ಕೆರೆಗೆ ಹರಿಯಿತು ನೀರು, ಏರಿತು ಜಮೀನು, ಸೈಟು ಬೆಲೆ ಗಗನಕ್ಕೆ..!

ಕೆರೆಗೆ ಹರಿಯಿತು ನೀರು, ಏರಿತು ಜಮೀನು, ಸೈಟು ಬೆಲೆ ಗಗನಕ್ಕೆ..!

ಹಲಸಿಗೆ ಹೆಸರುವಾಸಿಯಾಗಿದ್ದ ಭರಮಸಾಗರ ಈಗ ಅಡಿಕೆಯ ನಾಡು

ಕಳೆದ 30 ವರ್ಷಗಳಿಂದ ಭರಮಸಾಗರದ ಎರಡು ಕೆರೆಗಳು ಬತ್ತಿ, ಅಲ್ಲಿ ಜಾಲಿ ಬೆಳೆದು ಪರಿಸರವೇ ಹಾಳಾಗಿತ್ತು. ಜನರು ಈ ಕೆರೆಯಲ್ಲಿ ಬೇಡವಾದ ವಸ್ತುಗಳನ್ನು ಹಾಕುತ್ತಿದ್ದರು. ಹಾಗಾಗಿ ಕೆರೆಯ ಅಂದ ಚಂದವೇ ಹಾಳಾಗಿ ಹೋಗಿತ್ತು.  ಜಮೀನುಗಳಿಗೆ ಮಣ್ಣನ್ನು ಇಲ್ಲಿಂದಲೇ ತೆಗೆದು ಕೊಂಡು ಹೋಗಲಾಗುತ್ತಿತ್ತು.

ಈಚೆಗೆ ಸರ್ಕಾರ   ಕೆರೆಗಳ ಅಭಿವೃದ್ಧಿ ಹಾಗೂ ಏತ ನೀರಾವರಿ ಯೋಜನೆಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ   ಬೃಹತ್ ಯೋಜನೆಯನ್ನು, ಸಿರಿಗೆರೆ ಶ್ರೀಗಳವರ ಆಶೀರ್ವಾದದಿಂದ ಈ ಕಾರ್ಯಕ್ಕೆ ನಾಂದಿಯಾಯಿತು. ಇದರ ಪ್ರಕಾರ ಕೆರೆಗೆ ನೀರು ತರುವ ವ್ಯಾಪ್ತಿಯಲ್ಲಿ  ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂಜಿನಿಯರ್‌ಗಳಿಂದ  ಪ್ಲಾನ್ ಹಾಕಿಸಿದರು.    ಶಾಸಕ ಎಂ. ಚಂದ್ರಪ್ಪನವರಿಗೆ    ಸೂಕ್ತ ಮಾರ್ಗದರ್ಶನ ನೀಡಿ, ಬೇರೆ ಯಾವುದೇ ಅಧಿಕಾರಕ್ಕೆ ಆಸೆ ಪಡಬೇಡ, ರೈತರುಗಳಿಗೆ ನೀರು ತರುವ ಯೋಜನೆಯ ಕೆಲಸವನ್ನು ಶ್ರಮವಹಿಸಿ ಮಾಡಬೇಕೆಂದು ಹೇಳಿದರು.

ಅದರಂತೆ ಶಾಸಕರು, ಗುರುಗಳ ಮಾತಿಗೆ ಮನ್ನಿಸಿ ಸರ್ಕಾರದಲ್ಲಿ ಹಗಲು, ರಾತ್ರಿ ಎನ್ನದೆ ಕೆಲಸವನ್ನು ಮಾಡಿ ಅದನ್ನು ನಿಭಾಯಿಸಿದರು.    ಭರಮಸಾಗರ ಕೆರೆಗೆ ತುಂಗಭದ್ರಾ ನಾಲೆಯಿಂದ ಸುಮಾರು 55 ಕಿಮೀ ದೂರದಿಂದ ಪೈಪ್ ಲೈನ್ ಮೂಲಕ ಕರ್ನಾಟಕದಲ್ಲಿ ಎಲ್ಲೂ ಮಾಡದ ಕೆಲಸವನ್ನು   ಇಂಜಿನಿಯರ್ ಪ್ರಕಾಶ್ ಗುಗ್ಗೆ ಮಾಡಿಸಿದರು. ಈ ಪೈಪ್ ಹಾಕುವಾಗ ಮನೆ ಹಾಗೂ ಕೆಲವು ಕಡೆಯಲ್ಲಿ ತರಲೆ ಮಾಡಿದರು. ಶ್ರೀಗಳ ಆಶೀರ್ವಾದದಿಂದ ಸಂಬಂಧಪಟ್ಟವರಿಗೆ ಪರಿಹಾರವನ್ನು ಸರ್ಕಾರದಿಂದ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುವಲ್ಲಿ ಯಶಸ್ವಿಯಾದರು.

ಈ ಎಲ್ಲಾ ಕೆಲಸಗಳು ಮುಗಿದ ನಂತರ ಭರಮಸಾಗರದ ಭರಮಣ್ಣ ನಾಯಕ ನಿರ್ಮಿಸಿದ ಕೆರೆಗೆ ಸೆಪ್ಟಂಬರ್ 29ರಂದು ನೀರು ಹರಿದು ಬಂದಿತು.   ಶ್ರೀಗಳ ಬೃಹತ್ ಪ್ರಯತ್ನ ಹಾಗೂ ಆಶೀರ್ವಾದ ಹಾಗೂ ಮಾರ್ಗದರ್ಶನವನ್ನು ರೈತರು ಗ್ರಾಮದ ಪರವಾಗಿ ಭರಮಸಾಗರ ಗ್ರಾಮಸ್ಥರ ಸಹ ಸಹಯೋಗದಿಂದ ಶ್ರೀಗಳವರಿಗೆ ಗೌರವ ಸಮರ್ಪಣೆಯನ್ನೂ ಸಹ ಮಾಡಿರುತ್ತಾರೆ.

ಕೆರೆಗೆ ನೀರು ಬಂದ ನಂತರ ಭರಮಸಾಗರದ ಇತಿ ಹಾಸವೇ ಬದಲಾಗಿದೆ. ಈ ಬಾರಿ ತರಳಬಾಳು ಹುಣ್ಣಿಮೆ ಯನ್ನು ಭರಮಸಾಗರದಲ್ಲಿ ತುಂಬಾ   ಅದ್ಧೂರಿಯಿಂದ ನಡೆಸಬೇಕೆಂದು ಶ್ರೀಗಳು ಕಳೆದ ವರ್ಷವೇ ತಿಳಿಸಿದ್ದರು. ಆದರೆ ಈ ಬಾರಿ ಮಳೆ ಇಲ್ಲದೆ ಬರಗಾಲ ಹಾಗೂ ರೈತರು ತುಂಬಾ ಕಷ್ಟದಲ್ಲಿರುವುದರಿಂದ ಸಿರಿಗೆರೆಯಲ್ಲಿಯೇ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಇನ್ನು ಜಮೀನು ಹಾಗೂ ಸೈಟ್ ವಿಚಾರಕ್ಕೆ ಬಂದರೆ ಬೆಲೆ ಭಾರೀ ಏರಿಕೆ ಆಗಿದೆ. ಕಾರಣ ಮಕ್ಕಳ ವಿದ್ಯಾಭ್ಯಾಸ, ಅಡಿಕೆ ತೋಟ, ಅಲ್ಲದೆ ದೊಡ್ಡ ಪ್ರಮಾಣದಲ್ಲಿ ವ್ಯವಹಾರವನ್ನು ಮಾಡಲು ಬಹಳ ಚೆನ್ನಾಗಿ ಇದೆಯೆಂದು ಸುತ್ತಮುತ್ತಲಿನ ಹಳ್ಳಿಯ ಜನರೂ ಭರಮಸಾಗರಕ್ಕೆ ಬರುತ್ತಿದ್ದಾರೆ. ಜಮೀನಿಗೆ ಕೆರೆ ನೀರು ಬರುವುದಕ್ಕೆ ಮುಂಚೆ ಒಂದು ಎಕರೆಗೆ 8-10 ಲಕ್ಷ ಇತ್ತು. ಈಚೆಗೆ 25- 30 ಲಕ್ಷವಾಗಿದೆ. ಸೈಟ್ 2, 3, 5 ಸಾವಿರ ತನಕ ಅಡಿ ಲೆಕ್ಕದಲ್ಲಿದೆ. ಅದೇ ಜಮೀನು ಎನ್‌ಹೆಚ್-4ರ ಪಕ್ಕದಲ್ಲಿ 1 ಗುಂಟೆಗೆ 6-8 ಲಕ್ಷವಾಗಿರುತ್ತದೆ. ಇದೇ ರೀತಿ ವ್ಯವಹಾರವು ನಡೆಯುತ್ತಿದೆ.

ಅಡಿಕೆ ತೋಟ ಮಾಡಲು ಹೋದರೆ, ಎಕರೆಗೆ   ನೀರು, ಕರೆಂಟ್, ಬೇಲಿ   ವ್ಯವಸ್ಥೆ ಮಾಡಿಕೊಳ್ಳಲು 2-3 ಲಕ್ಷ ಖರ್ಚಾಗುತ್ತದೆ. ಅಲ್ಲದೆ ಕೆಲವು ರೈತರು  ಅಡಿಕೆ ಸಸಿ ಮಾರಾಟ ಮಾಡುವುದನ್ನೇ ಉದ್ಯೋಗ  ಮಾಡಿಕೊಂಡಿದ್ದಾರೆ. 25 ರಿಂದ 40 ರೂಪಾಯಿ ತನಕ ಸಸಿಯನ್ನು ಮಾರಾಟ ಮಾಡುತ್ತಿದ್ದಾರೆ.  ಕೂಲಿಕಾರರು  ಸಮಸ್ಯೆ ಇದ್ದರೂ ಸಹ ತೋಟ ಮಾಡುವುದನ್ನು ಬಿಟ್ಟಿಲ್ಲ.   

ಅಡಿಕೆ ಕೇಣಿ ಮಾಡುವವರು ಸ್ವಂತ ಕಾರಿನಲ್ಲಿ ಓಡಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಭರಮಸಾಗರದಲ್ಲಿ ಅಡಿಕೆ ಸುಲಿಯುವ ಮಿಷನ್ ಜಾಗ ಆವರಿಸಿಕೊಂಡಿ ರುವುದನ್ನು ನೋಡಿದರೆ ಒಂದು ಸಣ್ಣ ಕೈಗಾರಿಕೆಯಂತೆ ನಡೆಯುತ್ತಿದೆ.  ಹಲಸಿಗೆ ಹೆಸರುವಾಸಿಯಾಗಿದ್ದ ಭರಮ ಸಾಗರವೀಗ ಅಡಿಕೆಗೆ ಹೆಸರಾಗಿದೆ. ಸುಮಾರು ಈ  6-7 ವರ್ಷದಲ್ಲಿ ನಾಲ್ಕು ಕಡೆ ತಿರುಗಿ ನೋಡಿದರೂ ಅಡಿಕೆ ತೋಟ ಗಳೇ ಕಾಣುತ್ತವೆ, ಇನ್ನು ಎಲ್ಲಾ ಈ ಭಾಗವು ಅಭಿವೃದ್ಧಿ ಯಾಗುವುದಕ್ಕೆ ಸಿರಿಗೆರೆ ಶ್ರೀಗಳ ಆಶೀರ್ವಾದವೇ ಕಾರಣ.

ಕೆರೆಗೆ ನೀರು ಬರುವುದರ ಮುಂಚೆ ಬೋರ್ ಒಂದು ಸಾವಿರ ಅಡಿ ತೆಗೆಸಿದರೂ ನೀರು ಬರುತ್ತಿರಲಿಲ್ಲ. ಕೆರೆಗೆ ನೀರು ಬಂದ ಮೇಲೆ ಭರಮಸಾಗರ ಹಾಗೂ ಸುತ್ತಮುತ್ತಲಿನ ಹಳ್ಳಿಯ ರೈತರ ಬೋರ್‌ಗಳು ಚೆನ್ನಾಗಿದೆ 400 ರಿಂದ 500 ಅಡಿಗೆ ನೀರು ಸಿಗುತ್ತಿದೆ.

ಈ ಭಾಗದ ರೈತರು  ತಮ್ಮ ಮನೆಗಳಲ್ಲಿ ಸಿರಿಗೆರೆ ಶ್ರೀಗಳವರ ಫೋಟೋವನ್ನು ಹಾಕಿಕೊಳ್ಳಬೇಕು.   ಭರಮಸಾಗರ ಡ್ಯಾಮ್   ಅಥವಾ ಭರಮಸಾಗರ ತೀರ್ಥಕ್ಷೇತ್ರ ಎಂದು ಸಹ ಅವರು ನಾಮಕರಣ ಮಾಡಿದ್ದಾರೆ. ಕೆರೆಯಲ್ಲಿ ಕಸ ಇತರೆ ತ್ಯಾಜ್ಯ ವಸ್ತುಗಳನ್ನು ಹಾಕದಂತೆ ನೋಡಿಕೊಳ್ಳಬೇಕು.

ಇದೇ ರೀತಿ ಶ್ರೀಗಳಿಗಿದ್ದ ಭರಮಸಾಗರದ ಮೇಲಿನ ಅಭಿಮಾನ ಹಿನ್ನೆಲೆಯಲ್ಲಿ ಮುಂದಿನ ಬಾರಿ ತರಳಬಾಳು ಹುಣ್ಣಿಮೆಯನ್ನು ಭರಮಸಾಗರ ದಲ್ಲಿಯೇ ನೆರವೇರಿಸಬೇಕು ಮತ್ತು ಭರಮಸಾಗರ ತಾಲೂಕು ರಚನೆಯಾಗಲು ಶ್ರೀಗಳವರು ಆಶೀರ್ವಾದ ಮಾಡಬೇಕೆಂದು ಈ ಭಾಗದ ಜನರ ಆಸೆಯಾಗಿದೆ.


– ಬಿ.ಜೆ. ಅನಂತಪದ್ಮನಾಭ ರಾವ್

error: Content is protected !!