ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಕೆ

ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಕೆ

ದಾವಣಗೆರೆ, ಏ. 10- ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಂತರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನ ಕೈಗೊಂಡಿದ್ದು, ನಾಡಿದ್ದು ದಿನಾಂಕ 12 ರಂದು ಮೊದಲ ಹಾಗೂ 18 ರಂದು ಬೆಂಬಲಿಗರೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ಜಿ.ಬಿ. ವಿನಯ್ ಕುಮಾರ್ ತಿಳಿಸಿದ್ದಾರೆ.

ನಗರದ ಎಸ್.ಎಸ್.ಬಡಾವಣೆಯಲ್ಲಿರುವ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಜನರ ಒತ್ತಾಸೆ ಮೇರೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂತೆಗೆಯುವ ಪ್ರಶ್ನೆಯೇ ಇಲ್ಲ. ಸುಮಾರು ಲಕ್ಷಾಂತರ ಮತದಾರರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರೆಲ್ಲರೂ ನನ್ನನ್ನು ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಒತ್ತಡ ಹಾಕಿದ್ದಾರೆ. ಅವರ ಆಶಯದ ಮೇರೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದರು.

ಜಿಲ್ಲೆಯ ಎರಡು ಪ್ರಬಲ ಕುಟುಂಬಗಳ ರಾಜಕಾರಣದ ವಿರುದ್ಧ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಶಾಮನೂರು ಕುಟುಂಬದ ಕೈಯಲ್ಲಿ `ಕಾಂಗ್ರೆಸ್’ ಮತ್ತು ಸಿದ್ದೇಶ್ವರ ಕುಟುಂಬದ ಕೈಯಲ್ಲಿ `ಬಿಜೆಪಿ’ ಇದೆ. ಇದೇ ದಿನಾಂಕ 24 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದ್ದರೂ ಸಹ ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಹೇಳಿದರು.

ನನ್ನ ಸ್ಪರ್ಧೆಯಿಂದ ಅಹಿಂದ ಮತಗಳು ಛಿದ್ರವಾಗುವ ಸಾಧ್ಯತೆ ಇದ್ದು, ಅಹಿಂದ ವರ್ಗಕ್ಕೆ ಶಾಮನೂರು ಕುಟುಂಬದಿಂದ ಅನ್ಯಾಯವಾಗಿದೆ. ಈ ಕಾರಣದಿಂದಾಗಿ ಅಹಿಂದ ಮುಖಂಡರು ನನಗೆ ಬೆಂಬಲ ನೀಡಲಿದ್ದಾರೆಂದು ಮಾಹಿತಿ ನೀಡಿದರು.

ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಂಧಾನ ನಡೆಸಿರುವುದು ಸರಿಯಷ್ಟೇ. ನಾನು ಎರಡು ದಿನಗಳ ಕಾಲವಕಾಶ ಕೇಳಿ ನಿರ್ಧಾರ ತಿಳಿಸುತ್ತೇನೆ ಎಂದಿದ್ದೆ. ಜನಾಭಿಪ್ರಾಯದಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಂತಿಮ ತೀರ್ಮಾನ ಕೈಗೊಂಡಿದ್ದೇನೆ ಎಂದು ಹೇಳಿದರು.

ಈಗಾಗಲೇ ಈ ಎರಡೂ ಕುಟುಂಬಗಳ ರಾಜಕಾರಣದ ವಿರುದ್ಧ ಜನ ಬೇಸತ್ತಿದ್ದು, ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಬಗ್ಗೆ ಬಹಳಷ್ಟು ಜನರಿಗೆ ಅಸಮಾಧಾನವಿದೆ. ಹಾಗಾಗಿ ನನ್ನನ್ನು ಬೆಂಬಲಿಸುತ್ತಾರೆಂಬ ದೃಢ ವಿಶ್ವಾಸ ನನ್ನದಾಗಿದೆ ಎಂದು ಹೇಳಿದರು.

error: Content is protected !!