ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತರಳಬಾಳು ಜಗದ್ಗುರುಗಳ ಅಭಿಮತ
ಸಿರಿಗೆರೆ, ಅ. 18- ಸರ್ಕಾರವು ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಪಠ್ಯದಲ್ಲಿ ಕಡ್ಡಾಯವಾಗಿ ಯೋಗ ಶಿಕ್ಷಣದ ಜೊತೆಗೆ ಸಂಗೀತ, ನೃತ್ಯಕ್ಕೂ ಹೆಚ್ಚಿನ ಮನ್ನಣೆ ನೀಡಿದರೆ ಮಕ್ಕಳ ಮನಸ್ಸು ತಿಳಿಯಾಗಿ ಹದಗೊಳ್ಳುತ್ತದೆ ಎಂದು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಹಾಗೂ ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ 14, 17 ವರ್ಷ ವಯೋಮಿತಿ ಯೊಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ-ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಹಾಗೂ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳು ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಅ. 18ರಿಂದ 20ರವರೆಗೆ ನಡೆಯಲಿದ್ದು, ಬುಧವಾರ ಈ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ, ಮಾತನಾಡಿದರು.
ಯೋಗದಿಂದ ಏಕಾಂತತೆ, ಶಿಸ್ತು ಮೂಡುತ್ತದೆ. ಆದ್ದರಿಂದ ಪಠ್ಯಕ್ರಮದ ವ್ಯವಸ್ಥೆ ಬದಲಾವಣೆಯಾಗಿ ಯೋಗ ಶಿಕ್ಷಣವನ್ನು ಸೇರ್ಪಡೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಪತಂಜಲಿಯ ಯೋಗ ಸೂತ್ರದಲ್ಲಿ ಯೋಗ ಎಂದರೆ ಕೇವಲ ಆಸನಗಳೇ ಯೋಗ ಅಲ್ಲ. ಆಸನಗಳು ಯೋಗದ ಒಂದು ಭಾಗ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಸಮಾಧಿ ಎಂಬ ಅಷ್ಟಾಂಗ ಸೂತ್ರ ವನ್ನು ರಾಜಯೋಗವೂ ವಿವರಿಸಿದಂತೆ ಯೋಗಾಸನವು ಶರೀರ ಮತ್ತು ಮನಸ್ಸಿಗೆ ಬಹಳ ಹತ್ತಿರದ ಸಂಬಂಧ ಹೊಂದಿದೆ. ಯೋಗಾಸನವು ಮನಸ್ಸನ್ನು ಹತೋಟಿಗೆ ತರಲು ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿ. ಯೋಗದಿಂದ ಶರೀರವನ್ನು ಹೇಗೆ ಪಳಗಿಸಬಹುದೋ ಹಾಗೆ ಮನಸ್ಸನ್ನು ಪಳಗಿಸು ವುದು ಮುಖ್ಯ ಎಂದು ಶ್ರೀಗಳು ಹೇಳಿದರು.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ನಮ್ಮ ತರಳಬಾಳು ಕಲಾ ಸಂಘದ ಮಕ್ಕಳು ಮಲ್ಲಕಂಬ, ಮಲ್ಲಿಹಗ್ಗ ಮುಂತಾದ ಕಾರ್ಯಕ್ರಮಗಳ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಧಾನಪರಿಷತ್ನ ಕೆ.ಎಸ್.ನವೀನ್ ಮಾತನಾಡಿ, ಯೋಗವು ಇಂದು ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತದೆ. 150 ದೇಶಗಳು ಯೋಗವನ್ನು ಸಂಪೂರ್ಣವಾಗಿ ಒಪ್ಪಿದ್ದಾರೆ. ಇದಕ್ಕೆ ಭಾರತ ಕೊಡುಗೆ ಅನನ್ಯ. ಯಾರು ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಾರೋ ಅವರ ಮನಸ್ಸು ಮತ್ತು ದೇಹ ಎರಡೂ ಸಹ ನಿಯಂತ್ರಣದಿಂದ ಇರಲು ಸಾಧ್ಯ. ಯೋಗ ಒಂದು ರೋಮಾಂಚನಕಾರಿಯಾದ ಕಾರ್ಯಕ್ರಮ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ. ಚಂದ್ರಪ್ಪ, ಯೋಗ ಒತ್ತಡವನ್ನು ಕಡಿಮೆ ಮಾಡುತ್ತದೆ. ವಿರಾಮವಿಲ್ಲದ ಕೆಲಸದ ನಂತರ ನೀವು ಯೋಗ ಮಾಡಿದರೆ ಒತ್ತಡ ಕಡಿಮೆಯಾಗುವುದನ್ನು ಕಾಣಬಹುದು. ಯೋಗವು ಸಮಾಜದೊಳಗೆ ಇನ್ನಷ್ಟು ಅರಳಬೇಕಿದೆ. ಧ್ಯಾನದ ಮೂಲಕ ಮನಸ್ಸನ್ನು ಸಕಾರಾತ್ಮಕವಾಗಿ ಅಣಿಗೊಳ್ಳಿಸಬಹುದು ಎಂದರು.
ಮಲ್ಲಗಂಬ ಪ್ರದರ್ಶಿಸಿದ ಬಾಲಕರಿಗೆ ಹಾಗೂ ಮಲ್ಲಿಹಗ್ಗ ಪ್ರದರ್ಶಿಸಿದ ಬಾಲಕಿಯರಿಗೆ ಬಹುಮಾನವಾಗಿ ಶಾಸಕ ಎಂ. ಚಂದ್ರಪ್ಪ ತಲಾ 5 ಸಾವಿರ ರೂ. ನೀಡಿದರು.
ಕಾರ್ಯಕ್ರಮದಲ್ಲಿ ಸಿ.ಇ.ಟಿ ಸಹ ನಿರ್ದೇಶಕರಾದ ಟಿ.ಜಿ. ಲೀಲಾವತಿ, ಜಿಲ್ಲಾ ದೈಹಿಕ ಶಿಕ್ಷಣಾಕಾರಿ ಎ. ಪರಶುರಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್, ಡಿಡಿಪಿಐ ಕಚೇರಿಯ ಸಮಗ್ರ ಶಿಕ್ಷಣದ ಅಧಿಕಾರಿ ಸಿ.ಎಸ್.ವೆಂಕಟೇಶಪ್ಪ, ದಾವಣಗೆರೆಯ ಜಿಲ್ಲಾ ದೈಹಿಕ ಶಿಕ್ಷಣದ ಅಧಿಕಾರಿ ಮಂಜುಳಾ, ರಾಜ್ಯಮಟ್ಟದ ತೀರ್ಪುಗಾರರಾದ ಚನ್ನಪಟ್ಟಣದ ಗೀತಾ, 6 ತಾಲ್ಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರು ಮತ್ತು 11 ಜಿಲ್ಲೆಗಳಿಂದ ಆಗಮಿಸಿದ ಯೋಗ ಪಟುಗಳು, ಚಿತ್ರದುರ್ಗ ಜಿಲ್ಲಾ ಹಾಗೂ ತಾಲ್ಲೂಕು ಎಲ್ಲ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಿರ್ದೇಶಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.