ಶಿವಶರಣರ ಕಲ್ಯಾಣದ ಬೆಳಕು ಆರದಂತೆ ನೋಡಿಕೊಳ್ಳಬೇಕು

ಶಿವಶರಣರ ಕಲ್ಯಾಣದ ಬೆಳಕು ಆರದಂತೆ ನೋಡಿಕೊಳ್ಳಬೇಕು

ದೊಣೆಹಳ್ಳಿಯಲ್ಲಿನ ಶರಣ ತತ್ವ ಚಿಂತನಾ ಗೋಷ್ಠಿಯಲ್ಲಿ ಲೋಕೇಶ್ ಅಗಸನಕಟ್ಟೆ

ಜಗಳೂರು, ಮಾ. 26- ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರು ಹೊತ್ತಿಸಿದ ಕಲ್ಯಾಣದ ದೀಪ ಆರದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಅಂದಿನ ಶರಣರು ಹಚ್ಚಿದ ದೀಪ ಎಲ್ಲಾ ಸಮಸ್ಯೆಗಳಿಗೆ ಸಿದ್ಧೌಷಧ ಆಗಿರುವಂತೆಯೇ, ಸಮಾನತೆಯ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಇದ್ದಂತೆ ಎಂಬ ಅಭಿಪ್ರಾಯ ವನ್ನು ಹೆಸರಾಂತ ಸಾಹಿತಿ ಡಾ. ಲೋಕೇಶ್‌ ಅಗಸನಕಟ್ಟೆ ವ್ಯಕ್ತಪಡಿಸಿದರು.

ಜಗಳೂರು ತಾಲ್ಲೂಕು ದೊಣೆಹಳ್ಳಿ ಶರಣ ಬಸವೇ ಶ್ವರ ದಾಸೋಹ ಮಠದಲ್ಲಿ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಮಂಗಳವಾರ ಶರಣ ತತ್ವ ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವಿಂದು ಬಿಕ್ಕಟ್ಟಿನ ದಿನಗಳಲ್ಲಿ ಬದುಕುತ್ತಿದ್ದು, ಯಾವುದು ನ್ಯಾಯ? ಯಾವುದು ಅನ್ಯಾಯ? ಯಾವುದು ಮೌಲ್ಯ? ಯಾವುದು ಅಪಮೌಲ್ಯ? ಎಂದು ತೀರ್ಮಾನಿಸ ದಂತಹ ಸಾಮಾಜಿಕ ವಾತವಾರಣದಲ್ಲಿದ್ದೇವೆ. ಇವುಗಳಿಗೆ ಸೂಕ್ತ ಉತ್ತರ ಶರಣರ ವಿಚಾರಧಾರೆಗಳಲ್ಲಿದೆ ಎಂದರು.

ಬಸವಾದಿ ಶಿವಶರಣರು ಸಮಾನತೆಯ ಸಮಾಜ ನಿರ್ಮಾಣದ ಹಾದಿಗೆ ದೊಡ್ಡ ದನಿಯಾಗಿದ್ದಾರೆ. ಹೀಗಾಗಿ ಅವರ ತತ್ವಗಳನ್ನು ನಮ್ಮೊಳಗೆ ಇಳಿಸಿಕೊಂಡು ಅನುಷ್ಠಾನಕ್ಕೆ ತರಬೇಕಿದೆ. ಅಂತಹ ಕಾರ್ಯ ಇದುವರೆಗೂ ಆಗದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭದ ಸಾನ್ನಿಧ್ಯ  ವಹಿಸಿದ್ದ ಸಂಡೂರು ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿಯವರು ಮಾತನಾಡಿ, ಬಸವಣ್ಣ ಮತ್ತವರ ಜೊತೆಗಾರ ವಿವಿಧ ವಚನಕಾರ ಶರಣರು ದುಡಿದದ್ದು ಸಮಾಜದ ಉದ್ಧಾರಕ್ಕಾಗಿಯೇ , ಅವರು ಹಾಕಿಕೊಟ್ಟ ತತ್ವದ ಹಾದಿಯಲ್ಲಿ ನಾವು ಸಾಗಬೇಕಿರುವುದೇ ಅವರಿಗೆ ನಾವು ಸಲ್ಲಿಸಲಿರುವ ದೊಡ್ಡ ಗೌರವ ಎಂದು ಹೇಳಿದರು.

ದೊಣೆಹಳ್ಳಿಯಂತಹ ಸಣ್ಣ ಹಳ್ಳಿಯಲ್ಲಿ ಐದು ದಿನಗಳ ವೈಚಾರಿಕ ದಾಸೋಹೋತ್ಸವ ನಡೆಯುತ್ತಿರುವುದು ಸೋಜಿಗವಾದರೂ, ಶ್ಲ್ಯಾಘನೀಯ ಕಾರ್ಯ. ದೊಡ್ಡ ದೊಡ್ಡ ಮಠಗಳು 5 ದಿನಗಳ ಕಾರ್ಯಕ್ರಮಗಳಿಗೆ ಅಸಾಧ್ಯವೆನ್ನುವಂತಹ ವಾತಾವರಣ ವಿರುವಾಗ,  ಈ ಊರಿನವರು ಐದೂ ದಿನ ತತ್ವ ಬದ್ಧತೆಯಲ್ಲಿ ಸಮಾವೇಶ ನಡೆಸುತ್ತಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ನಂದೀಪುರದ ಶ್ರೀ ಮಹೇಶ್ವರ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ದೊಣೆಹಳ್ಳಿಯ ಈ ಶರಣ ಕ್ಷೇತ್ರ ಮುಂದೊಂದು ದಿನ ವೈಚಾರಿಕ, ಸಾಂಸ್ಕೃತಿಕ ಬೀಜ ಕೇಂದ್ರವಾಗುವುದು ಖಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಗೇನಹಳ್ಳಿಯ ಅಶೋಕ್ ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜೆ.ಎಸ್. ವೇಣುಗೋಪಾಲರೆಡ್ಡಿ, ವೀರಶೈವ ಸಮಾಜದ ಮುಖಂಡ ಎಂ.ಎಸ್. ಪಾಟೀಲ್, ಬಳ್ಳಾರಿ ಜಿಲ್ಲಾ ಪಂಚಾ ಯತಿ ಮಾಜಿ ಸದಸ್ಯ ಕೆ.ಎಂ. ಶಶಿಧರ್ ಮಾತನಾಡಿದರು.

ರೈತ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ರೆಡ್ಡಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ. ಗುರುಮೂರ್ತಿ ಉಪಸ್ಥಿತರಿದ್ದರು.

ಉತ್ಸವದ ಮುಖ್ಯ ಸಂಚಾಲಕರೂ ಆಗಿರುವ ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಶ್ರೀ ಬಳಗದ ಆಶಾ ಕಾರ್ಯಕ್ರಮ ನಿರೂಪಿಸಿದರು. ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ಐಮುಡಿ ಶರಣಾರ್ಯರು ಸ್ವಾಗತಿಸಿದರು.

error: Content is protected !!