ಕಳುವಾಗಿದ್ದ 5.18 ಕೋಟಿ ರೂ. ಮೌಲ್ಯದ ಸ್ವತ್ತು ಪತ್ತೆ, ಹಸ್ತಾಂತರ

ಕಳುವಾಗಿದ್ದ 5.18 ಕೋಟಿ ರೂ. ಮೌಲ್ಯದ ಸ್ವತ್ತು ಪತ್ತೆ, ಹಸ್ತಾಂತರ

ದಾವಣಗೆರೆ, ಡಿ. 29 – ಜಿಲ್ಲೆಯಲ್ಲಿ ಈ ವರ್ಷ 1,032 ಕಳ್ಳತನದ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 319 ಪ್ರಕರಣಗಳಲ್ಲಿ ಕಳುವಾದ ಸರಕುಗಳನ್ನು ಪತ್ತೆ ಮಾಡಲಾಗಿದೆ. ಈ ರೀತಿ ಪತ್ತೆ ಮಾಡಲಾದ ಸರಕಿನ ಮೌಲ್ಯ 5.18 ಕೋಟಿ ರೂ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ, ಕಳುವಾದ ಆಸ್ತಿ ಸ್ವತ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಉಮಾ ಪ್ರಶಾಂತ್, ಡಿಸೆಂಬರ್ ತಿಂಗಳನ್ನು ಅಪರಾಧ ತಡೆ ಮಾಸವಾಗಿ ಆಚರಿಸಲಾಗುತ್ತದೆ. ಇದರ ಅಂಗ ವಾಗಿ ಕಳುವಾದ ಆಸ್ತಿ ಮರಳಿಸುವ ಹಾಗೂ ಪ್ರದರ್ಶಿ ಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು.

ಈ ವರ್ಷ 13.48 ಕೋಟಿ ರೂ. ಮೊತ್ತದ ಸ್ವತ್ತುಗಳು ಕಳುವಾಗಿವೆ.  ಇದೇ ವರ್ಷ 5,18,93,743 ರೂ. ಮೊತ್ತದ ಸ್ವತ್ತು ಪತ್ತೆ ಮಾಡಲಾಗಿದೆ ಎಂದರು.

2.24 ಕೋಟಿ ರೂ. ಮೊತ್ತದ 4493 ಗ್ರಾಂ ಬಂಗಾರ, 35.56 ಲಕ್ಷ ರೂ. ಮೊತ್ತದ 50,183 ಗ್ರಾಂ ಬೆಳ್ಳಿ, 84.75 ಲಕ್ಷ ರೂ. ಮೊತ್ತದ 175 ದ್ವಿಚಕ್ರ ವಾಹನ ಹಾಗೂ 65.35 ಲಕ್ಷ ರೂ. ಮೊತ್ತದ ನಾಲ್ಕು ಚಕ್ರದ ವಾಹನಗಳನ್ನು ಪತ್ತೆ ಮಾಡಲಾಗಿದೆ ಎಂದವರು ವಿವರಿಸಿದರು.

2021ರಲ್ಲಿ 2.35 ಕೋಟಿ ರೂ. ಹಾಗೂ 2022ರಲ್ಲಿ 4.27 ಕೋಟಿ ರೂ. ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಪತ್ತೆ ಮಾಡಲಾದ ಆಸ್ತಿಗಳ ಮೊತ್ತ ಹೆಚ್ಚಾಗಿದೆ ಎಂದವರು ತಿಳಿಸಿದರು.

ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪವನ್ ಜ್ಯುವಲರ್ಸ್‌ನಿಂದ 30 ಕೆ.ಜಿ. ಬೆಳ್ಳಿ ಕಳುವಾಗಿದ್ದನ್ನು ಪತ್ತೆ ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಜ್ರ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಲಾಗಿದೆ ಎಂದ ವರು ಹೇಳಿದರು. ಕಳ್ಳತನ ತಡೆಗೆ ಬೀಟ್ ಹಾಗೂ ನೈಟ್ ರೌಂಡ್ಸ್ ಸೇರಿದಂತೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಳುವಾದ ಸ್ವತ್ತುಗಳನ್ನು ಪತ್ತೆ ಮಾಡುವಲ್ಲಿ ಉತ್ತಮ ಕೆಲಸ ಮಾಡಿದ ಪೊಲೀ ಸರಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡಲಾಗಿದೆ ಎಂದೂ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಕ್ಕರಗೊಳ್ಳದ ಮಂಜಪ್ಪ, ಆರು ತಿಂಗಳ ಹಿಂದೆ ನಾವು ಹಬ್ಬಕ್ಕೆಂದು ಹೋದಾಗ ಬಾಗಿಲು ಮುರಿದು ಐದು ತೊಲ ಬಂಗಾರ ಕಳ್ಳತನವಾಗಿತ್ತು ಎಂದರು.

ನಾಣ್ಯಗಳಲ್ಲೇ 50 ಸಾವಿರ ರೂ.ಗಳನ್ನು ಕೂಡಿಸಿಟ್ಟಿದ್ದೂ ಕಳ್ಳತನವಾಗಿತ್ತು. ಕದ್ದ ಬಂಗಾರವನ್ನು ಕರಗಿಸಲಾಗಿದೆ. ನಮಗೆ ಈಗ 4.5 ತೊಲ ಬಂಗಾರ ಕೊಡಲಾಗಿದೆ. ನಮ್ಮ ಬಂಗಾರ ಸಿಕ್ಕಿದ್ದು ಸಂತೋಷ ತಂದಿದೆ ಎಂದರು.

ದಾವಣಗೆರೆಯ ಹೊಂಡದ ಸರ್ಕಲ್‌ನ ವೀಣಾ ಮಾತನಾಡಿ, ಮನೆ ಮುಂದೆ ನಿಲ್ಲಿಸಲಾಗಿದ್ದ ಸ್ಕೂಟರ್ ರಾತ್ರಿ 3 ಗಂಟೆ ವೇಳೆಗೆ ಕಳುವಾಗಿತ್ತು. ಸಿ.ಸಿ.ಟಿ.ವಿ. ಮೂಲಕ ಕಳ್ಳರ ಸುಳಿವು ಸಿಕ್ಕಿತ್ತು. ಎರಡೇ ದಿನಗಳಲ್ಲಿ ಪೊಲೀಸರು ವಾಹನ ಪತ್ತೆ ಮಾಡಿದ್ದರು ಎಂದು ಹೇಳಿದರು.

ಎಎಸ್‌ಪಿಗಳಾದ ವಿಜಯಕುಮಾರ್, ಸಂತೋಷ್, ಮಂಜುನಾಥ್‌, ಡಿವೈಎಸ್ಪಿಗಳಾದ ಬಸವರಾಜ್, ಮಲ್ಲೇಶ್ ದೊಡ್ಮನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!