ಗ್ರಂಥಾಲಯವೇ ವಿದ್ಯಾರ್ಥಿನಿಯರ ಕಡೆ ನಡೆದಾಗ..!

ಗ್ರಂಥಾಲಯವೇ ವಿದ್ಯಾರ್ಥಿನಿಯರ  ಕಡೆ ನಡೆದಾಗ..!

ದಾವಣಗೆರೆ, ಡಿ. 5 – ಗ್ರಂಥಾಲಯಕ್ಕೆ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಬರುವುದು ಸಾಮಾನ್ಯ. ಆದರೆ, ನಗರದ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಗ್ರಂಥಾಲಯವನ್ನೇ ವಿದ್ಯಾರ್ಥಿನಿಯರ ಕಡೆ ತರಲಾಗಿತ್ತು!

ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ಈ ಕಾಲದಲ್ಲಿ, ಸೆಮಿಸ್ಟರ್‌ ಒತ್ತಡದ ಸಮಯದಲ್ಲಿ ವಿದ್ಯಾರ್ಥಿನಿಯರು ಪುಸ್ತಕ ಹಾಗೂ ಗ್ರಂಥಾಲಯ ಗಳ ಕಡೆಗಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಎ.ವಿ.ಕೆ. ಕಾಲೇಜಿನಲ್ಲಿ `ಅಭಿರುಚಿ ಇದು ಓದುಗರ ವೇದಿಕೆ’ ಎಂಬ ಹೆಸರಿನ ಕಾರ್ಯಕ್ರಮದ ಮೂಲಕ ಗ್ರಂಥಾಲಯದಲ್ಲಿರುವ ವಿಶಿಷ್ಟ ಪುಸ್ತಕಗಳನ್ನು ವಿದ್ಯಾರ್ಥಿನಿಯರಿಗೆ ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನಲ್ಲಿ ಕಳೆದ ವರ್ಷ `ಪುಸ್ತಕದ ಕಡೆ ವಿದ್ಯಾರ್ಥಿನಿಯರ ನಡೆ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಅದು ನಿರೀಕ್ಷಿತ ರೀತಿಯಲ್ಲಿ ಫಲಕಾರಿಯಾಗಲಿಲ್ಲ. ಹೀಗಾಗಿ ಈ ಬಾರಿ ಗ್ರಂಥಾಲಯದ ಪುಸ್ತಕಗಳನ್ನು ಕಾಲೇಜಿನ ಆವರಣದಲ್ಲಿ ತಂದಿರಿಸಿ, ಗ್ರಂಥಾಲಯವನ್ನೇ ವಿದ್ಯಾರ್ಥಿನಿಯರ ಬಳಿ ತರಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಾಪೂಜಿ ಶಿಕ್ಷಣ ಸಂಸ್ಥೆಯ ನಿರ್ದೇಶಕ (ಶೈಕ್ಷಣಿಕ) ಡಾ. ಎಂ.ಜಿ. ಈಶ್ವರಪ್ಪ, `ಪುಸ್ತಕಂ ಹಸ್ತ ಲಕ್ಷಣಂ’ ಎಂಬ ಮಾತಿದೆ. ಕೈಯಲ್ಲಿ ಪುಸ್ತಕ ಇದ್ದರೆ ಅದೇ ಭೂಷಣ ಎಂಬುದು ಈ ಮಾತಿನ ಅರ್ಥ. ಜ್ಞಾನಕ್ಕಾಗಿ ಪುಸ್ತಕ ಬೇಕೇ ಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ  ಬಿ.ಐ.ಇ.ಟಿ. ಕಾಲೇಜಿನ ಗ್ರಂಥಪಾಲಕ ಕೆ.ವಿ. ಮಂಜುನಾಥ್, ಮೊಬೈಲ್‌ನಲ್ಲಿ ಪಿ.ಡಿ.ಎಫ್. ಇತ್ಯಾದಿಗಳಲ್ಲಿ ಓದಿದಾಗ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಮುದ್ರಿತ ಪುಸ್ತಕವನ್ನು ಓದಿದಾಗ ಅದು ಹೆಚ್ಚಾಗಿ ಸ್ಮರಣೆಯಲ್ಲಿ ಉಳಿಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕಮಲ ಸೊಪ್ಪಿನ ಮಾತನಾಡಿ, ಕಾಲೇಜು ಶಿಕ್ಷಣವಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗೂ ಅಗತ್ಯವಾದ ಜ್ಞಾನ, ಪುಸ್ತಕ ಹಾಗೂ ನಿಯತಕಾಲಿಕಗಳಿಂದ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಹ ಸಂಚಾಲಕ ಪ್ರೊ. ಆರ್.ಆರ್. ಶಿವಕುಮಾರ್ ಹಾಗೂ  ಎ.ವಿ.ಕೆ. ಕಾಲೇಜಿನ ಗ್ರಂಥಪಾಲಕ ಹೆಚ್. ಸತೀಶ್ ಉಪಸ್ಥಿತರಿದ್ದರು.

ಎಸ್.ಜಿ. ಪಲ್ಲವಿ ಪ್ರಾರ್ಥಿಸಿದರೆ, ಅನುಷ ಬಾಯಿ ಸ್ವಾಗತಿಸಿದರು. ಕೆ.ಎಂ. ಲಕ್ಷ್ಮಿ ಹಾಗೂ ಕೆ.ಪಿ. ಭಾರ್ಗವಿ ನಿರೂಪಿಸಿದರು. ಬಿ.ಹೆಚ್. ಅಕ್ಷಿತ ವಂದಿಸಿದರು.

error: Content is protected !!