ವಾಲ್ಮೀಕಿ ಜಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅಭಿಮತ
ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಾಣ ಆಗಲೇಬೇಕು : ಆರ್.ಅಶೋಕ್
ನಾವು ಸೋತಿರಬಹುದು, ಆದರೆ, ಮೀಸಲಾತಿ ಹೆಚ್ಚಳ ಮಾಡಿದ ತೃಪ್ತಿ ನಮಗಿದೆ : ರಾಜೂಗೌಡ
ಮಲೇಬೆನ್ನೂರು, ಫೆ.9- ಮೀಸಲಾತಿ ಹೆಚ್ಚಳ ಮಾಡುವ ಸಂದರ್ಭದಲ್ಲಿ ಕೆಲವರು ಜೇನುಗೂಡಿಗೆ ಕೈ ಹಾಕಬೇಡಿ ಎಂದು ಹೆದರಿಸಿದರು. ಆದರೆ, ನಾನು ಮಾತ್ರ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಸ್ಸಿ-ಎಸ್ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದರು.
ಅವರು, ಶುಕ್ರವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ 6ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವದ ಜನಜಾಗೃತಿ ಸಮಾವೇಶದಲ್ಲಿ ಸಾಹಿತಿ ಬಿ.ಎಲ್.ವೇಣು ಅವರಿಗೆ `ಮದಕರಿ ನಾಯಕ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ನಾನು ಮೀಸಲಾತಿ ಹೆಚ್ಚಳ ಮಾಡಿದಾಗ ಕೆಲವರು ಟೀಕೆ ಮಾಡಿದರು. ಅದಕ್ಕೆ ನಾನು `ನೋ ಕಾಮೆಂಟ್’ ಎಂಬ ಉತ್ತರ ಕೊಟ್ಟಿದ್ದೇನೆ. ವಾಲ್ಮೀಕಿ ಶ್ರೀಗಳ ಸಾಮಾಜಿಕ ಬದ್ಧತೆಗೆ ತಲೆಬಾಗಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈ ಬಗ್ಗೆ ನಮಗೆ ಆತ್ಮತೃಪ್ತಿ ಇದೆ. ಮೀಸಲಾತಿ ಹೆಚ್ಚಳದ ಪರಿಣಾಮವಾಗಿ ನಿಮಗೆ 3 ಸಾವಿರಕ್ಕೂ ಹೆಚ್ಚು ಇಂಜಿನಿಯರ್ ಸೀಟು ಮತ್ತು 400 ಮೆಡಿಕಲ್ ಸೀಟು ಹೆಚ್ಚಳವಾಗಿವೆ. ಇಷ್ಟೇ ಅಲ್ಲ,
ಉದ್ಯೋಗದಲ್ಲಿ ಮತ್ತು ಪದೋನ್ನೋತಿಯಲ್ಲೂ
ಮೀಸಲಾತಿ ಹೆಚ್ಚಳ ಲಾಭ ನಿಮಗೆ ಸಿಗಲಿದೆ. ನಾವು
ಮಾಡಿದ್ದನ್ನು ಈಗಿನ ಸರ್ಕಾರ ಸರಿಯಾಗಿ ಅನುಷ್ಠಾನಗೊಳಿಸಿದರೆ, ಇನ್ನೂ ಹೆಚ್ಚಿನ ಸೌಲಭ್ಯಗಳು ನಿಮಗೆ ಸಿಗಲಿವೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.
ವಾಲ್ಮೀಕಿಯ ಜ್ಞಾನದ ಸಾಮರ್ಥ್ಯ, ಏಕಲವ್ಯನ ಏಕಾಗ್ರತೆಯ ಸಾಮರ್ಥ್ಯ, ಬೇಡರ ಕಣ್ಣಪ್ಪನ ಭಕ್ತಿಯ ಸಾಮರ್ಥ್ಯ, ಮದಕರಿ ನಾಯಕ ಮತ್ತು ಸುರಪುರ ನಾಯಕರ ಹಾಗೂ ಹಲಗಲಿ ಬೇಡರ ದೇಶಾಭಿಮಾನದ ಸಾಮರ್ಥ್ಯ ಈ ಕುಲದ ನೈಜವಾದ ಗುಣಲಕ್ಷಣಗಳಾಗಿದ್ದು, ಈ ಸಮಾಜವನ್ನು ಅಂದಿನ ರಾಮಕೃಷ್ಣ ಹೆಗಡೆ ಸರ್ಕಾರ ಎಸ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಕೇಂದ್ರದಲ್ಲಿ ಆಗಿನ ಪ್ರಧಾನಿ ಚಂದ್ರಶೇಖರ್ ಅವರು ಗೆಜೆಟ್ ಮಾಡಿದರು. ಗೆಜೆಟ್ ಮಾಡಲು ಒತ್ತಡ ಹಾಕಿದವರು ಹೆಚ್.ಡಿ.ದೇವೆಗೌಡರು ಎಂಬುದನ್ನು ಯಾರೂ ಮರೆಯಬಾರದೆಂದು ಬೊಮ್ಮಯಿ ಹೇಳಿದರು.
ಮೀಸಲಾತಿ ಹೆಚ್ಚಳವನ್ನು 9 ಷೆಡ್ಯೂಲ್‌ಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರದ ಬಳಿ ವಾಲ್ಮೀಕಿ ಅವರ ಭವ್ಯ ಮಂದಿರದ ಜೊತೆಗೆ ವಾಲ್ಮೀಕಿ ಅವರ ಸೂತ್ರಗಳನ್ನು ಕೆತ್ತನೆ ಮಾಡಿಸುವ ಇಂಗಿತವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆಂದು ಬೊಮ್ಮಯಿ ಹೇಳಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ವಾಲ್ಮೀಕಿ ಅವರಿಂದಾಗಿ ಶ್ರೀರಾಮ ಮನೆ ಮನೆಗೆ ಪರಿಚಯವಾಗಿದ್ದು, ಅವರ ಹೆಸರಿನ ಈ ಜಾತ್ರೆ ಅತ್ಯಂತ ಶ್ರೇಷ್ಠವಾಗಿದೆ. ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಾಣ ಆಗಲೇಬೇಕು. ಆಗೇ ಆಗುತ್ತೆ ಎಂದಾಗ ಸಮಾವೇಶದಲ್ಲಿ ಚಪ್ಪಾಳೆ ಕೇಳಿಬಂದವು.
ಮಾಜಿ ಸಚಿವ ರಾಜೂಗೌಡ ಮಾತನಾಡಿ, ನಾವು ಚುನಾವಣೆಯಲ್ಲಿ ಸೋತಿರಬಹುದು. ಆದರೆ, ನಮ್ಮ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡಿದ ತೃಪ್ತಿ ನಮಗಿದೆ. ಎಸ್ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಳ ಮಾಡಿದ ಕೀರ್ತಿ ಬಸವರಾಜ ಬೊಮ್ಮಯಿ ಅವರಿಗೆ ಸಲ್ಲುತ್ತದೆ. ಭೂಮಿ ಇರುವವರಿಗೂ ಈ ಸಮಾಜ ನಿಮ್ಮ ಕೊಡಗೆಯನ್ನು ಮರೆಯಲ್ಲ ಎಂದು ಬೊಮ್ಮಯಿ ಅವರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.
ಮೀಸಲಾತಿ ಹೆಚ್ಚಳದಿಂದಾಗಿ ನಮ್ಮ ಸಮಾಜದ ಅಧೀಕಾರಿಗಳ ಪ್ರಮೋಷನ್ ಅನ್ನು ಈ ಸರ್ಕಾರ ತಡೆ ಹಿಡಿದಿದ್ದು, ಅದನ್ನು ಸತೀಶ್ ಜಾರಕಿಹೊಳಿ ಅವರು ತಡೆಯನ್ನು ತೆರವು ಮಾಡಿಸಬೇಕೆಂದು ರಾಜೂಗೌಡ ಹೇಳಿದರು.
ವಾಲ್ಮೀಕಿ ಜಯಂತಿಗೆ ಸರ್ಕಾರದ ಮಾನ್ಯತೆ ನೀಡಿ ರಜೆ ಘೋಷಣೆ ಮಾಡಿದ ಯಡಿಯೂರಪ್ಪ ಅವರನ್ನೂ ಈ ಸಮಾಜ ಮರೆಯಬಾರದೆಂದರು.
ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ಗಂಗಾಧರ ನಾಯಕ, ಮಾನಪ್ಪ ವಜ್ಜಾಲ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರ ಹನುಮಂತು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಶ್ರೀನಿವಾಸ್ ದಾಸಕರಿಯಪ್ಪ, ಚಂದ್ರಶೇಖರ್ ಪೂಜಾರ್, ತ್ಯಾವಣಿಗಿ ಕೃಷ್ಣಮೂರ್ತಿ, ಸಾಲಕಟ್ಟೆ ಸಿದ್ದಪ್ಪ, ಕೆ.ಬೇವಿನಹಳ್ಳಿ ಹಾಲೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.
ಜಾತ್ರಾ ಸಮಿತಿ ಸಂಚಾಲಕ ಬಿ.ಶಿವಪ್ಪ ಮನವಿ ಪತ್ರ ಓದಿದರು. ಟಿ.ಈಶ್ವರ್ ಸ್ವಾಗತಿಸಿದರು.