ದಾವಣಗೆರೆ, ಡಿ.10- ಇದೇ ದಿನಾಂಕ 23 ಹಾಗೂ 24ರಂದು ನಗರದಲ್ಲಿ ನಡೆಯಲಿರುವ ವೀರಶೈವ ಮಹಾಸಭೆಯ ಮಹಾ ಅಧಿವೇಶನದ ಹಿನ್ನೆಲೆಯಲ್ಲಿ ಎಂ.ಬಿ.ಎ. ಕಾಲೇಜು ಆವರಣದಲ್ಲಿ ಪ್ರಚಾರ ವಾಹನಗಳಿಗೆ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಂದು ಚಾಲನೆ ನೀಡಿದರು.
ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಎಸ್ಸೆಸ್, ಸಮಾವೇಶ ದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರಿರಗೂ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ವೀರಶೈವ ಪರಂಪರೆಯ ಎಲ್ಲ ಸ್ವಾಮೀಜಿಗಳೂ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಮಹಾ ಅಧಿವೇಶನದ ಬಗ್ಗೆ ಜಿಲ್ಲಾದ್ಯಂತ ಜನರಿಗೆ ಮಾಹಿತಿ ನೀಡಲು ಹಾಗೂ ಹೆಚ್ಚಿನ ಜನ ಸೇರುವಂತೆ ಕೋರಲು ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಜಾತಿ ಗಣತಿ ಬೇಕಿದ್ದರೇ ಸಿಎಂ ಸಿದ್ದರಾಮಯ್ಯ ಮಾಡಲಿ ನಮ್ಮದೇನು ಬೇಸರವಿಲ್ಲ. ಈ ಬಗ್ಗೆ ವೀರ ಶೈವ ಮಹಾ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸುವುದಾಗಿ ಇದೇ ವೇಳೆ ಹೇಳಿದರು.
ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ಮೊದಲು ಆರೋಪದಿಂದ ಹೊರಗೆ ಬರಲಿ. ಆಮೇಲೆ ಅವರನ್ನು ಅಧಿವೇಶನಕ್ಕೆ ಕರೆ ಯುವ ಕುರಿತಂತೆ ಚರ್ಚೆ ನಡೆಸುತ್ತೇವೆ ಎಂದು ಎಸ್ಸೆಸ್ ಹೇಳಿದರು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.