ಜಿಲ್ಲೆಯ ಹಿಂದಿನ ಅರ್ಜಿಗಳ ಸಂಪೂರ್ಣ ವಿಲೆ
ದಾವಣಗೆರೆ, ಫೆ.11- ಮುಖ್ಯಮಂತ್ರಿಗಳು ವಿಧಾನ ಸೌಧದ ಮುಂಭಾಗದಲ್ಲಿ ಎರಡನೇ ರಾಜ್ಯಮಟ್ಟದ ಬೃಹತ್ ಜನಸ್ಪಂದನ ಹಮ್ಮಿಕೊಂಡಿದ್ದು, ಕಳೆದ ಜನಸ್ಪಂದನದಲ್ಲಿ ಸಲ್ಲಿಕೆಯಾಗಿದ್ದ ದಾವಣಗೆರೆ ಜಿಲ್ಲೆಯ ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
ಫೆ.7 ರ ವರೆಗೆ ವಿವಿಧ ಇಲಾಖೆಗಳಿಂದ 43 ಅರ್ಜಿಗಳು ಬಾಕಿ ಇದ್ದವು, ಈ ಅರ್ಜಿಗಳನ್ನು ಕಾಲಮಿತಿಯಲ್ಲಿ ಹಾಗೂ ಆದ್ಯತೆಯಲ್ಲಿ ಇತ್ಯರ್ಥ ಮಾಡಲು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಒಂದೇ ದಿನದಲ್ಲಿ ಎಲ್ಲಾ ಅರ್ಜಿಗಳನ್ನು ವಿಲೆ ಮಾಡಿ ಶೂನ್ಯಕ್ಕೆ ತರಲಾಗಿದೆ.
ಮೊನ್ನೆ ನಡೆದ ಜನಸ್ಪಂದನದಲ್ಲಿ ಸಲ್ಲಿಕೆಯಾಗುವ ಎಲ್ಲಾ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೆ ಮಾಡಲಾಗುತ್ತದೆ. ಸಲ್ಲಿಕೆಯಾದ ಅರ್ಜಿಗಳಲ್ಲಿ ಕುಡಿಯುವ ನೀರು, ನಾಗರೀಕ ಸೌಲಭ್ಯ, ಖಾತೆ ಬದಲಾವಣೆ, ಭೂ ಮಂಜೂರಾತಿ, ಪುನರ್ವಸತಿ, ಸಾಗುವಳಿ ಚೀಟಿ, ನಿಯಮಬಾಹಿರ ವಂಶವೃಕ್ಷ ನೀಡಿಕೆ ಸೇರಿದಂತೆ ಹಲವು ಕುಂದುಕೊರತೆಗಳ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಜನಸ್ಪಂದನ ಕಾರ್ಯಕ್ರಮದ ವೀಕ್ಷಣೆ ಯನ್ನು ಆನ್‍ಲೈನ್ ಮೂಲಕ ಮಾಡಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.