ದಾವಣಗೆರೆ, ಫೆ. 4 – ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಹಣವಿದ್ದವರೇ ಗೆಲ್ಲುವ ಪ್ರಮಾಣ ಶೇ.90ರಷ್ಟಿದೆ. ಈ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಮಾಧ್ಯಮಗಳೂ ತಮ್ಮ ಪಾತ್ರವನ್ನು ಸಶಕ್ತವಾಗಿ ನಿರ್ವಹಿಸಬೇಕಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಮೂರು ಪಕ್ಷಗಳು ಹಣ ಬಲವನ್ನು ಅವಲಂಬಿಸಿವೆ. ಮತದಾರರೂ ಸಹ ಹಣದ ಆಮಿಷವನ್ನು ನಿರಾಕರಿಸುತ್ತಿಲ್ಲ. ಮೂರು ಪಕ್ಷಗಳಿಂದ ಹಣ ಪಡೆದು, ಒಬ್ಬರಿಗೆ ಮತ ಹಾಕುತ್ತಾರೆ ಮತ್ತು ಇನ್ನಿಬ್ಬರಿಗೆ ಟೋಪಿ ಹಾಕುತ್ತಿದ್ದಾರೆ ಎಂದು ಹೊರಟ್ಟಿ ವಿಷಾದಿಸಿದರು.
ಅಭ್ಯರ್ಥಿಗಳೂ ಸಹ ದುಡ್ಡು ಬಿಸಾಕಿದರೆ ಗೆಲ್ಲಲು ಸಾಧ್ಯ ಎಂದು ಭಾವಿಸುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿ ಬದಲಾಯಿಸುವ ದಿಸೆಯಲ್ಲಿ ಮಾಧ್ಯಮಗಳು ಪ್ರಮುಖ ಕೊಡುಗೆ ನೀಡಬಹುದಾಗಿದೆ. ಪ್ರಾಮಾಣಿಕ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ. ಮಾಧ್ಯಮಗಳು ನಾಡಿನ ಸುಧಾರಣೆಗೆ ದಾರಿ ದೀಪ ಆಗಬೇಕಿದೆ ಎಂದವರು ತಿಳಿಸಿದರು.
ಮಾಧ್ಯಮಗಳಲ್ಲಿರುವ ಹಲವಾರು ಕುಂದು ಕೊರತೆಗಳ ಬಗ್ಗೆ ಮಾತನಾಡಿದ ಹೊರಟ್ಟಿ, ಸತ್ಯ ಹಾಗೂ ಸುಳ್ಳುಗಳ ಬಗ್ಗೆ ಮಾಧ್ಯಮಗಳು ನೇರವಾಗಿ ತಿಳಿಸಬೇಕಿದೆ. ಸುದ್ದಿ ನಿರ್ವಹಣೆಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಕೃಷಿ ಹಾಗೂ ಅಭಿವೃದ್ಧಿ ಕಾರ್ಯಗಳ ವರದಿ ಮಾಡಲು ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು. ಪತ್ರಿಕೆಗಳನ್ನು ಓದುವ ಪ್ರವೃತ್ತಿ ಬೆಳೆಸಲು ಉತ್ತೇಜನ ನೀಡಬೇಕು ಎಂದು ಹೇಳಿದರು.
ಸಂಘಟನೆ, ಪ್ರಾತಿನಿಧ್ಯ ಬೇಕು
ಸೌಲಭ್ಯಗಳನ್ನು ಪಡೆಯಲು ಸಂಘಟನೆ ಅತ್ಯಗತ್ಯ. ಶಾಸಕರೂ ಸಹ ಬೇಡಿಕೆಗಳ ಈಡೇರಿಕೆಗಾಗಿ ವೇದಿಕೆಯೊಂದನ್ನು ರೂಪಿಸಿಕೊಂಡಿದ್ದಾರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಪತ್ರಕರ್ತರೂ ಹೆಚ್ಚು ಸಂಘಟನೆಯಾಗಬೇಕು ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಮೇಲ್ಮನೆಯಲ್ಲಿ ವಿವಿಧ ವಲಯಗಳ ಸಾಧಕರನ್ನು ನಾಮನಿರ್ದೇಶನ ಮಾಡಲಾಗುತ್ತಿದೆ. ಮಾಧ್ಯಮದಲ್ಲಿ ಸಾಧನೆ ಮಾಡಿದವರಿಗೂ ಪ್ರಾತಿನಿಧ್ಯ ನೀಡಲು ಅವಕಾಶವಿದೆ. ಈ ಪ್ರಾತಿನಿಧ್ಯ ಪಡೆದುಕೊಂಡಲ್ಲಿ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ. ಈ ವಿಷಯದಲ್ಲಿ ನಾನೂ ಸಹಕರಿಸುತ್ತೇನೆ ಎಂದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಎಷ್ಟೇ ಬೆಳೆದರೂ ಸಹ, ಪತ್ರಿಕೆಗಳನ್ನು ಓದಿದಾಗ ಸಿಗುವ ಸಂತೋಷ ಬೇರೆ ಯಾವುದರಿಂದಲೂ ಸಿಗುವುದಿಲ್ಲ ಎಂದು ತಿಳಿಸಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಪತ್ರಿಕೆಗಳು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿವೆ. ಪತ್ರಿಕೆಗಳು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕಿದೆ. ಇದಕ್ಕಾಗಿ ಸರ್ಕಾರ ಅಗತ್ಯ ನೆರವು ಕಲ್ಪಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ವಹಿಸಿದ್ದರು.
ವೇದಿಕೆಯ ಮೇಲೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಗಿರೀಶ್ ಕೋಟೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ರಾಜಶೇಖರ್, ಬಿಜೆಪಿ ಮುಖಂಡ ವೀರೇಶ್ ಹನಗವಾಡಿ, ಹಿರಿಯ ಪತ್ರಕರ್ತ ಬಾಮ ಬಸವರಾಜ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ವಿಜಯವಾಣಿ ಸಂಪಾದಕ ಎ.ಎನ್. ಚನ್ನೇಗೌಡ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಇ.ಎಂ. ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಖಜಾಂಚಿ ಎನ್.ವಿ. ಬದ್ರಿನಾಥ್, ಭಾರತೀಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.