ಸಿರಿಗೆರೆ: ಕನ್ನಡ ರಾಜ್ಯೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ತರಳಬಾಳು ಶ್ರೀ
ಸಿರಿಗೆರೆ, ನ.5- ಬುದ್ಧನ ಪ್ರಭಾವದಿಂದ ಅಂಗುಲಿಮಾಲ ಹೇಗೆ ಜಾಗೃತನಾದನೋ ಹಾಗೆ ವಚನಗಳು ಸಮಾಜದ ಜನರನ್ನು ಜಾಗೃತ ಗೊಳಿಸಿವೆ ಎಂದು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯ ಶ್ರೀ ಗುರುಶಾಂತೇ ಶ್ವರ ದಾಸೋಹ ಮಂಪಟದಲ್ಲಿ 3ನೇ ದಿನದ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸಹಭಾಗಿತ್ವ ದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಧರ್ಮವನ್ನು ಉಪದೇಶ ಮಾಡುವವರು ಮೊದಲು ಅದರ ಬಗ್ಗೆ ಆಳವಾದ ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳಬೇಕು. ಜೊತೆಗೆ ಭಕ್ತಿಯ ಪ್ರತಿಷ್ಠಾಪನೆ ಮುಖ್ಯ. ಆದರೆ ಉಪನಿಷತ್ತಿಗಿಂತ ಹೆಚ್ಚಿನ ವಿಚಾರಗಳು ವಚನಗಳಲ್ಲಿವೆ. ಲೌಕಿಕ ಜೀವನದಲ್ಲಿ ಹೇಗೆ ಬದುಕಬೇಕೆಂಬ ತುಡಿತವನ್ನು ವಚನ ಸಾಹಿತ್ಯ ತಿಳಿಸಿದೆ. ವಚನ ಕಾರರು ವೇದಗಳಲ್ಲಿನ ಮೌಢ್ಯವನ್ನು ವಿರೋಧಿಸಿದರೇ ವಿನಃ ವೇದವನ್ನಲ್ಲ. ಮಾತು, ಕೃತಿ ಒಂದಾಗಿರುವುದೇ ವಚನ ಸಾಹಿತ್ಯ. ವಚನಗಳ ಪಠಣೆ ಯಿಂದ ವ್ಯಕ್ತಿಯ ಗುಣ ಸ್ವಭಾವ, ಮನಸ್ಸು ತಿಳಿಯಾಗುತ್ತದೆ ಎಂದರು.
ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅವರು ಮಾತನಾಡಿ, ಶ್ರೀಗಳು ಸಾಮಾಜಿಕ, ಶೈಕ್ಷಣಿಕ, ಅಧ್ಯಾತ್ಮಿಕ ಸೇವೆಗಳ ಜೊತೆಗೆ ಯುವ ಸಾಧಕರಿಗೆ ಆದರ್ಶವಾಗಿದ್ದಾರೆ. ಸಿರಿಗೆರೆ ಶ್ರೀಗಳು 21ನೇ ಶತಮಾನದ ಆಧ್ಯಾತ್ಮಿಕ ತಂತ್ರಜ್ಞಾನದ ಸಂತ. ಶ್ರೀಗಳು ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತಂದು ರೈತರ ಬದುಕಿಗೆ ಜೀವನಾಡಿಯಾಗಿದ್ದಾರೆ. ಎಂದು ತಿಳಿಸಿದರು.
ಫ್ರಾನ್ಸ್ ದೇಶದ ಆರ್ಯಲ್ ಎಂಬ ನೇವಿ ಅಧಿಕಾರಿ 1850ರಲ್ಲಿ ಸಾಹಿತ್ಯ ಆಸಕ್ತನಾಗಿದ್ದನು. ಅವನ ಬಳಿ ತಾಳೆಗರಿಗಳಿದ್ದವು. ಅನಾರೋಗ್ಯದಿಂದ ಮರಣ ಹೊಂದಿದ ನಂತರ ಅವನ ಉಯಿಲು ಬರೆದಿರುವಂತೆ ಅವನ ಸಂಗ್ರಹವನ್ನೆಲ್ಲಾ ಪ್ಯಾರಿಸ್ಗೆ ತೆಗೆದುಕೊಂಡು ಹೋಗಲಾಯಿತು. 1985ರಲ್ಲಿ ಪ್ಯಾರಿಸ್ಗೆ ಹೋದಾಗ ಗ್ರಂಥಾಲಯದಲ್ಲಿ ಕುತೂಹಲಕ್ಕಾಗಿ ತಾಳೆಗರಿಗಳನ್ನು ವೀಕ್ಷಿಸುತ್ತಿರುವಾಗ ತಮಿಳು ಲಿಪಿಯ ಒಂದು ಕಟ್ಟು ದೊರಕಿತು. ಅದನ್ನು ಪರಿಶೀಲಿಸುತ್ತಿರುವಾಗ ಅದರಲ್ಲಿ ಬಸವಣ್ಣನವರ ವಚನಗಳು ಎಂಬುದು ತಿಳಿಯಿತು. ಮುಂದಿನ ಸಲ ಪ್ಯಾರಿಸ್ಗೆ ಹೋಗುವಷ್ಟರಲ್ಲಿ ತಮಿಳು ಅಕ್ಷರಗಳನ್ನು ಕಲಿತು, ಸ್ವಂತ ಹಸ್ತಾಕ್ಷರದಲ್ಲಿ ಅದರ ಪ್ರತಿ ಮಾಡಿಕೊಂಡು ಬಂದೆವು. 17ನೆಯ ಶತಮಾನದ ಕಾಲಘಟ್ಟದಲ್ಲಿ ತಮಿಳು ಭಾಷೆಗೆ ಅನುವಾದಗೊಂಡಿರುವ ಬಸವಣ್ಣನವರ ವಚನಗಳನ್ನು ನಾವು ಸಂಪಾದಿಸಿ ಗಣಕೀಕರಣಗೊಳಿಸಿದ್ದು ಶೀಘ್ರದಲೇ ಪ್ರಕಟಣೆಗೆ ಸಿದ್ಧಪಡಿಸಲಾಗುವುದು ಎಂದು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.
ಮಧ್ಯಾಹ್ನ ತಂತ್ರಜ್ಞಾನದೊಂದಿಗೆ ಭಾಷಾ ಬೋಧನೆ ಎಂಬ ವಿಚಾರ ಗೋಷ್ಠಿ ಏರ್ಪಡಿಸಲಾಗಿದ್ದು, ಬೆಂಗಳೂರು ಇನ್ಸೈಟ್ಸ್ ಐ.ಎ.ಎಸ್.ಸಂಸ್ಥೆಯ ನಿರ್ದೇಶಕ ಬಿ.ಜಿ.ವಿನಯಕುಮಾರ್ ಅಧ್ಯಕ್ಷತೆಯಲ್ಲಿ ಪ್ರದೀಪ್ ಮತ್ತು ಟಿ.ಎಂ.ಬಸವರಾಜ್ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಧಾರವಾಡದ ವಚನ ಸಾಹಿತ್ಯದ ಸಂಶೋಧಕ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿ ಮಾತನಾಡಿ, 22 ಸಾವಿರ ವಚನಗಳನ್ನು ಗಣಕೀಕೃತ ಮಾಡಿ ಸುಲಭವಾಗಿ ಜನಸಾಮಾನ್ಯರ ಅಂಗೈಯಲ್ಲಿ ವಚನಗಳನ್ನು ನೋಡವ ಹಾಗೆ ಮಾಡಿದ ಶ್ರೀಗಳು ವಚನಗಣಕ ಋಷಿ. ಯಾವುದೇ ಜಾತಿ, ಮತ, ಪಂಥಕ್ಕೆ ವಚನ ಸಾಹಿತ್ಯ ಸೇರಿಲ್ಲ. ಇದು ಮಾನವತೆಗೆ ಸಂಬಂಧಿಸಿದೆ ಎಂದರು.
ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಕುರಿತು ಡಾ.ಬಿ.ನಂಜುಂಡಸ್ವಾಮಿ ಮಾತನಾಡಿ, ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಮುದ್ರಿತವಾಗಿರುವ ವಚನ ಸಾಹಿತ್ಯ ವನ್ನು ಸಂಗ್ರಹಿಸಬೇಕು. ಯುವಕರು ಹಸ್ತಪ್ರತಿಗಳನ್ನ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಚನ ಸಾಹಿತ್ಯಕ್ಕೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಆದ್ದರಿಂದ ಶ್ರೀಗಳು ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ನಡೆಸಿ ಅಲ್ಲಿನ ಸಾಫ್ಟ್‌ವೇರ್ ಇಂಜಿನಿಯರ್‍ಗಳಿಗೆ ವಚನಗಳ ಗಣಕೀಕೃತದ ಮಾಹಿತಿಯನ್ನು ತಿಳಿಸಿದರೆ, ಆಗ ಯುವಕರಿಗೆ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡುತ್ತದೆ ಎಂದು ತಿಳಿಸಿದರು.
ಧಾರವಾಡ ಆಕಾಶವಾಣಿ ಸುದ್ದಿ ವಾಚಕರಾದ ಡಾ.ಶ್ರೀಧರ ಹೆಗಡೆ ಮಾತನಾಡಿ, ನಡವಳಿಕೆ ಹಾಗೂ ಮಾತುಗಾರಿಕೆಯನ್ನು ಪರಿಸರದಿಂದ ಕಲಿಯುತ್ತೇವೆ. ಉತ್ತಮರ ಸಹವಾಸ ಮುತ್ತಿನ ಹಾಗೆ, ಮಧ್ಯಮರ ಸಹವಾಸ ಮುತ್ತಿನ ಹಾರದಂತೆ, ಹಾಗೆ ದರುಳರ ಸಹವಾಸ ಬರೀ ಹಾರದಂತೆ. ಉತ್ತಮರ ಸಹವಾಸದಿಂದ ಉತ್ತಮ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಯಾರಿಗೆ ಬದುಕಿಸುವ ಶಕ್ತಿ ಇಲ್ಲವೋ ಅವರಿಗೆ ಕೊಲ್ಲುವ ಶಕ್ತಿಯೂ ಇಲ್ಲ. ವಚನಗಳಿಂದ ಬದುಕು ರೂಪುಗೊಳ್ಳುತ್ತದೆ ಇದಕ್ಕೆ ಶರಣರ ಸಂಘ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಬಿ.ರಂಗನಾಥ್, ವಿಶೇಷಾಧಿಕಾರಿ ವೀರಣ್ಣ ಜತ್ತಿ, ಡಾ.ಎಚ್.ವಿ.ವಾಮದೇವಪ್ಪ ಶಾಲಾ-ಕಾಲೇಜುಗಳ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಇದ್ದರು.