ಭಕ್ತರ ಬದುಕನ್ನು ಸುಂದರಗೊಳಿಸಲು ಸತ್ಸಂಗ ಸಹಕಾರಿ

ಭಕ್ತರ ಬದುಕನ್ನು ಸುಂದರಗೊಳಿಸಲು ಸತ್ಸಂಗ ಸಹಕಾರಿ

ಯಲವಟ್ಟಿ : ಗುರುಸಿದ್ಧಾಶ್ರಮದ ಸತ್ಸಂಗ ಕಾರ್ಯಕ್ರಮದಲ್ಲಿ ಪ್ರವಚನಕಾರ ಸಿದ್ದೇಶ್ ಅಭಿಮತ

ಮಲೇಬೆನ್ನೂರು, ಫೆ. 12- ವೇದಾಂತ ಎಂದರೆ ಎಲ್ಲವನ್ನು ಬಿಡುವುದು ಎಂಬರ್ಥ ಅಲ್ಲ. ಮನುಷ್ಯ ನನ್ನು ಮಾನಸಿಕವಾಗಿ ಸಬಲೀಕರಣಗೊಳಿಸುವುದೇ ವೇದಾಂತವಾಗಿದೆ ಎಂದು ಪ್ರವಚನಕಾರ ಹೊಳೆಸಿರಿಗೆರೆಯ ಸಿದ್ದೇಶ್ ಅಭಿಪ್ರಾಯಪಟ್ಟರು.

ಅವರು ಯಲವಟ್ಟಿ ಗ್ರಾಮದ ಶ್ರೀ ಗುರುಸಿದ್ಧಾಶ್ರಮದಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾರಬ್ಧ, ಕರ್ಮ ಸಿದ್ಧಾಂತದ ಅರಿವು ಮನುಷ್ಯನಿಗೆ ಆಗಬೇಕು. ನಾವು ಮಾಡುವ ಪಾಪ-ಪುಣ್ಯಗಳೇ ನಮ್ಮ ಸುಖ-ದುಃಖಗಳಿಗೆ ಕಾರಣವಾಗಲಿದ್ದು, ಮಾಡಿದ ಪುಣ್ಯದ ಕೆಲಸಗಳು ಎಂದಿಗೂ ನಮ್ಮನ್ನು ಕೈಬಿಡುವು ದಿಲ್ಲ. ಹಾಗಾಗಿ ಸದ್ವಿಚಾರ, ಒಳ್ಳೆಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಸಿದ್ದೇಶ್ ಹೇಳಿದರು.

ಕುಂಬಳೂರಿನ ಬಿ. ಹನುಮಂತಪ್ಪ ಮಾತನಾಡಿ, ಆತ್ಮಜ್ಯೋತಿ ನಿರಾಕಾರವಾದ ಶಕ್ತಿ ಹೊಂದಿದ್ದು, ದೇಹಕ್ಕೆ ಮೈಲಿಗೆ ಉಂಟು, ಆತ್ಮಕ್ಕೆ ಮೈಲಿಗೆ ಇಲ್ಲ ಎಂದು ಶರಣರು ನಮಗೆ ತಿಳಿಸಿಕೊಟ್ಟಿದ್ದರೂ, ನಾವು ಮಾತ್ರ ಬದಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಇದೀಗ ಚಿಕ್ಕ ಸಂಸಾರ ಸುಖ ಸಂಸಾರಕ್ಕೆ ಆಧಾರ ಎಂಬಂತಾಗಿದ್ದು, ಮೃದುತ್ವ, ಸೌಜನ್ಯ, ಸಂಸ್ಕಾರ ಹಾಗೂ ಸಾಮರಸ್ಯವನ್ನು ಬೆಳೆಸುವ ಶಕ್ತಿ ಅಧ್ಯಾತ್ಮಕ್ಕೆ ಮಾತ್ರ ಇದೆ ಎಂದು ಪ್ರತಿಪಾದಿಸಿದರು.

ನಿವೃತ್ತ ಶಿಕ್ಷಕ ಬಸಪ್ಪ ಮೇಷ್ಟ್ರು, ಹಿರಿಯರಾದ ವೇದಮೂರ್ತಿ ರೇವಣಸಿದ್ದಯ್ಯ, ಮಾಳಗಿ ಪರಮೇಶ್ವರಪ್ಪ ಪಿಎಸಿಎಸ್ ಸಿಇಓ ಶೇಖರಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್, ಪ್ರಗತಿಪರ ಕೃಷಿಕ ಕುಂದೂರು ಮಂಜಪ್ಪ ಅವರುಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಹೊಳೆಸಿರಿಗೆರೆಯ ಮಾಳಗಿ ಕೊಟ್ರಪ್ಪ ಮತ್ತು ಕುಟುಂಬದವರು ಈ ದಿನದ ದಾಸೋಹಿಗಳಾಗಿದ್ದರು. ಹಳೇಬಾತಿ ಈಶ್ವರಪ್ಪ, ಬಾವಿಕಟ್ಟೆ ಮಲ್ಲೇಶಪ್ಪ, ಎ. ಸುರೇಶ್, ಹೊರಟ್ಟಿ ಕರಿಬಸಪ್ಪ, ಡಿ. ರಾಜಪ್ಪ, ನಿವೃತ್ತ ಯೋಧ ಶಿವಕುಮಾರ್, ಮಾಗೋಡು ಮಂಜಪ್ಪ, ಮಾಗೋಡ ಸಿದ್ದಪ್ಪ, ಮಲ್ಲಾಡರ ಕೃಷ್ಣಪ್ಪ, ಹನುಮಂತಗೌಡ, ನಿಬಗೂರು ದೇವರಾಜ್, ಕರಿಬಸಪ್ಪ, ಐಗೂರು ಪುಷ್ಪಮ್ಮ, ಕುಂಬಳೂರಿನ ಗೋಪಾಲಪ್ಪ, ಕೆ. ಪರಮೇಶ್ವರಪ್ಪ, ಹೆಚ್.ಎಂ. ಸದಾಶಿವ, ಜಿಗಳಿ ಭಜನಾ ತಂಡದ ಕೆ.ಎಸ್. ಮಾಲತೇಶ, ಎ.ಕೆ. ಜಯ್ಯಪ್ಪ, ಆರೋಗ್ಯ ಇಲಾಖೆಯ ಚಂದ್ರಶೇಖರಯ್ಯ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಹೊಳೆಸಿರಿಗೆರೆಯ ಕವನಶ್ರೀ, ವೆಂಕಟೇಶ್‌ಗೌಡ, ಕುಂಬಳೂರಿನ ಕೆ. ಕುಬೇರಪ್ಪ ಅವರ ಭಕ್ತಿ ಹಾಡುಗಳು ಗಮನ ಸೆಳೆದವು. 

error: Content is protected !!