇರಿ 17,06,169 ಒಟ್ಟು ಮತದಾರರಿದ್ದಾರೆ. ಏ.9 ರ ವರೆಗೆ ಸೇರ್ಪಡೆ ಹಾಗೂ ತಿದ್ದುಪಡಿಯ 42,664 ಅರ್ಜಿಗಳು ಸ್ವೀಕೃತವಾಗಿದ್ದು ಪರಿಶೀಲನೆಯ ಹಂತದಲ್ಲಿವೆ ಎಂದು ವಿವರ ನೀಡಿದರು. 

1.81 ಕೋಟಿ ರೂ. ನಗದು, ವಸ್ತು ವಶ : ಚುನಾವಣಾ ನೀತಿ ಸಂಹಿತೆ ಜಾರಿ ನಂತರ ಒಟ್ಟು ರೂ. 1,81,26,926 ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಎಫ್‍ಎಸ್‍ಟಿಯಿಂದ ರೂ. 75,62,100 ನಗದು ವಶ ಹಾಗೂ ಎಸ್‍ಎಸ್‍ಟಿಯಿಂದ ರೂ. 91,39,836 ನಗದು ವಶವಾಗಿದೆ. 

ಎಫ್.ಎಸ್.ಟಿ.ಯಿಂದ 400 ಟವರ್ ಫ್ಯಾನ್, 56.36 ಗ್ರಾಂ ಚಿನ್ನ, 579 ಸೀರೆಗಳನ್ನು ವಶಪಡಿಸಿಕೊಂಡಿದ್ದು ಇದರ ಮೌಲ್ಯ ರೂ.8,26 ,530 ಗಳಾಗಿರುತ್ತದೆ. ಚೆಕ್‍ಪೋಸ್ಟ್‍ಗಳಲ್ಲಿ 17 ಮೊಬೈಲ್, 300 ಜೀನ್ಸ್ ಪ್ಯಾಂಟ್ ಸೇರಿ ರೂ. 1,57,000 ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಇದಲ್ಲದೇ ಅಬಕಾರಿ ಇಲಾಖೆ ರೂ.2,94,432 ಮೌಲ್ಯದ 709.145 ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಪೊಲೀಸ್ ಇಲಾಖೆ ಯಿಂದ ರೂ.1,47,028 ಮೌಲ್ಯದ 372.184 ಲೀಟರ್ ಮದ್ಯ ವಶಪಡಿಸಿಕೊಂಡಿದ್ದು, ಇಲ್ಲಿಯ ವರೆಗೆ 290 ಎಫ್‍ಐಆರ್ ದಾಖಲಿಸಲಾಗಿದೆ.

471 ದೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿವಿಜಿಲ್ ಆಪ್ ಮೂಲಕ 471 ದೂರುಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಬಹುತೇಕ ನಾಮಫಲಕಗಳಿಗೆ ಸಂಬಂಧಿಸಿದವು. 1950 ಸಂಖ್ಯೆಯ ಉಚಿತ ಸಹಾಯವಾಣಿಗೆ 345 ಕರೆಗಳು ಬಂದಿದ್ದು, ಬಹುತೇಕವು ಮಾಹಿತಿ ಕೇಳುವ ಕರೆಗಳಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಎಂಟು ಗಡೀಪಾರು : ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸುವುದಕ್ಕೆ ಬೆದರಿಕೆ ಒಡ್ಡಬಹುದಾದ 1,300 ರೌಡಿಶೀಟರ್‌ಗಳ ವರದಿ ರೂಪಿಸಲಾಗಿದೆ. 24 ಜನರನ್ನು ಗಡೀಪಾರಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಈಗಾಗಲೇ 8 ಜನರ ಗಡೀಪಾರು ಮಾಡಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿನ ದ್ವೇಷ ಭಾಷಣ ಸೇರಿದಂತೆ ಶಾಂತಿ ಕದಡುವ ಪೋಸ್ಟ್ ಹಾಕುವವರ ಮೇಲೆ ನಿಗಾ ವಹಿಸಲಾಗಿದೆ ಎಂದರು.

ಕ್ಯೂ.ಆರ್. ಕೋಡ್ ಸ್ಲಿಪ್ : ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಪ್ರತಿ ಮನೆಗೆ ಮತದಾರರ ಚೀಟಿ, ಮತಗಟ್ಟೆಯ ವಿವರ ಹಾಗೂ ಜಿಲ್ಲಾಧಿಕಾರಿಗಳ ಮನವಿ ಪತ್ರ ನೀಡಲಾಗುವುದು. ಕ್ಯೂ.ಆರ್. ಕೋಡ್ ಇರುವ ವೋಟರ್ ಸ್ಲಿಪ್ ನೀಡಲಿದ್ದು, ಇದರಿಂದ ಮತಗಟ್ಟೆ ಬಗ್ಗೆ ತಿಳಿಯಲು ಅನುಕೂಲವಾಗಲಿದೆ ಎಂದರು.

ಏ.28ರಂದು ನಮ್ಮ ನಡೆ ಮತಗಟ್ಟೆ ಕಡೆ ಎಂಬ ಕಾರ್ಯಕ್ರಮ ನಡೆಸುವ ಮೂಲಕ ಮತಗಟ್ಟೆ ಎಲ್ಲಿದೆ ಎಂಬುದನ್ನು ಪರಿಚಯಿಸಲಾಗುವುದು ಎಂದು ಹೇಳಿದರು.

error: Content is protected !!