ದಾವಣಗೆರೆ, ಏ.7- ಸಹಕಾರಿ ಕ್ಷೇತ್ರದ ಧುರೀಣರಿಂದ ಪಕ್ಷದ ಗೆಲುವು ಸಾಧ್ಯ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪ್ರಭಾ ಅವರನ್ನು ಗೆಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮನವಿ ಮಾಡಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ನಡೆದ `ಸಮಸ್ತ ಸಹಕಾರಿಗಳ ಬೆಂಬಲ’ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಡಿಡಿಸಿಸಿ ಬ್ಯಾಂಕ್ ಉಳಿಸಿಕೊ ಳ್ಳಲು ಕಠಿಣ ಪರಿಶ್ರಮ ಪಟ್ಟಿದ್ದೇವೆ. ಇಲ್ಲಿನ ರೈತ ರಿಗೆ ಸೊಸೈಟಿಯ ಮೂಲಕ ಇನ್ನೂ ಹೆಚ್ಚಿನ ಅನು ಕೂಲ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟಿಗಳನ್ನು ಜನರಿಗೆ ಅಚ್ಚುಕಟ್ಟಾಗಿ ತಲುಪಿಸಿದ್ದರಿಂದ ನಮಗೆ ಮತ ಕೇಳಲು ಧೈರ್ಯವಿದೆ. ವಿಧಾನಸಭಾ ಚುನಾವಣೆ ಯಲ್ಲಿ ನೀಡಿದ ಬೆಂಬಲದಂತೆ, ಲೋಕಸಭಾ ಚುನಾವಣೆಯಲ್ಲೂ ಬೆಂಬಲ ನೀಡಿ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಬೂತ್ ಮಟ್ಟದಲ್ಲಿ ಸಹಕಾರಿ ಕ್ಷೇತ್ರದವರು, ಮಹಿಳಾ ಮತ್ತು ಯುವಕರ ಮತಗಳನ್ನು ಹೆಚ್ಚಿನ ಪ್ರಮಾಣ ದಲ್ಲಿ ಕಾಂಗ್ರೆಸಿಗೆ ಹಾಕಿಸಬೇಕು ಎಂದರು.
ಸಹಕಾರಿ ಕ್ಷೇತ್ರ ಹೆಮ್ಮರವಾಗಿ ಬೆಳೆಯಲು ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ಹಿಂದೆ ರೈತರ 72 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡುವ ಮೂಲಕ ಕಾಂಗ್ರೆಸ್ ರೈತ ಸ್ನೇಹಿ ಸರ್ಕಾರವಾಗಿದೆ.
– ಕೆ.ಎಸ್.ಬಸವಂತಪ್ಪ, ಶಾಸಕ
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಂವಿಧಾನ ಉಳಿಯಬೇಕೆಂದರೆ ಮೋದಿ ಸೋಲಿಸಬೇಕು. ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸಲು ಬಿಜೆಪಿಯವರು ಸಂಚು ನಡೆಸಿದ್ದಾರೆ. ಇದನ್ನು ತಪ್ಪಿಸಲು ಕಾಂಗ್ರೆಸ್ಗೆ ಮತ ಹಾಕುವಂತೆ ಹೇಳಿದರು.
ನಮ್ಮ ಅಭ್ಯರ್ಥಿಗೆ ಅನ್ಯ ಭಾಷಾಜ್ಞಾನವಿದೆ, ಇಲ್ಲಿನ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸಿ ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವ ಧೈರ್ಯ ಅವರಿಗಿದೆ. ಆದ್ದರಿಂದ ಬಹುಮತಗಳಿಂದ ಪ್ರಭಾ ಅವರನ್ನು ಗೆಲ್ಲಿಸಿ ಎಂದರು.
ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಬಿಜೆಪಿಯೂ ರೈತ ವಿರೋಧಿ ಸರ್ಕಾರವಾಗಿದೆ. ದೇಶದ ಬೆನ್ನೆಲಬು ಆದ ರೈತನ ಉಳಿವಿಗಾಗಿ ಕಾಂಗ್ರೆಸ್ಸನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ದೇಶದ ಎಲ್ಲಾ ವರ್ಗದವರ ಪರವಾಗಿ ಕಾಂಗ್ರೆಸ್ ಕಾರ್ಯ ನಿರ್ವಹಿಸುತ್ತಿದೆ ಎಂದರು.
ರೈತರಿಗೊಸ್ಕರ ಸಹಕಾರ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಕಾರ್ಯ ನಡಿಯುತ್ತಿದೆ. ನ್ಯಾಯಬೆಲೆ ಅಂಗಡಿಯವರು, ಹಳ್ಳಿಯಲ್ಲಿನ ಮಹಿಳೆಯರಿಗೆ ಕಾಂಗ್ರೆಸ್ಗೆ ಮತ ಹಾಕುವಂತೆ ಮನವರಿಕೆ ಮಾಡಲು ತಿಳಿಸಿದರು.
ಡಿಡಿಸಿಸಿ ಬ್ಯಾಂಕ್ನ ಹಿರಿಯ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಪ್ರಾಸ್ತಾವಿಕ ಮಾತನಾಡಿದರು.
ಮಾಜಿ ಶಾಸಕ ಎಸ್. ರಾಮಪ್ಪ, ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ವಿಶ್ವನಾಥ್, ಶಿವ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಐಗೂರು ಸಿ. ಚಂದ್ರಶೇಖರ್, ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ್, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಿ.ಹೆಚ್. ಪರಶುರಾಮಪ್ಪ, ಆರ್.ಜಿ. ಶ್ರೀನಿವಾಸ್ ಮೂರ್ತಿ, ಜಿ. ಮಂಜುನಾಥ್ ಪಾಟೀಲ್, ಹನಗವಾಡಿ ಕುಮಾರ್ ಮತ್ತು ಪಕ್ಷದ ಮುಖಂಡರು ಇದ್ದರು.