ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ನ್ಯಾಯಾಧೀಶರ ಭೇಟಿ, ಪರಿಶೀಲನೆ

ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ನ್ಯಾಯಾಧೀಶರ ಭೇಟಿ, ಪರಿಶೀಲನೆ

ದಾವಣಗೆರೆ, ಜ. 10 –  ದಾವಣಗೆರೆ ನಗರದ ವರ್ತುಲ ರಸ್ತೆಯಲ್ಲಿರುವ ಬಿಸಿಎಂ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹಾಸ್ಟೆಲ್ ಸ್ವಚ್ಚತೆ ಕಾಪಾಡಿಕೊಂಡು ವಿದ್ಯಾರ್ಥಿಗಳ ಕುಂದು ಕೊರತೆಗಳ ನಿವಾರಣೆ ಮಾಡಲು ತಿಳಿಸಿದರು.

ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ದಿನನಿತ್ಯ ಮೆನು ಬದಲಾಯಿಸಬೇಕು. ಗ್ರಂಥಾಲಯ ಸೌಲಭ್ಯ ಇಲ್ಲ, ಶೌಚಾಲಯ ಸ್ವಚ್ಚತೆ ಇಲ್ಲ, ಕೆಲವು ವಿದ್ಯಾರ್ಥಿಗಳಿಗೆ ಮಂಚದ ಸೌಲಭ್ಯ ಇಲ್ಲದೇ ನೆಲದ ಮೇಲೆ ಮಲಗುತ್ತಾರೆ. ನಿಲಯಕ್ಕೆ ವೈದ್ಯರು ಭೇಟಿ ನೀಡುವುದಿಲ್ಲ, ಕೊಠಡಿಯಲ್ಲಿ 10 ರಿಂದ 20 ವಿದ್ಯಾರ್ಥಿಗಳು ಇರುತ್ತಾರೆ, ಸೋಲಾರ್ ಇದ್ದರೂ ಸಹ ಸ್ನಾನಕ್ಕೆ ಬಿಸಿ ನೀರು ದೊರೆಯುವುದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಕುಂದು-ಕೊರತೆ ಬಗ್ಗೆ ಪ್ರಸ್ತಾಪಿಸಿದರು. 

ವಿದ್ಯಾರ್ಥಿಗಳು ಹೇಳಿದ ಕುಂದು ಕೊರತೆಗಳನ್ನು ನಿವಾರಣೆ ಮಾಡುವ ಕೆಲಸವನ್ನು ವಾರ್ಡನ್ ಮಾಡಬೇಕು ಮತ್ತು ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ ಎಂದ ನ್ಯಾಯಾಧೀಶರು, ಹಾಸ್ಟೆಲ್‍ನಲ್ಲಿರುವ ಸಮಸ್ಯೆಗಳು ಗಂಭೀರವಾಗಿದ್ದು ಪರಿಹರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ಸಿಗುವಂತೆ ಮಾಡಲು ತಿಳಿಸಿದ ಅವರು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲು ಕ್ರಮ ಜರುಗಿಸಲಾಗುತ್ತದೆ ಎಂದರು. 

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಉಪಸ್ಥಿತರಿದ್ದರು.

error: Content is protected !!