ಸಾಣೇಹಳ್ಳಿ, ಫೆ.6- ಪ್ರಶಸ್ತಿಯ ಬಗ್ಗೆ ಆಸಕ್ತಿಯೂ ಇಲ್ಲ, ನಿರಾಸಕ್ತಿಯೂ ಇಲ್ಲ. ಪ್ರಶಸ್ತಿಯನ್ನು ಸ್ವೀಕಾರ ಮಾಡಿದರೂ ದೊಡ್ಡವರಾಗೋದಿಲ್ಲ. ತಿರಸ್ಕಾರ ಮಾಡಿದರೂ ದೊಡ್ಡವರಾಗೋದಿಲ್ಲ. ಅದನ್ನು ಗೌರವದಿಂದ ಸ್ವೀಕಾರ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿಕೊಳ್ಳಬೇಕು. ಅದರಿಂದ ತನ್ನ ವ್ಯಕ್ತಿತ್ವ ಗಟ್ಟಿಗೊಳಿಸಿಕೊಳ್ಳಬೇಕು ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಧಾರವಾಡದ ಮಜ್ಜಿಗೆ ಪಂಚಪ್ಪ ಸಮುದಾಯ ಸಭಾ ಭವನದಲ್ಲಿ ಬಸವ ಅಂತರರಾಷ್ಟ್ರೀಯ ಲಂಡನ್ ಪ್ರತಿಷ್ಠಾನದವರು ನೀಡುವ ಡಾ. ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪ್ರಶಸ್ತಿ ಕೊಡುವವರಿಗೂ, ಪಡೆದುಕೊಳ್ಳುವವರಿಗೂ ಅರ್ಹತೆಗಳಿರಬೇಕು. ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಾಗಿ ಒತ್ತಡಗಳು ಹೆಚ್ಚಿ ಹಣ ಕೊಟ್ಟು ಪಡೆದುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಪ್ರಶಸ್ತಿಗಳು ಕೆಲವರನ್ನು ಪುರಸ್ಕರಿಸಿದರೆ ಗೌರವ ಹೆಚ್ಚಿಸಿಕೊಳ್ಳುತ್ತೆ. ಇನ್ನು ಕೆಲವರನ್ನು ಪುರಸ್ಕರಿಸಿದರೆ ಅದರ ಮೌಲ್ಯ ಕಳೆದುಕೊಳ್ಳುತ್ತೆ. ಆದ್ದರಿಂದ ಪ್ರಶಸ್ತಿ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳುವ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ ಮಾತ್ರ ಅದರ ಮೌಲ್ಯ ಹೆಚ್ಚುವುದು.
ನಮ್ಮ ದೀಕ್ಷಾ ಗುರುಗಳಾದ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಬಸವಣ್ಣನವರನ್ನು ಗೃಹಸ್ಥ ಜಗದ್ಗುರು ಎಂದು ಕರೆಯುತ್ತಿದ್ದರು. ಬಸವಣ್ಣನವರ ತತ್ವಗಳನ್ನು ಉಸಿರಾಗಿಸಿಕೊಂಡು ನಡೆ-ನುಡಿಗಳನ್ನು ಬದುಕಿನುದ್ದಕ್ಕೂ ಸಿದ್ಧಾಂತಗಳನ್ನಾಗಿ ಮಾಡಿಕೊಂಡರು.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ತತ್ವ ನಿಷ್ಠೆ ಕಡಿಮೆಯಾಗಿ ದುರ್ಮಾರ್ಗದ ಕಡೆ ವಾಲುತ್ತಿದ್ದಾರೆ ಎಂದರು.
ಗದಗಿನ ತೋಂಟದಾರ್ಯ ಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಪ್ರಗತಿಪರ ಚಿಂತನೆಗೆ ಹೆಸರಾದವರು. ಈ ಪ್ರಶಸ್ತಿ ಶ್ರೀಗಳಿಗೆ ಕೊಟ್ಟು, ಪ್ರಶಸ್ತಿಗೆ ನ್ಯಾಯವನ್ನು ಒದಗಿಸಿದ್ದಾರೆ.
ಎಂ.ಎಂ. ಕಲ್ಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಪಡೆದುಕೊಳ್ಳುವುದಕ್ಕೂ ಅರ್ಹತೆ ಇರಬೇಕು. ಅಂತಹ ಅರ್ಹತೆ ಪಂಡಿತಾರಾಧ್ಯ ಶ್ರೀಗಳಿಗೆ ಇದೆ. ಬಸವಾದಿ ಶಿವಶರಣರ ವೈಜ್ಞಾನಿಕ, ವೈಚಾರಿಕ ವಿಚಾರಗಳನ್ನು ಪ್ರತಿಬಿಂಬಿಸುವ ಕಾರ್ಯ ಪಂಡಿತಾರಾಧ್ಯ ಶ್ರೀಗಳಿಂದ ಆಗ್ತಾ ಇದೆ. ಕಲ್ಬುರ್ಗಿಯವರ ಯೋಜನೆ ಮತ್ತು ಯೋಚನೆಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ಪಂಡಿತಾರಾಧ್ಯ ಶ್ರೀಗಳು ತರುತ್ತಿರುವುದು ಶ್ಲ್ಯಾಘನೀಯ ಎಂದರು
ನಾಡೋಜ ಗೊ.ರು. ಚನ್ನಬಸಪ್ಪ ಮಾತನಾಡಿ, ಪ್ರಶಸ್ತಿ ಎನ್ನುವುದು ಪ್ರತಿಷ್ಠೆ, ಗೌರವಕ್ಕೆ, ಅನನ್ಯತೆಗೆ, ಮನ್ನಣೆಗೆ ಸಂದ ಗೌರವ. ಪ್ರಶಸ್ತಿ ಮೂರು ಅಂಶಗಳನ್ನು ಒಳಗೊಂಡಿದೆ. ಪ್ರಶಸ್ತಿ ಪ್ರವರ್ತಕ, ಪ್ರಶಸ್ತಿ ಪ್ರಯುಕ್ತ, ಪ್ರಶಸ್ತಿ ಪುರಸ್ಕೃತರು. ಈ ಸಮಾರಂಭದಲ್ಲಿ ಮೂರೂ ಸಂಗಮಗೊಂಡಿವೆ. ಪ್ರಶಸ್ತಿ ಪುರಸ್ಕೃತರು ತಮ್ಮ ಮಠವನ್ನು ಶರಣ ತತ್ವ ಪ್ರಸಾರದ ವೈಚಾರಿಕ ಮಠವನ್ನಾಗಿ ಮಾಡಿದರು. ಬೆಂಕಿಗಿಂತ ಬೆಳಕು ದೊಡ್ಡದೆಂದು ನಂಬಿ ಆ ಬೆಳಕನ್ನೇ ಲೋಕಕ್ಕೆಲ್ಲ ಹಂಚಿದವರು ಎಂ.ಎಂ. ಕಲ್ಬುರ್ಗಿಯವರು. ಅವರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಯನ್ನು ಪಂಡಿತಾರಾಧ್ಯ ಶ್ರೀಗಳಿಗೆ ಕೊಟ್ಟಿರುವುದು ಪ್ರಶಸ್ತಿಗೇ ಘನತೆ, ಗೌರವ ಬಂದಿದೆ ಎಂದು ಶ್ಲ್ಯಾಘಿಸಿದರು.
ಗಂಭೀರ ವೈಚಾರಿಕ ಚಿಂತಕರು ಪಂಡಿತಾರಾಧ್ಯ ಶ್ರೀಗಳು. ಭಕ್ತರು ನಡೆಸುವ ಅಡ್ಡ, ಉದ್ದ ಪಲ್ಲಕ್ಕಿಯ ಮೇಲೆ ಕೂರದೇ, ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವರು. ಮಠಗಳು ಹೇಗಿದ್ದರೆ ಸಮಾಜಕ್ಕೆ ಬೇಕಾಗುತ್ತದೆ ಎನ್ನೋದನ್ನು ಪಂಡಿತಾರಾಧ್ಯ ಶ್ರೀಗಳು ತೋರಿಸಿಕೊಟ್ಟಿದ್ದಾರೆ. 2019ರಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ನಡೆದ ಮತ್ತೆ ಕಲ್ಯಾಣ ನಡೆದ ಕ್ರಾಂತಿ ಮುಂದೆ ಮತ್ತೆಂದೂ ನಡೆಯಲಿಕ್ಕೆ ಸಾಧ್ಯವಿಲ್ಲ. ಇದರ ಪ್ರೇರಣೆಯಿಂದಲೇ `ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದು ಎಂದರು.
ಶರಣ ಚಿಂತಕ ವೀರಣ್ಣ ರಾಜೂರು ಮಾತನಾಡಿ, ಬಸವ ತತ್ವಕ್ಕೆ ಕುಂದುಬಂದಾಗ ಮೊದಲು ಪ್ರತಿಕ್ರಿಯಿಸುವಂಥವರು ಪಂಡಿತಾರಾಧ್ಯ ಶ್ರೀಗಳು. ಯಾರಿಗೂ ಅಂಜದ ರೀತಿಯಲ್ಲಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವರು. ಶರಣರ ವಿಚಾರಗಳನ್ನು, ರಂಗಭೂಮಿಯನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ವಿಚಾರ ಪ್ರಸಾರ ಮಾಡುವರು ಎಂದರು.
ಪ್ರಾಸ್ತಾವಿಕವಾಗಿ ನಾಗರಾಜಮೂರ್ತಿ ಮಾತನಾಡಿ, ಇಡೀ ನಾಡಿನಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆಯನ್ನು ಗುರುತಿಸಿ ಕೊಡುವ ಎಂ.ಎಂ. ಕಲ್ಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಶರಣರ ವಿಚಾರಗಳಲ್ಲಿ ಹೆಚ್ಚು ದುಡಿಯುವಂಥವರಿಗೆ ಕೊಡಮಾಡುವ ಪ್ರಶಸ್ತಿ. ನಾವು ಎಲ್ಲ ಕ್ಷೇತ್ರಗಳಲ್ಲಿ ಬೆಳೆದರೂ ಮಾನವೀಯ ಮೌಲ್ಯಗಳ ಕುಸಿತ ಇದೆ. ಮಾನವೀಯತೆಯನ್ನು ಪುನರ್ ಸ್ಥಾಪಿಸಬೇಕು. ಕಲ್ಬುರ್ಗಿಯವರನ್ನು ಕೊಂದ ಹಾಗೆ ಇವತ್ತು ಬಸವ ತತ್ವಗಳನ್ನು ಕೊಲ್ಲುತ್ತಿದ್ದಾರೆ. ಆದ್ದರಿಂದ ನಾವೆಲ್ಲರು ಎಚ್ಚರ ವಹಿಸಬೇಕಾಗಿದೆ ಎಂದರು.
ಎಸ್. ಮಹಾದೇವಯ್ಯ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸದಾಶಿವಪ್ಪ, ಪ್ರಾಚಾರ್ಯ ಶಶಿಧರ ತೋಡ್ಕರ್ ಮತ್ತಿತರರಿದ್ದರು.
ಆರಂಭದಲ್ಲಿ ಜಾನಪದ ಸಂಶೋಧನಾ ಕೇಂದ್ರದ ಮಹಿಳಾ ಘಟಕದವರು ವಚನ ಗೀತೆಗಳನ್ನು ಹಾಡಿದರು. ಗೀತ ಜಯಂತ್ ಸ್ವಾಗತಿಸಿದರು. ವೀರಣ್ಣ ನಿರೂಪಿಸಿದರು.