ದಾವಣಗೆರೆ, ಡಿ. 19 – ಜಗತ್ತಿನ ಹಿಂದೂ ಸಮಾಜ ಸಂಭ್ರಮದಿಂದ ಕಾಯುತ್ತಿದ್ದ ದಿನ ಇದೀಗ ಹತ್ತಿರವಾಗು ತ್ತಿದೆ. ಬರುವ 2024ರ ಜನವರಿ 22ರಂದು ಅಯೋಧ್ಯೆ ಯಲ್ಲಿ ಶ್ರೀ ರಾಮನ ಭವ್ಯಮಂದಿರ ಲೋಕಾರ್ಪಣೆ ಆಗಲಿದ್ದು, ಜಗತ್ತಿನ ಎಲ್ಲಾ ಹಿಂದೂಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ವಿಧಾನ ಪರಿಷತ್ತಿನ ಮಾಜಿ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಹೇಳಿದರು.
ನಗರದ ಪಿ.ಬಿ.ರಸ್ತೆಯ ಆರ್.ಹೆಚ್. ಗೀತಾ ಮಂದಿರ ಆವರಣದಲ್ಲಿರುವ ಶ್ರೀ ರಾಮ ಮಂದಿರದಲ್ಲಿ, ನಿನ್ನೆ ಏರ್ಪಾಡಾಗಿದ್ದ, ಅಯೋಧ್ಯೆಯಿಂದ ಬಂದಿರುವ ಅಕ್ಷತೆ ಪೂಜಾ ಕಾರ್ಯಕ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನವರಿ 22 ದೇಶದಾದ್ಯಂತ ಜನರು ದೀಪಗಳನ್ನು ಬೆಳಗಿಸುವ ಮೂಲಕ ರಾಮ ದೀಪಾವಳಿ ಎನ್ನುವ ರೀತಿಯಲ್ಲಿ ಆಚರಿಸಬೇಕು ಆ ಮೂಲಕ ಇಡೀ ಜಗತ್ತಿಗೆ ನಮ್ಮ ಸಂಭ್ರಮವನ್ನು ತೋರಿಸಬೇಕಾಗಿದೆ. ಇದಕ್ಕಾಗಿ ಎಲ್ಲ ರಾಜ್ಯಗಳ ಎಲ್ಲಾ ಮಂಡಲದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತುಗಳಿಗೆ ರಾಮಮಂದಿರದ ಅಹ್ವಾನ ಪತ್ರಿಕೆ, ಮಂತ್ರಾಕ್ಷತೆ, ಅಯೋಧ್ಯೆ ಮಂದಿರದ ಸಂಪೂರ್ಣ ಚಿತ್ರಪಟವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಜನವರಿ 22ರಂದು ದೇಶದ ಪ್ರತಿ ಮನೆಗಳಲ್ಲಿ ಐದು ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬ ಆಚರಿಸುವ ಮೂಲಕ ಶ್ರೀರಾಮ ದೇವರಿಗೆ ಭಕ್ತಿ ಸಮರ್ಪಣೆ ಮಾಡಬೇಕೆಂದು ಹೇಳಿದರು.
ನಂತರ ಅಕ್ಷತೆ ಮೆರವಣಿಗೆಯು ಪಿ.ಬಿ.ರಸ್ತೆ, ಚನ್ನಗಿರಿ ರಸ್ತೆ, ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತ, ಕುವೆಂಪು ರಸ್ತೆ ಮೂಲಕವಾಗಿ ಕೆ.ಬಿ. ಬಡಾವಣೆಯಲ್ಲಿರುವ ಜಯ ನಿವಾಸ ಮುಂಭಾಗದಲ್ಲಿ ರಾಮ ಮಂದಿರದ ಜಿಲ್ಲಾ ಕಾರ್ಯಾಲಯ ಉದ್ಘಾಟನೆ ಮಾಡುವುದರೊಂದಿಗೆ ಮುಕ್ತಾಯಗೊಂಡಿತು.