ಮಲ್ಲಾಡಿಹಳ್ಳಿ ರಂಗ ದಾಸೋಹ ಸಮಾರೋಪದಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್
ಮಲ್ಲಾಡಿಹಳ್ಳಿ,ಜ.18- ಯುವಜನತೆಯು ಮೊಬೈಲ್ ಗೀಳಿನಿಂದ ಹೊರಬಂದು ವಿಧಾಯಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುವಂತಹ ವಸ್ತುವುಳ್ಳ ನಾಟಕಗಳು ಬರಬೇಕು ಹಾಗೂ ಯುವ ಜನತೆಯನ್ನು ಮುಟ್ಟಬೇಕು ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು.
ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ಸೂರುದಾಸಜೀ ಸ್ವಾಮೀಜಿಯವರ ಸ್ಮರಣೋತ್ಸವದ ಅಂಗವಾಗಿ ಕಳೆದ ವಾರ ಏರ್ಪಾಡಾಗಿದ್ದ `ತಿರುಕನೂರಿನಲ್ಲಿ ರಂಗದಾಸೋಹ’ದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
`ಜನರನ್ನು ಅಲ್ಪವಾದ ಸ್ವಾರ್ಥ ಪ್ರಪಂಚ ದಿಂದ ಹೊರಗೆಳೆದು ಮಹಾಪುರುಷರ ದೊಡ್ಡ ಬಾಳಿನ ನಿಸ್ವಾರ್ಥ ನಡೆಗಳ ಬಗ್ಗೆ ನಾಟಕಗಳು ತಿಳಿಸುವಂತಿರಬೇಕು’ ಎಂದು ಭಾರತದ ಪ್ರಾಚೀನ ನಾಟಕಕಾರರ ಅಭಿಪ್ರಾಯವಾಗಿದ್ದು ಹಾಗೆಯೇ `ನಾಟಕಗಳು ಮನುಷ್ಯನ ಚಾರಿತ್ರ ಶುದ್ಧಿಗೆ ಕಾರಣವಾಗಬೇಕು’ ಎಂದು ಪ್ಲೇಟೋ, ಅರಿಸ್ಟಾಟಲ್ ಮುಂತಾದ ತತ್ವಜ್ಞಾನಿಗಳು ಹೇಳಿದ್ದಾರೆ. ಈ ಮಾತುಗಳು ಇಂದಿಗೂ ಪ್ರಸ್ತುತವಾಗಿದ್ದು ಮನರಂಜನೆಯೊಂದಿಗೆ ಮನಃ ಪರಿವರ್ತನೆಗೂ ಕಾರಣವಾಗಬಲ್ಲ ನಾಟಕಗಳು ಇಂದು ಅವಶ್ಯವಾಗಿದೆ ಎಂದರು.
ಜ್ಞಾನದಾಸೋಹ, ಅನ್ನದಾಸೋಹ, ಆರೋಗ್ಯ ದಾಸೋಹ, ಸಾಹಿತ್ಯ ದಾಸೋಹ, ಯೋಗ ದಾಸೋಹಗಳೊಂದಿಗೆ ರಂಗ ದಾಸೋಹಕ್ಕೂ ಬ್ರಹ್ಮೀ ಭೂತ ರಾಘವೇಂದ್ರ ಸ್ವಾಮಿಗಳವರು ಗಮನ ಕೊಟ್ಟಿದ್ದರು. ಸ್ವಾಮಿಗಳು ಬ್ರಹ್ಮೀಭೂತರಾದ ನಂತರವೂ 21 ವರ್ಷಗಳಿಂದ ನಿರಂತರ ರಂಗ ದಾಸೋಹ ಇಲ್ಲಿ ನಡೆಯುತ್ತಿರುವುದು ಶ್ಲ್ಯಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿದ್ದ ಚಿತ್ರದುರ್ಗದ ಮಾಜಿ ಸಂಸದ ಬಿ.ಎಂ.ಚಂದ್ರಪ್ಪ ಮಾತನಾಡಿ, ಪೂಜ್ಯ ರಾಘವೇಂದ್ರ ಸ್ವಾಮಿಗಳ ಬದುಕೆ ಸಮಾಜಕ್ಕೆ ಸಂದೇಶ ಹಾಗೂ ಭೂಮಿಗೆ ಶಕ್ತಿಯಾಗಿದೆ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಆಶ್ರಮದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅಗತ್ಯ ನೆರವು ಒದಗಿಸಿಕೊಡುವಲ್ಲಿ ಸರ್ಕಾರದೊಂದಿಗೆ ಸಂಪರ್ಕಿಸುವುದಾಗಿ ಹೇಳಿದರು.
ಟ್ರಸ್ಟಿನ ಉಪಾಧ್ಯಕ್ಷರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಆದ ಸಾಹಿತಿ ರಾಘವೇಂದ್ರ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಟ್ರಸ್ಟಿನ ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ಆಶ್ರಮದ ಹಳೆಯ ವಿದ್ಯಾರ್ಥಿಗಳಾದ ವಿಜ್ಞಾನಿ ಡಾ.ನಾಗೇಶ್ ಕಿಣಿ, ಡಾ. ಪಿ.ಎನ್.ಶಾಂತಕುಮಾರ್, ಹೆಚ್. ಎಂ.ಸನತ್ ಕುಮಾರ್, ವಿಶ್ವಸ್ಥರಾದ ಕೆ.ಡಿ.ಬಡಿಗೇರ್, ಎಲ್.ಎಸ್.ಶಿವರಾಮಯ್ಯ, ವ್ಯವಸ್ಥಾಪಕ ಡಿ.ಕೆ. ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಹೆಚ್.ಗಿರೀಶ್ ಮಾಡಿದರೆ, ಯೋಗ ನಮನ ಪ್ರಸ್ತುತಿಯನ್ನು ಸಂತೋಷ್ ಕುಮಾರ್ ನಿರೂಪಿಸಿದರು. ಜಿ.ಟಿ.ಶಂಕರಮೂರ್ತಿ ಸ್ವಾಗತಿಸಿದರು. ಜಿ.ಎಸ್.ಶಿವಕುಮಾರ್ ವಂದಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ನಾಟಕ ಬೆಪ್ಪುತಕ್ಕಡಿ ಬೋಳೇಶಂಕರವನ್ನು ಮಲ್ಲಾಡಿ ಹಳ್ಳಿಯ ತಿರುಕರಂಗ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಸಂಗೀತ ಮತ್ತು ನಿರ್ದೇಶನವನ್ನು ಎಂಪಿಎಂ ವೀರೇಶ್ ಮಾಡಿದರು.