ದಾವಣಗೆರೆ,ಮಾ.12- ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಗುರಿ ಸಾಧಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾಶೀಲ ಪ್ರಯತ್ನಗಳ ಅವಶ್ಯಕತೆ ಇದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ನಗರದ ಯುಬಿಡಿಟಿ ಇಂಜಿ ನಿಯ ರಿಂಗ್ ಕಾಲೇಜಿನಲ್ಲಿ ಅಮೃತ ಮಹೋತ್ಸವ ಭವನ ಉದ್ಘಾಟನೆ ಮಾಡಿ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಾಂತ್ರಿಕತೆ ಪ್ರಮುಖ ಪಾತ್ರ ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂತ್ರಜ್ಞಾನಗಳನ್ನು ಉತ್ತೇಜಿಸಲು ಸಕ್ರಿಯ ಪ್ರಯತ್ನಗಳನ್ನು ಮಾಡುತ್ತಿರು ವುದು ಸಂತೋಷದ ವಿಷಯ ಎಂದು ಹೇಳಿದರು.
`ಡಿಜಿಟಲ್ ಇಂಡಿಯಾ’ ಅಭಿಯಾನದಲ್ಲಿ ನಮ್ಮ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಮೂಲಕ ತಮ್ಮ ಸಕ್ರಿಯ ಪಾತ್ರವನ್ನು ವಹಿಸುವ ಅಗತ್ಯವಿದೆ. ಪ್ರಸ್ತುತ ಉತ್ಪಾದನೆ ಮತ್ತು ಉದ್ಯಮಶೀಲತೆಯ ಯುಗವಾಗಿದೆ ಎಂದರು.
ಮುಟ್ಟುಗೋಲು ಹಾಕಿಕೊಂಡ 500 ಕೋಟಿ ರೂ. ವಾಪಾಸ್ ತರಿಸಿಕೊಡಿ: ಸಚಿವ ಎಸ್ಸೆಸ್ಸೆಂ
ಇಲ್ಲಿನ ಪ್ರಾಧ್ಯಾಪಕರ ವೇತನ ಸೇರಿದಂತೆ ಎಲ್ಲಾ ಆಡಳಿತಾತ್ಮಕ ನಿರ್ವಹಣೆಗಾಗಿ ಪ್ರತಿ ತಿಂಗಳು 4 ಕೋಟಿ ರೂ. ಬೇಕಾಗಿದ್ದು ಇದರ ನಿರ್ವಹಣೆ ಕಷ್ಟವಾಗುತ್ತಿದ್ದು ಸರ್ಕಾರದಿಂದ ವೇತನ ನೀಡಲು ಕಾಲೇಜಿನ ಕುಲಪತಿಗಳು ಮನವಿ ಮಾಡಿದ್ದಾರೆ.
ಯುಬಿಡಿಟಿ ಕಾಲೇಜನ್ನು ವಿಟಿಯುಗೆ ಹಸ್ತಾಂತರಿಸಿದಾಗ 500 ಕೋಟಿ ರೂ. ಡಿಪಾಸಿಟ್ ಇತ್ತು. ಅದನ್ನು ಆದಾಯ ತೆರಿಗೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ತೆರಿಗೆ ಇಲಾಖೆ ಕೇಂದ್ರ ಸರ್ಕಾರದ ಅಡಿ ಬರುವುದರಿಂದ ಮುಟ್ಟುಗೋಲು ಹಾಕಿಕೊಂಡ ಹಣವನ್ನು ರಾಜ್ಯಪಾಲರು, ಸಂಸದರು ತಕರಾರನ್ನು ಇತ್ಯರ್ಥ ಮಾಡಿ ವಾಪಾಸ್ ತರಿಸಿಕೊಟ್ಟರೆ ಕಾಲೇಜನ್ನು ಮತ್ತಷ್ಟು ಅಭಿವೃದ್ಧಿ ಮಾಡಬಹುದು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಸ್ವಾಮಿ ವಿವೇಕಾನಂದರ “ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ.” ಎಂಬ ಸಂದೇಶವನ್ನು ಸ್ಮರಿಸಿದ ರಾಜ್ಯಪಾಲರು, ಈ ಸಂಕಲ್ಪದಿಂದ ನಮ್ಮ ಯುವಕರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. 76 ವರ್ಷಗಳ ಸ್ವಾತಂತ್ರ್ಯದ ನಂತರದ ಪಯಣದಲ್ಲಿ ದೇಶವು ಅನೇಕ ಸವಾಲುಗಳನ್ನು ಎದುರಿಸಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಮಾತನಾಡಿ, ಯುಬಿಡಿಟಿ ಕಾಲೇಜು ಆರಂಭವಾಗಿದ್ದು 1951ರಲ್ಲಿ. ಮೈಸೂರು ಮಹರಾಜ ಜಯಚಾಮರಾಜೇಂದ್ರ ಒಡೆಯರು ಉದ್ಘಾಟಿಸಿದ್ದರು. ಇಂದಿಗೆ 75 ವರ್ಷ ಆಗುತ್ತಾ ಬಂದಿದೆ. ದಾವಣಗೆರೆಯಲ್ಲಿ ಯುಬಿಡಿಟಿ ಕಾಲೇಜು ಕಟ್ಟಲು ದೇವೇಂದ್ರಪ್ಪ, ತವನಪ್ಪ ಕುಟುಂಬ ಅಂದಿನ ಕಾಲದಲ್ಲಿ ರೂ.5 ಲಕ್ಷ ದೇಣಿಗೆ ನೀಡಿದ್ದರು. ಇಂದು ಅತ್ಯುತ್ತಮ ಕಾಲೇಜಾಗಿ ಬೆಳೆದಿದೆ. ಕಾಲೇಜು ಮೊದಲು ಮೈಸೂರು ವಿ.ವಿ. ನಂತರ ಕುವೆಂಪು ವಿವಿ ಹಾಗೂ ದಾವಣಗೆರೆ ವಿವಿ ವ್ಯಾಪ್ತಿಗೆ ಬಂದಿತು. ತಾಂತ್ರಿಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಬೇಕೆಂದು ವಿಟಿಯುಗೆ ಸೇರಿಸಲಾಗಿದ್ದು ಇದು ವಿಶ್ವವಿದ್ಯಾನಿಲಯದ ಏಕೈಕ ಕಾಲೇಜು ಆಗಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ದಾವಣಗೆರೆಯಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಯಾಗಿ ಒಂದೂವರೆ ವರ್ಷ ನಡೆದ ಇಲ್ಲಿನ ಘಟನೆಗಳನ್ನು ಸ್ಮರಿಸುತ್ತಾ ಇಂದು ಉನ್ನತ ಶಿಕ್ಷಣ ಸಚಿವನಾಗಿದ್ದೇನೆ ಎಂದು ತನ್ನ ಸಂತೋಷ ವ್ಯಕ್ತಪಡಿಸಿದರು.
ಸಂಸದ ಡಾ. ಜಿ. ಎಂ. ಸಿದ್ದೇಶ್ವರ್, ಹರಿಹರ ಶಾಸಕ ಬಿ.ಪಿ.ಹರೀಶ್ ಉಪಸ್ಥಿತರಿದ್ದರು. ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಡಿಟಿ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಪಿ. ನಾಗರಾಜಪ್ಪ ವಂದಿಸಿದರು.