ಹರಿಹರ, ಫೆ. 9 – ರಾಜ್ಯದಲ್ಲಿ ಪರಿಶಿಷ್ಟರಿಗೆ ಅನುದಾನದಲ್ಲಿ ಮೀಸಲಾತಿ ಕಲ್ಪಿಸಿರುವ ರೀತಿಯಲ್ಲೇ, ಕೇಂದ್ರ ಸರ್ಕಾರವೂ ಅನುದಾನದಲ್ಲಿ ಮೀಸಲು ಕಲ್ಪಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಸಮೀಪದ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆ – 2024ರ ಎರಡನೇ ದಿನದಂದು ಆಯೋಜಿಸಲಾಗಿದ್ದ ಜನ ಜಾಗೃತಿ ಜಾತ್ರಾ ಮಹೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 2013ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳವರ ಜನಸಂಖ್ಯೆಗೆ ಅನುಗುಣವಾಗಿ, ಅನುದಾನ ದಲ್ಲಿ ಮೀಸಲಾತಿ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದರು.
ಎಸ್ಸಿಎಸ್ಪಿ-ಟಿಎಸ್ಪಿ ಮೂಲಕ ಕಾನೂನು ಬದ್ಧವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವರಿಗೆ ಅನುದಾನದಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಈ ರೀತಿ ಕ್ರಮ ತೆಗೆದುಕೊಂಡಿಲ್ಲ ಎಂದರು.
ಸಾಮಾಜಿಕ ನ್ಯಾಯ, ರಾಷ್ಟ್ರಭಕ್ತಿ ಹಾಗೂ ಬದಲಾವಣೆಯ ಬಗ್ಗೆ ಭಾಷಣ ಮಾಡುವವರು ಪರಿಶಿಷ್ಟರಿಗೆ ಅನುದಾನದಲ್ಲಿ ಮೀಸಲಾತಿ ಕಲ್ಪಿಸಬೇಕು. ಏಕೆ ಇದುವರೆಗೂ ಇಂತಹ ಕ್ರಮ ತೆಗೆದುಕೊಂಡಿಲ್ಲ? ಬರಿ ಬಾಯಿ ಭಾಷಣದಲ್ಲಿ ಪರಿಶಿಷ್ಟರು ಮೇಲೆ ಬರಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಪರಿಶಿಷ್ಟರಿಗೆ ಕೆ.ಐ.ಎ.ಡಿ.ಬಿ.ದಲ್ಲಿ ಜಮೀನು ಮೀಸಲಿಡಬೇಕು. ಕೆ.ಎಸ್.ಎಫ್.ಸಿ.ಯಲ್ಲಿ ಹೆಚ್ಚು ಸಾಲ ನೀಡಬೇಕು. ದೇವನಹಳ್ಳಿ ಬಳಿ ವಾಲ್ಮೀಕಿ ಪೀಠಕ್ಕೆ ಜಾಗ ನೀಡಬೇಕು ಎಂದು ಒತ್ತಾಯಿಸಿದರು.
ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ನಡೆಸುವಾಗ ಅವರನ್ನು ಭೇಟಿ ಮಾಡಲು ಕರೆದಾಗ, ಆಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರಲಿಲ್ಲ. ನಾನೇ ಭೇಟಿ ನೀಡಿ ಮೀಸಲಾತಿ ಹೆಚ್ಷಿಸುವ ಭರವಸೆ ಕೊಟ್ಟಿದ್ದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ವಾಲ್ಮೀಕಿ ಸಮುದಾಯದವರು ಮೇಲರಿಮೆ ಬೆಳೆಸಿಕೊಂಡು ಮುಖ್ಯವಾಹಿನಿಗೆ ಬರಬೇಕು. ಹಕ್ಕುಗಳಿಗೆ ಒಂದಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಹಾಗೂ ಸಾಹಿತಿ ಬಿ.ಎಲ್. ವೇಣು ಅವರಿಗೆ ಮದಕರಿ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ವೇದಿಕೆಯ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಹಕಾರ ಸಚಿವರೂ ಆದ ಮಹರ್ಷಿ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್. ರಾಜಣ್ಣ, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಶಾಸಕರಾದ ಕೆ.ಎಸ್. ಬಸವಂತಪ್ಪ, ಬಸವನಗೌಡ ತುರುವಿಹಾಳ್, ಬಸವನಗೌಡ ದದ್ದಲ್, ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ, ಇ. ತುಕಾರಾಮ್, ಎನ್.ಟಿ. ಶ್ರೀನಿವಾಸ್, ಪರಿಷತ್ ಸದಸ್ಯ ಎಂ.ವೈ. ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.