ಪಾಲಿಕೆ: 17.65 ಕೋಟಿ ರೂ. ಮಿಗತೆ ಬಜೆಟ್

ಪಾಲಿಕೆ: 17.65 ಕೋಟಿ ರೂ. ಮಿಗತೆ ಬಜೆಟ್

ದಾವಣಗೆರೆ, ಫೆ. 27- ಮಹಾನಗರ ಪಾಲಿಕೆಯ 2024-25ನೇ ಸಾಲಿಗೆ 17.65 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಯಿತು.

ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮೇಯರ್ ಬಿ.ಹೆಚ್. ವಿನಾಯಕ ಅವರು ಬಜೆಟ್ ಪ್ರತಿ ಬಿಡುಗಡೆ ಮಾಡಿದ ನಂತರ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಬಜೆಟ್ ಮಂಡಿಸಿದರು.

ಅಂತರ್ಜಲ ಮರುಪೂರಣ, ಸುಸಜ್ಜಿತ ಕಸಾಯಿ ಖಾನೆ ನಿರ್ಮಾಣ, ಈರುಳ್ಳಿ ಮಾರುಕಟ್ಟೆಯಿಂದ ವಿನೋಬನಗರ 4ನೇ ಮೇನ್ ವರೆಗೆ ಮೇಲ್ಸೇತುವೆ ನಿರ್ಮಾಣ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ನೂತನ ಯೋಜನೆಗಳಾಗಿವೆ. 

ಆಸ್ತಿ ತೆರಿಗೆಯಿಂದ 35 ಕೋಟಿ ಹಾಗೂ ಆಸ್ತಿ ತೆರಿಗೆ ಮೇಲಿನ ಬಡ್ಡಿಯಿಂದಾಗಿ 6 ಕೋಟಿ ರೂ. ಸಂಗ್ರಹಣೆಯ ಗುರಿ ಹೊಂದಿರುವುದರಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಬಹುದಾದ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ದೂಡಾದಿಂದ ನಿರ್ಮಿತವಾದ ಜೆ.ಹೆಚ್. ಪಟೇಲ್ ಬಡಾವಣೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿಕೊಂಡು ಆಸ್ತಿ ತೆರಿಗೆ ವ್ಯಾಪ್ತಿ ವಿಸ್ತರಿಸಿ, ಅಂದಾಜು 35 ಕೋಟಿ ರೂ. ಆಸ್ತಿ ತೆರಿಗೆ ನಿರೀಕ್ಷಿಸಲಾಗಿದೆ.

24×7 ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ, ನೀರು ಸರಬರಾಜು ಮಾಡಿ, ಬಾಕಿ ಉಳಿದ ನೀರಿನ ಕಂದಾಯದ ವಸೂಲಾತಿಗೂ ಕ್ರಮ ವಹಿಸಿ 6 ಕೋಟಿ ರೂ. ಕಂದಾಯ ವಸೂಲಿ ಗುರಿ ಹೊಂದಲಾಗಿದೆ.

ನೆನೆಗುದಿಗೆ ಬಿದ್ದಿದ್ದ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಾಕಿ ಬಾಡಿಗೆ ಮೊತ್ತ ವಸೂಲಿ ಮಾಡಿ,  ಹರಾಜಿನಲ್ಲಿ ಹೊಸ ದರ ವಿಧಿಸಲಾಗಿದ್ದು. ಮುಂದಿನ ವರ್ಷಕ್ಕೆ 1.25 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ಉಳಿದಂತೆ ರಸ್ತೆ ಕಡಿತ, ಯುಜಿಡಿ ಶುಲ್ಕ, ಕಟ್ಟಡ ಪರವಾನಗಿ, ಖಾತಾ ವರ್ಗಾವಣೆ ಮುಂತಾ ಶುಲ್ಕಗಳಿಂದ 63 ಕೋಟಿ ರೂ. ರಾಜಸ್ವ ನಿರೀಕ್ಷಿಸಲಾಗಿದೆ.

ರಾಜ್ಯ ಸರ್ಕಾರದಿಂದ 91.38 ಕೋಟಿ ರೂ. ರಾಜ್ಯ ಹಾಗೂ ಕೇಂದ್ರದ ವಿಶೇಷ ಅನುದಾನ 103.75 ಕೋಟಿ ಹಾಗೂ ಶಾಸಕರ ವಿಶೇಷಾನು ದಾನ 50 ಕೋಟಿ ರೂ.  ನಿರೀಕ್ಷಿಸಲಾಗಿದೆ.

ಪಿಪಿಪಿ ಮಾದರಿ ಶಾಪಿಂಗ್ ಮಾಲ್: ಪಾಲಿಕೆ ಒಡೆತನದಲ್ಲಿ ಪ್ರಮುಖ ಸ್ಥಳದಲ್ಲಿರುವ ನಿವೇಶನ ಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ದಲ್ಲಿ ಸುಸಜ್ಜಿತ ಶಾಪಿಂಗ್ ಮಾಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಪಾಲಿಕೆ ಮುಂಭಾಗ ಸ್ಕೈವಾಕ್ ನಿರ್ಮಾಣಕ್ಕೆ 1 ಕೋಟಿ ರೂ. ಮೀಸಲಿಡಲಾಗಿದೆ.

ಈರುಳ್ಳಿ ಮಾರುಟ್ಟೆಯಿಂದ ವಿನೋಬ ನಗರದ 4ನೇ ಮೇನ್‌ವರೆಗೆ ಮೇಲ್ಸೇತುವೆಯನ್ನು ಈ ವರ್ಷವೇ ನಿರ್ಮಾಣ ಮಾಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಬಾತಿ ಕೆರೆ ಹಾಗೂ ಆವರಗೆರೆ ಕೆರೆ ಅಭಿವೃದ್ಧಿ, ಸೋಲಾರ್ ವಿದ್ಯುತ್ ದೀಪ ಅಳವಡಿಕೆ, ಹಸಿ ಹಾಗೂ ಒಣ ಕಸ ಬೇರ್ಪಡಿಸಲು ಪ್ಲಾಸ್ಟಿಕ್ ಬುಟ್ಟಿಗಳ ವಿತರಣೆ, ಸುಸಜ್ಜಿತ ಕಸಾಯಿ ಖಾನೆ ನಿರ್ಮಾಣದ ಕಾಮಗಾರಿಗಳು ಬಜೆಟ್‌ನಲ್ಲಿವೆ.

ಸಭೆಯಲ್ಲಿ ಉಪ ಮೇಯರ್ ಯಶೋಧ ಹೆಗ್ಗಪ್ಪ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾದ ಉದಯ ಕುಮಾರ್, ಅಬ್ದುಲ್ ಲತೀಫ್  ಹಾಗೂ ಸದಸ್ಯರುಗಳು, ಆಯುಕ್ತರಾದ ರೇಣುಕಾ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.

error: Content is protected !!