`ದೇಹ’ ಕುರೂಪ, `ಆತ್ಮ’ ಜ್ಯೋತಿ ಸ್ವರೂಪ

`ದೇಹ’ ಕುರೂಪ, `ಆತ್ಮ’ ಜ್ಯೋತಿ ಸ್ವರೂಪ

ದಾವಣಗೆರೆ, ಡಿ.5- ಕ್ಷಣ – ಕ್ಷಣಕ್ಕೂ ಬದಲಾಗುವ `ಶರೀರ’ ಕುರೂಪ, `ಆತ್ಮ’ ಜ್ಯೋತಿ ಸ್ವರೂಪವಾದದ್ದು. ಆದರೆ, ಈ ಕುರೂಪ ಶರೀರವೇ ನಾನು ಎಂದುಕೊಂಡು ನಾವೆಲ್ಲಾ ಬೀಗುತ್ತಿದ್ದೇವೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ವಿಶ್ಲೇಷಸಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ಸುದೀರ್ಘ ಒಂದು ತಿಂಗಳ ಕಾಲ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ ಎರಡನೇ ದಿನವಾದ ಮಂಗಳವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

ಆತ್ಮ ಹೃದಯದಲ್ಲಿದೆ ಎಂದು ಹಲವರು ತಪ್ಪು ತಿಳಿದಿದ್ದಾರೆ. ಆತ್ಮ ಇರುವುದು  ಬ್ರೈನ್ ಸಿಸ್ಟಂನಲ್ಲಿ. ಶರೀರದೆಲ್ಲೆಡೆ ಹರಡಲ್ಪಟ್ಟಿರುವ ಜ್ಞಾನವಾಹಿನಿ ಹಾಗೂ ಕ್ರಿಯಾ ವಾಹಿನಿ ನರಗಳ ಮೂಲಕ ಆತ್ಮ ಕೆಲಸ ಮಾಡುತ್ತದೆ ಎಂದು ಹೇಳಿದರು.

ದೇಹದಲ್ಲಿ ಮೆದುಳು ಕಂಪ್ಯೂಟರ್ ರೀತಿ ಕಾರ್ಯ ನಿರ್ವಹಿಸುತ್ತದೆ. ಕಣ್ಣು ಕ್ಯಾಮೆರಾ ರೀತಿ ಹೀಗೆ ಒಂದೊಂದು ಅಂಗಗಳು ಒಂದೊಂದು ಯಂತ್ರದ ರೀತಿ ಕಾರ್ಯ ನಿರ್ವಹಿಸುತ್ತವೆ. ಈ ಎಲ್ಲಾ ಯಂತ್ರಗಳನ್ನು ನಿಯಂತ್ರಿಸುವುದೇ ಆತ್ಮ ಎಂದು  ರಾಜಋಷಿ ಪ್ರತಿಪಾದಿಸಿದರು.

ಯಾರ ಕಣ್ಣಿಗೆ ಕಾಣದ ಭೌತಿಕ ವಸ್ತು ಆತ್ಮ.  ಅದು ಅಗೋಚರ ಶಕ್ತಿ. ಚೇತನ ಶಕ್ತಿ. ಅದನ್ನು ಅರಿಯುವುದು ಶರಣರ ಕರ್ತವ್ಯ. ಜ್ಞಾನದ ಮೂಲಕ ತನ್ನ ಸ್ವರೂಪವನ್ನು ತಾನು ಕಾಣಬೇಕು. ಅವನೇ ನಿಜವಾದ ಶರಣ ಎಂದು ಹೇಳಿದರು.

ಇಂದ್ರಿಯಗಳು ತನ್ನ ಸುಖಕ್ಕೆ ಆತ್ಮವನ್ನು ವಶ ಮಾಡಿಕೊಳ್ಳುತ್ತವೆ.  ಉಪನಿಷತ್‌ನಲ್ಲಿ ಹೇಳಿರುವಂತೆ `ಶರೀರ ಒಂದು ರಥವಿದ್ದಂತೆ, ಆತ್ಮ ಅದರ ಸಾರಥಿ. ಇಂದ್ರಿಯಗಳು ಕುದುರೆಗಳು. ಈ ಕುದುರೆಗಳನ್ನು ನಿಯಂತ್ರಿಸಿ, ರಥವನ್ನು ಸರಿದಾರಿಗೆ ಸಾಗಿಸುವುದೇ ಆತ್ಮದ ಕೆಲಸ’ ಎಂದು ಅವರು ವಿವರಿಸಿದರು.

ಧ್ಯಾನ, ಪ್ರಾಣಾಯಾಮ ಶತಮಾನಗಳ ಹಿಂದೆಯೇ ಇದ್ದ ಭಾರತೀಯ ವಿಜ್ಞಾನ. ಆದರೆ, ಅದು ನಮಗಲ್ಲ. ಕೇವಲ ಸನ್ಯಾಸಿಗಳಿಗೆ ಮಾತ್ರ ಎಂದು ಮಡಿವಂತಿಕೆ ಮಾಡಲಾಗಿತ್ತು. ಆದರೆ, ಇಂದು ಪ್ರಧಾನಿಯವರು ಇಡೀ ವಿಶ್ವಕ್ಕೆ ಅದನ್ನು ಪರಿಚಯಿಸಿದ್ದಾರೆ ಎಂದು ಅವರು ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಸಲು ಯು ಟ್ಯೂಬ್  ಚಾನಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada)  ವೀಕ್ಷಿಸಬಹುದು.

error: Content is protected !!