ದಾವಣಗೆರೆ, ಡಿ. 5 – ಗ್ರಂಥಾಲಯಕ್ಕೆ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಬರುವುದು ಸಾಮಾನ್ಯ. ಆದರೆ, ನಗರದ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಗ್ರಂಥಾಲಯವನ್ನೇ ವಿದ್ಯಾರ್ಥಿನಿಯರ ಕಡೆ ತರಲಾಗಿತ್ತು!
ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ಈ ಕಾಲದಲ್ಲಿ, ಸೆಮಿಸ್ಟರ್ ಒತ್ತಡದ ಸಮಯದಲ್ಲಿ ವಿದ್ಯಾರ್ಥಿನಿಯರು ಪುಸ್ತಕ ಹಾಗೂ ಗ್ರಂಥಾಲಯ ಗಳ ಕಡೆಗಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಎ.ವಿ.ಕೆ. ಕಾಲೇಜಿನಲ್ಲಿ `ಅಭಿರುಚಿ ಇದು ಓದುಗರ ವೇದಿಕೆ’ ಎಂಬ ಹೆಸರಿನ ಕಾರ್ಯಕ್ರಮದ ಮೂಲಕ ಗ್ರಂಥಾಲಯದಲ್ಲಿರುವ ವಿಶಿಷ್ಟ ಪುಸ್ತಕಗಳನ್ನು ವಿದ್ಯಾರ್ಥಿನಿಯರಿಗೆ ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನಲ್ಲಿ ಕಳೆದ ವರ್ಷ `ಪುಸ್ತಕದ ಕಡೆ ವಿದ್ಯಾರ್ಥಿನಿಯರ ನಡೆ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಅದು ನಿರೀಕ್ಷಿತ ರೀತಿಯಲ್ಲಿ ಫಲಕಾರಿಯಾಗಲಿಲ್ಲ. ಹೀಗಾಗಿ ಈ ಬಾರಿ ಗ್ರಂಥಾಲಯದ ಪುಸ್ತಕಗಳನ್ನು ಕಾಲೇಜಿನ ಆವರಣದಲ್ಲಿ ತಂದಿರಿಸಿ, ಗ್ರಂಥಾಲಯವನ್ನೇ ವಿದ್ಯಾರ್ಥಿನಿಯರ ಬಳಿ ತರಲಾಗಿತ್ತು.
ಮೊಬೈಲ್, ಸೆಮಿಸ್ಟರ್ ಶಿಕ್ಷಣ: ಪುಸ್ತಕ ದೂರ
ದಶಕಗಳ ಹಿಂದೆ ಶಿಕ್ಷಣ ಹಾಗೂ ಪುಸ್ತಕ ಒಂದೇ ನಾಣ್ಯದ ಎರಡು ಮುಖಗಳಾಗಿದ್ದವು. ಪುಸ್ತಕಗಳಿಗಾಗಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಪರದಾಡುವ ಪರಿಸ್ಥಿತಿ ಇತ್ತು. ಆದರೆ, ಬದಲಾದ ಕಾಲದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯ ಹಾಗೂ ಪುಸ್ತಕಗಳಿಂದ ದೂರವಾಗುತ್ತಿದ್ದಾರೆ.
ಸೆಮಿಸ್ಟರ್ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ಮೇಲೆ ಹೆಚ್ಚಿನ ಒತ್ತಡವಾಗಿದೆ. ಕಾಲೇಜು ಆರಂಭದ ಒಂದೆರಡು ತಿಂಗಳಾಗುವಷ್ಟರಲ್ಲಿ ಪರೀಕ್ಷಾ ಜ್ವರ ಏರಿರುತ್ತದೆ. ಹೀಗಾಗಿ ಪುಸ್ತಕಗಳನ್ನು ಓದುವುದು ಕಡಿಮೆಯಾಗಿದೆ ಎಂದು ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ ಎಸ್.ಜಿ. ಪಲ್ಲವಿ ತಿಳಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹಲವಾರು ಸೆಮಿನಾರ್, ಅಸೈನ್ಮೆಂಟ್, ಪ್ರಾತ್ಯಕ್ಷಿಗೆಗಳಲ್ಲಿ ಪಾಲ್ಗೊಳ್ಳಬೇಕಿದೆ. ಇದರಿಂದಾಗಿ ಪುಸ್ತಕಗಳಿಗೆ ಹೆಚ್ಚು ಸಮಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿನಿ ಅಕ್ಷತ ಹೇಳಿದರು.
ಆದರೆ, ಪುಸ್ತಕಗಳಿಂದ ಆಳವಾದ ಜ್ಞಾನ ಸಿಗುತ್ತದೆ. ಹೆಚ್ಚು ಮಾಹಿತಿ ಸಿಗುವುದ ರಿಂದ ಪರೀಕ್ಷೆಗೆ ಅನುಕೂಲವಾಗುತ್ತದೆ. ಕನಿಷ್ಠ ದಿನಕ್ಕೆ ಒಂದು ಗಂಟೆಯಾದರೂ ಗ್ರಂಥಾಲಯದ ಬಳಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಬಿ.ಎ. ತೃತೀಯ ವರ್ಷದ ವಿದ್ಯಾರ್ಥಿನಿ ಕೆ.ಎಂ. ಲಕ್ಷ್ಮಿ ಅಭಿಪ್ರಾಯ ಪಟ್ಟರು.
ಗ್ರಂಥ ಹಿಡಿದವರಿಗೆ ಬಹುಮಾನ
ಅತಿ ಹೆಚ್ಚು ಗ್ರಂಥಾಲಯ ಬಳಸಿಕೊಂಡ ವಿದ್ಯಾರ್ಥಿನಿಯರಾದ ಕೆ.ಎಂ. ಲಕ್ಷ್ಮಿ, ಎಸ್.ಬಿ. ಐಶ್ವರ್ಯ ಹಾಗೂ ಮೆಹಕ್ ಖಾನುಂ ಹಾಗೂ ಬೋಧಕರಾದ ಆರ್.ಸಿ. ಗೌಡ, ಮೊಹಮ್ಮದ್ ರಜಾವುಲ್ಲಾ ಖಾನ್ ಹಾಗೂ ರವಿ ಕುಮಾರ್ ಅವರಿಗೆ ಇದೇ ವೇಳೆ ಬಹುಮಾನ ನೀಡಲಾಯಿತು. ಮುಂದಿನ ವರ್ಷ ಇನ್ನೂ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಬೇಕೆಂದು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕಮಲ ಸೊಪ್ಪಿನ ಸೂಚನೆಯನ್ನೂ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಾಪೂಜಿ ಶಿಕ್ಷಣ ಸಂಸ್ಥೆಯ ನಿರ್ದೇಶಕ (ಶೈಕ್ಷಣಿಕ) ಡಾ. ಎಂ.ಜಿ. ಈಶ್ವರಪ್ಪ, `ಪುಸ್ತಕಂ ಹಸ್ತ ಲಕ್ಷಣಂ’ ಎಂಬ ಮಾತಿದೆ. ಕೈಯಲ್ಲಿ ಪುಸ್ತಕ ಇದ್ದರೆ ಅದೇ ಭೂಷಣ ಎಂಬುದು ಈ ಮಾತಿನ ಅರ್ಥ. ಜ್ಞಾನಕ್ಕಾಗಿ ಪುಸ್ತಕ ಬೇಕೇ ಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಬಿ.ಐ.ಇ.ಟಿ. ಕಾಲೇಜಿನ ಗ್ರಂಥಪಾಲಕ ಕೆ.ವಿ. ಮಂಜುನಾಥ್, ಮೊಬೈಲ್‌ನಲ್ಲಿ ಪಿ.ಡಿ.ಎಫ್. ಇತ್ಯಾದಿಗಳಲ್ಲಿ ಓದಿದಾಗ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಮುದ್ರಿತ ಪುಸ್ತಕವನ್ನು ಓದಿದಾಗ ಅದು ಹೆಚ್ಚಾಗಿ ಸ್ಮರಣೆಯಲ್ಲಿ ಉಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕಮಲ ಸೊಪ್ಪಿನ ಮಾತನಾಡಿ, ಕಾಲೇಜು ಶಿಕ್ಷಣವಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗೂ ಅಗತ್ಯವಾದ ಜ್ಞಾನ, ಪುಸ್ತಕ ಹಾಗೂ ನಿಯತಕಾಲಿಕಗಳಿಂದ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಹ ಸಂಚಾಲಕ ಪ್ರೊ. ಆರ್.ಆರ್. ಶಿವಕುಮಾರ್ ಹಾಗೂ ಎ.ವಿ.ಕೆ. ಕಾಲೇಜಿನ ಗ್ರಂಥಪಾಲಕ ಹೆಚ್. ಸತೀಶ್ ಉಪಸ್ಥಿತರಿದ್ದರು.
ಎಸ್.ಜಿ. ಪಲ್ಲವಿ ಪ್ರಾರ್ಥಿಸಿದರೆ, ಅನುಷ ಬಾಯಿ ಸ್ವಾಗತಿಸಿದರು. ಕೆ.ಎಂ. ಲಕ್ಷ್ಮಿ ಹಾಗೂ ಕೆ.ಪಿ. ಭಾರ್ಗವಿ ನಿರೂಪಿಸಿದರು. ಬಿ.ಹೆಚ್. ಅಕ್ಷಿತ ವಂದಿಸಿದರು.