`ಭಾರತ ಜೋಡೋ ನ್ಯಾಯ ಯಾತ್ರೆ’ ಕಾಂಗ್ರೆಸ್ ಗೆಲುವಿಗೆ ಸಹಕಾರಿ

`ಭಾರತ ಜೋಡೋ ನ್ಯಾಯ ಯಾತ್ರೆ’ ಕಾಂಗ್ರೆಸ್ ಗೆಲುವಿಗೆ ಸಹಕಾರಿ

ನಗರದಲ್ಲಿನ ಕಾಂಗ್ರೆಸ್ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಜಯಕುಮಾರ್ ಮಯೂರ್

ದಾವಣಗೆರೆ, ಜ. 17- ಅಖಿಲ ಭಾರತ ಕಾಂಗ್ರೆಸ್ ಸಮಿತಿ ವರಿಷ್ಠ ರಾಹುಲ್ ಗಾಂಧಿ ಮುಂದಾಳತ್ವದಲ್ಲಿ ಪ್ರಾರಂಭವಾದ `ಭಾರತ್ ಜೋಡೋ ನ್ಯಾಯ ಯಾತ್ರೆ’ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಜಯಕುಮಾರ್ ಮಯೂರ್ ಹೇಳಿದರು.

ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ರಾಹುಲ್ ಗಾಂಧಿ ನಡೆಸಿದ `ಭಾರತ್ ಜೋಡೋ ಯಾತ್ರೆ’ ಯಿಂದಾಗಿ ಕರ್ನಾಟಕ, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲು ಮತ್ತು ಅಧಿಕಾರದ ಗದ್ದುಗೆ ಏರಲು ಸಹಕಾರಿಯಾಗಿದ್ದನ್ನು ಸ್ಮರಿಸಿದರು. ಇದೀಗ ಮಣಿಪುರದಿಂದ ಆರಂಭವಾದ `ಭಾರತ್ ಜೋಡೋ ನ್ಯಾಯ ಯಾತ್ರೆ’ ಕೂಡ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಕರ್ನಾಟಕದಲ್ಲಿ ಶೇ. 40 ಕಮೀಷನ್ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿದಂತೆ, ದೇಶದಲ್ಲಿ ಮತದಾರರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಬೇಕೆಂದು ಮನವಿ ಮಾಡಿದರು. ತಳಮಟ್ಟದ ಕಾರ್ಯಕರ್ತರಿಗೂ ಅಧಿಕಾರ ವಿಕೇಂದ್ರೀಕರಣದಡಿ ಸ್ಥಾನಮಾನ ನೀಡಲು ಎಐಸಿಸಿ ತೀರ್ಮಾನಿಸಿದ್ದು, ಆಶ್ರಯ ಸಮಿತಿ, ಆರೋಗ್ಯ ಸುರಕ್ಷಾ ಸಮಿತಿ, ಕಾಡಾ, ಕೆಡಿಪಿ, ಭೂ ಹಿಡುವಳಿ, ದಿಶಾ ಸೇರಿದಂತೆ ವಿವಿಧ ಸಮಿತಿಗಳಿಗೆ  ತಳಮಟ್ಟದ ಕಾರ್ಯಕರ್ತರಿಗೆ ನೇಮಕ ಮಾಡಿಕೊಳ್ಳುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರುಗಳ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ `ದೇಶಕ್ಕಾಗಿ ದೇಣಿಗೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಕ್ಷದ ಹಿತೈಷಿಗಳು, ಅಭಿಮಾನಿಗಳು, ಮತದಾರರು ಆನ್‌ಲೈನ್ ಮೂಲಕ ದೇಣಿಗೆ ನೀಡಲು ಅವಕಾಶವಿದೆ ಎಂದರು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಬೇಕಾಗಿದೆ. ಪ್ರತಿ ತಾಲ್ಲೂಕಿನಿಂದ 1.38 ಲಕ್ಷ ರೂ. ದೇಣಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶರಾವ್ ಜಾಧವ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಜಗಳೂರಿನ ಕೆ.ಪಿ. ಪಾಲಯ್ಯ, ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

error: Content is protected !!