ವಿನೋಬನಗರದಲ್ಲಿ ಪಾಲಿಕೆಯಿಂದ ಇಂದು ಇ-ಆಸ್ತಿ ಪತ್ರ ನೀಡುವ ಕಾರ್ಯಕ್ರಮ
ದಾವಣಗೆರೆ, ಫೆ. 12 – ಮಹಾನಗರ ಪಾಲಿಕೆ ವತಿಯಿಂದ ಇ-ಆಸ್ತಿ ಅಭಿಯಾನವನ್ನು 16ನೇ ವಾರ್ಡಿನ ವಿನೋಬ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಲಯ ಆಯುಕ್ತ ಕೆ. ನಾಗರಾಜ್ ನೇತೃತ್ವದಲ್ಲಿ ವಾರ್ಡಿನ ಮನೆ ಮನೆಗೆ ತೆರಳಿ ಮನೆ ಮಾಲೀಕರ ಸ್ಥಿರಾಸ್ಥಿಗಳ ದಾಖಲೆಗಳನ್ನು ನೀಡಿ ಇ-ಆಸ್ತಿ ತಂತ್ರಾಂಶದಲ್ಲಿ ಅಳವಡಿಸಿ ಇ-ಆಸ್ತಿ ಪತ್ರ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ನಾಳೆ ದಿನಾಂಕ 13 ರ ಮಂಗಳವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿನೋಬ ನಗರದ 3ನೇ ಮುಖ್ಯ ರಸ್ತೆಯಲ್ಲಿರುವ ವಾರ್ಡ್ ಆಫೀಸ್ ನಲ್ಲಿ ಮನೆ ಮಾಲೀಕರಿಗೆ ಸ್ಥಳದಲ್ಲೇ ಇ-ಆಸ್ತಿ ಪತ್ರ ನೀಡಲಾಗು ವುದು ಎಂದರು.
ಈಗಾಗಲೇ ವಾರ್ಡ್ನ ಕಸ ವಿಲೇವಾರಿ ವಾಹನದ ಮೂಲಕ ಸಾರ್ವಜನಿಕರಿಗೆ, ಮನೆ ಮಾಲೀಕರಿಗೆ ಇ-ಆಸ್ತಿ ಮಾಡಿಸುವ ಕುರಿತು ಪ್ರಚಾರ ಮಾಡಲಾಗುತ್ತಿದೆ.
ಸ್ವತ್ತಿನ ಮಾಲೀಕರು ತಮ್ಮ ಮನೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳು, ತಮ್ಮ ಫೋಟೋ, ಆಧಾರ್ ಕಾರ್ಡ್, ಮನೆ ಕಂದಾಯ, ನೀರಿನ ಕಂದಾಯ ಪಾವತಿ ರಸೀದಿ, ವಿದ್ಯುತ್ ಮೀಟರ್ ನಂಬರ್, ಆಸ್ತಿಗೆ ಸಂಬಂಧಿಸಿದ ಇತರೆ ದಾಖಲೆಗಳನ್ನು ತಂದು ನೀಡಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬಹುದು. ನೋಂದಣಿ ನಂತರ ಸ್ಥಳದಲ್ಲೇ ಇ-ಆಸ್ತಿ ದಾಖಲೆ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಕಂದಾಯ ಅಧಿಕಾರಿ ಈರಮ್ಮ, ಕಂದಾಯ ನಿರೀಕ್ಷಕ ಹೊನ್ನಪ್ಪ, ವಿಷಯ ನಿರ್ವಾಹಕ ನಾಗರಾಜ ಸೇರಿದಂತೆ ಪಾಲಿಕೆ ಸಿಬ್ಬಂದಿ, ಇತರರು ಇದ್ದರು.