ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಗೆ 75 ರ ಸಂಭ್ರಮ…

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಗೆ 75 ರ ಸಂಭ್ರಮ…

ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ 75ರ ಹರೆಯವನ್ನು ತಲುಪುವುದು ಯಾರಿಗಾದರೂ ಅತ್ಯಂತ ಸಂಭ್ರಮದ ಸಂಗತಿ. ಅದರಲ್ಲೂ ಹಲವಾರು ವಿಧದಲ್ಲಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಜೀವನದಲ್ಲಿ ತುಂಬು ಸಾರ್ಥಕ್ಯವನ್ನು ಹೊಂದಿದ ವ್ಯಕ್ತಿಗೆ 75 ರ ಮೈಲಿಗಲ್ಲನ್ನು ತಲುಪುವುದು ವಿಶೇಷವೇ ಸರಿ. ಓರ್ವ ಮಾದರಿ ಶಿಕ್ಷಕನಾಗಿ, ಅತ್ಯುತ್ತಮ ಮುಖ್ಯ ಶಿಕ್ಷಕನಾಗಿ, ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದಿಲ್ಲೊಂದು ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾ, ಪ್ರಸ್ತುತ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ತೇರನ್ನು ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ಎಳೆಯಲು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿರುವ ಬಿ.ವಾಮದೇವಪ್ಪ ಅವರು, 18 ಜನವರಿ 2024 ರಂದು ತಮ್ಮ ಬದುಕಿನ 75 ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. 

 ವಾಮದೇವಪ್ಪ ಅವರು ದಿನಾಂಕ 18.01.1950  ರಂದು ದಾವಣಗೆರೆ ತಾಲ್ಲೂಕು ಹಿರೇತೊಗಲೇರಿ ಗ್ರಾಮದ ಶ್ರೀಮತಿ ಗಂಗಮ್ಮ ಮತ್ತು ಬಿ. ಬಸಪ್ಪ ದಂಪತಿಗಳ ಸುಪುತ್ರನಾಗಿ ಜನಿಸಿದರು. ಎಂ.ಎ., ಬಿ.ಇಡಿ., ಪದವೀಧರರಾಗಿ, ಮೈಸೂರಿನಲ್ಲಿ ಇ.ಎಲ್.ಟಿ.ಸಿ. ಹಾಗೂ ನವದೆಹಲಿಯಲ್ಲಿ ಸಿ.ಸಿ.ಆರ್.ಟಿ. ವಿಶೇಷ ತರಬೇತಿಯನ್ನು ಪಡೆದು, ಶ್ರೀ ತರಳಬಾಳು ವಿದ್ಯಾ ಸಂಸ್ಥೆಯಲ್ಲಿ 35 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ  ಸೇವೆ ಸಲ್ಲಿಸಿದ್ದಾರೆ. 

2001-2004ರ ಅವಧಿಯಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ,  2008-2012 ರವರೆಗೆ ಹಾಗೂ 2016-21 ರವರೆಗೆ ಎರಡು ಅವಧಿಗೆ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ   ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಅವಧಿ ಯಲ್ಲಿ ಮಾಯಕೊಂಡದಲ್ಲಿ 2 ದಿನ, ಬಾಡದಲ್ಲಿ 2 ದಿನ, ಹದಡಿಯಲ್ಲಿ 1 ದಿನ, ಆನಗೋಡಿನಲ್ಲಿ 1 ದಿನ ಹೀಗೆ 4 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗಳನ್ನು ಗ್ರಾಮೀಣ ಪ್ರದೇಶದಲ್ಲಿಯೇ ಅರ್ಥಪೂರ್ಣವಾಗಿ,   ಸಂಘಟಿಸಿದ ಹೆಗ್ಗಳಿಕೆ ವಾಮದೇವಪ್ಪ ಅವರದ್ದಾಗಿದೆ. 

ದಾವಣಗೆರೆಯಲ್ಲಿ ಕುವೆಂಪು ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ದೊರಕಿಸುವಲ್ಲಿ ಮತ್ತು ಭವನ ನಿರ್ಮಾಣದಲ್ಲೂ ಅವರ ಪಾತ್ರ ಗಮನಾರ್ಹವಾಗಿದೆ. ದಾವಣಗೆರೆ ತರಳಬಾಳು ಬಡಾವಣೆಯಲ್ಲಿ ಕಳೆದ 30 ವರ್ಷಗಳಿಂದಲೂ ನಿರಂತರವಾಗಿ ಶಿವಗೋಷ್ಠಿ ಕಾರ್ಯಕ್ರಮ ನಡೆಸುತ್ತಾ ಬರುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು  ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ, ದಾವಣಗೆರೆ ತಾಲ್ಲೂಕು ಕಸಾಪದ 85 ದತ್ತಿ ಕಾರ್ಯಕ್ರಮಗಳನ್ನು ದಾವಣಗೆರೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅರ್ಥಪೂರ್ಣವಾಗಿ ಆಯೋಜನೆ ಹಾಗೂ ಅನೇಕ ದತ್ತಿ ನಿಧಿಗಳ ಸ್ಥಾಪನೆಯಾಗುವಲ್ಲಿ, ಮಹಲಿಂಗರಂಗ ಪ್ರಶಸ್ತಿ ಸ್ಥಾಪಿಸುವಲ್ಲಿ, ಕಸಾಪಕ್ಕೆ 6 ಸಾವಿರಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಮಾಡುವಲ್ಲಿ   ಅವರ ಕನ್ನಡದ ಸೇವೆ ಅನುಪಮ.

ವಾಮದೇವಪ್ಪ ಅವರು ಕೇವಲ ಕನ್ನಡಪರ ಸಂಘಟನೆ ಮಾತ್ರವಲ್ಲದೇ, ಸಾಹಿತ್ಯ ಕೃಷಿಯಲ್ಲಿಯೂ ತಮ್ಮ ಕಿಂಚಿತ್ ಸೇವೆಯನ್ನು ಸಲ್ಲಿಸಿದ್ದಾರೆ. 15ಕ್ಕೂ ಹೆಚ್ಚು ವ್ಯಕ್ತಿ ಪರಿಚಯಗಳು, 10 ಸಂಪಾದಿತ ಕೃತಿಗಳು, ‘ಸ್ಮೃತಿ ಶಂಕರ’ ಕೃತಿ, ನಾಲ್ಕು ಸಮ್ಮೇಳನಗಳ ಸವಿನೆನಪಿಗಾಗಿ ಸ್ಮರಣ ಸಂಚಿಕೆಗಳನ್ನು ಹೊರತಂದು, ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಸಿರಿಗೆರೆ ಜಗದ್ಗುರುಗಳವರ ನೇತೃತ್ವದಲ್ಲಿ ನಡೆದ ಮದ್ಯಪಾನ ನಿಷೇಧ ಆಂದೋಲನದಲ್ಲಿ 15000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಜನ ಜಾಗೃತಿ ಮೂಡಿಸುವಂತಹ ಕೆಲಸದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪೂರಕವಾಗಿ ಅನೇಕ ಪ್ರಶ್ನೆ ಪತ್ರಿಕೆ ಕೋಷ್ಠಕಗಳನ್ನು ರಚಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದಾರೆ.  ಸಂಪನ್ಮೂಲ ವ್ಯಕ್ತಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಿದ್ದಾರೆ.  

ವಾಮದೇವಪ್ಪ ಅವರು ಸಲ್ಲಿಸುತ್ತಿರುವ ಸಾಮಾಜಿಕ ಸೇವೆಯನ್ನು ಪರಿಗಣಿಸಿ ತರಳಬಾಳು ಬೃಹನ್ಮಠ, ರಂಭಾಪುರಿ ಪೀಠ ಸೇರಿದಂತೆ, ಅನೇಕ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಪ್ರಶಸ್ತಿ – ಸನ್ಮಾನ ನೀಡಿ ಗೌರವಿಸಿವೆ.  

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 2021ರ ನವೆಂಬರ್‌ನಲ್ಲಿ ಪ್ರಚಂಡ ಬಹುಮತದಿಂದ ಚುನಾಯಿತರಾದ ಬಳಿಕ ಕಳೆದ ಎರಡು ವರ್ಷಗಳಲ್ಲಿ ಅನೇಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿದ ಕೀರ್ತಿ ವಾಮದೇವಪ್ಪ ಅವರಿಗೆ ಸಲ್ಲುತ್ತದೆ. 

ಜಿಲ್ಲಾ ಕಸಾಪ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಲೋಕಾರ್ಪಣೆಗೊಂಡ ವಿಶ್ರಾಂತ ಶಿಕ್ಷಕ ಬಿ.ಎಸ್.ಸಿದ್ದೇಶ್ ವಿರಚಿತ `ಅವಾಂತರ’ ಕೃತಿ ಸೇರಿದಂತೆ ಈವರೆಗೆ 73 ಪುಸ್ತಕಗಳು ಲೋಕಾರ್ಪಣೆಗೊಂಡಿವೆ. ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ನೀಡಿರುವ ಐದು ಲಕ್ಷ ರೂಪಾಯಿಗಳ ಅನುದಾನದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಶಾಸಕ ಎಸ್.ಎ. ರವೀಂದ್ರನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿಯವರು ನೀಡಿರುವ ತಲಾ ಐದು ಲಕ್ಷ ರೂ.ಗಳ ಅನುದಾನದಲ್ಲಿ  ಕುವೆಂಪು ಕನ್ನಡ ಭವನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಭವನಕ್ಕೆ ಅತೀ ಸುಂದರವಾದ ಧ್ವಾರ ಬಾಗಿಲು ನಿರ್ಮಾಣವಾಗಿದೆ. ಭವನದ ಹೊರಭಾಗದಲ್ಲಿ ಬಯಲು ರಂಗಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತ ನೆನೆಗುದಿಗೆ ಬಿದ್ದಿರುವ ವಿಶ್ವಕನ್ನಡ ಸಮ್ಮೇಳನ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಮ್ಮ ಅವಧಿಯಲ್ಲಿ ದಾವಣಗೆರೆಯಲ್ಲಿ  ನಡೆಸಬೇಕೆಂದು ಅಚಲ ವಿಶ್ವಾಸದಲ್ಲಿದ್ದಾರೆ.  

ಪ್ರಸ್ತುತ ಸಾದು ಸದ್ಧರ್ಮ ಸಮಾಜದ ಕಾರ್ಯದರ್ಶಿ ಯಾಗಿಯೂ ಸೇವೆ ಸಲ್ಲಿಸುತ್ತಿರುವ ವಾಮದೇವಪ್ಪ ಅವರ ಸಾಮಾಜಿಕ ಚಟುವಟಿಕೆಗಳಿಗೆ ಸದಾ ಜೊತೆಗಿದ್ದು ಹೆಜ್ಜೆ ಹಾಕುತ್ತಿದ್ದಾರೆ ಅವರ ಧರ್ಮಪತ್ನಿ ಕಮಲಮ್ಮ ಮತ್ತು ಅವರ ಕುಟುಂಬ ಸದಸ್ಯರು.

75ರ ವಯಸ್ಸು ನನ್ನ ದೇಹಕ್ಕಾಗಿದೆಯೇ ಹೊರತು ಕನ್ನಡದ ಕೆಲಸ ಮಾಡಬೇಕೆಂಬ ನನ್ನ ಮನಸ್ಸಿಗಲ್ಲ. ತನ್ನ ದೇಹದಲ್ಲಿ ಕೊನೆ ಉಸಿರಿರುವವರೆಗೂ ಕನ್ನಡ ನಾಡು, ನುಡಿಗಾಗಿ ದುಡಿಯುತ್ತೇನೆ‌ ಎನ್ನುತ್ತಾರೆ ಬಿ. ವಾಮದೇವಪ್ಪ. 


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಗೆ 75 ರ ಸಂಭ್ರಮ... - Janathavaniಕೆ.ರಾಘವೇಂದ್ರ ನಾಯರಿ, ಗೌರವ ಕೋಶಾಧ್ಯಕ್ಷ, ದಾವಣಗೆರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.

error: Content is protected !!