ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ವಜಾಕ್ಕೆ ಬಿಜೆಪಿ ಯುವ ಮೋರ್ಚಾ ಆಗ್ರಹ
ದಾವಣಗೆರೆ, ಫೆ.5- ದೇಶ ವಿಭಜನೆ ಹೇಳಿಕೆ ಮೂಲಕ ದೇಶದ ಐಕ್ಯತೆಗೆ ಧಕ್ಕೆ ತಂದಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರನ್ನು ಈ ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಹಿಂದಿನಿಂದಲೂ ದೇಶ ವಿಭಜನೆಯ ಮಾತುಗಳನ್ನಾಡುತ್ತಾ ಬಂದಿದೆ ಎಂದು ಮಹಾ ನಗರ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಈ ಸಂದರ್ಭದಲ್ಲಿ ಆರೋಪಿಸಿದರು.
ಡಿ.ಕೆ. ಸುರೇಶ್ ಅವರ ದಕ್ಷಿಣ ಭಾರತ ಪ್ರತ್ಯೇಕತೆಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು. ಸುರೇಶ್ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸುರೇಶ್ ಹೇಳಕೆ ಖಂಡಿಸಿ ಬೆಂಗಳೂರಿನಲ್ಲಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಖಂಡನೀಯ ಎಂದು ವೀರೇಶ್ ಹೇಳಿದರು. ಯುವ ಮೋರ್ಚಾ ಕಾರ್ಯಕರ್ತರು ಸರ್ಕಾರದ ದಬ್ಬಾಳಿಕೆಗೆ ಹೆದರುವುದಿಲ್ಲ. ದೇಶವನ್ನು ಉಳಿಸುವ ಹೋರಾಟಕ್ಕೆ ಎಂದಿಗೂ ಸಿದ್ಧರಾಗಿರುತ್ತೇವೆ ಎಂದರು.
ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಎಲ್.ಎಲ್. ಶಿವಪ್ರಕಾಶ್, ಧನುಷ್, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಪ್ರವೀಣ್ ಜಾಧವ್, ನವೀನ್ ಕುಮಾರ್, ರಾಜೇಶ್ವರಿ, ಗೌತಮ್ ಜೈನ್, ಸಚಿನ್, ಶಿವರಾಜ ಪಾಟೀಲ್, ಮಂಜಾನಾಯ್ಕ, ವಿನಯ್, ಗೋವಿಂದ್ ರಾಜ್, ಮಂಜುನಾಥ ಚುಕ್ಕಿ, ರಾಕೇಶ್, ಮಂಜು, ನವೀನ್ ಕುಮಾರ್ ಇತರರು ಪ್ರತಿಭಟನೆಯಲ್ಲಿದ್ದರು.