ಭಾರತದ ಭೂ ಪಟ ಚಂದ್ರಲೋಕದವರೆಗೆ ವಿಸ್ತರಿಸಿದ ವಿಜ್ಞಾನಿಗಳು

ಭಾರತದ ಭೂ ಪಟ ಚಂದ್ರಲೋಕದವರೆಗೆ ವಿಸ್ತರಿಸಿದ ವಿಜ್ಞಾನಿಗಳು

ಲಿಂ. ಶ್ರೀಗಳವರ 31ನೇ ಶ್ರದ್ಧಾಂಜಲಿಯ ಮೂರನೆಯ ದಿನದ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರುಗಳ ಶ್ಲ್ಯಾಘನೆ

ಸಿರಿಗೆರೆ, ಸೆ.22- ಭಾರತದ ಭೂಪಟವನ್ನು ಚಂದ್ರಲೋಕದವರೆಗೆ ವಿಸ್ತರಿಸಿ, ಭಾರತದ ಹಿರಿಮೆಯನ್ನು ಹೆಚ್ವಿಸಿದ ಕೀರ್ತಿ ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ. ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಸಿರಿಗೆರೆಯ ಗುರುಶಾಂತೇಶ್ವರ ಭವನದ ಮುಂಭಾಗದ ವಿಶಾಲ ವೇದಿಕೆಯಲ್ಲಿ ಶುಕ್ರವಾರ  ಜರುಗಿದ ಲಿಂ.ಶ್ರೀಗಳ 31ನೆಯ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಡೀ ಜಗತ್ತು ಚಂದ್ರಯಾನವನ್ನು ಕುತೂಹಲದಿಂದ ವೀಕ್ಷಿಸಿತು. ತಾಯಂದಿರು ಮಕ್ಕಳಿಗೆ ಹಾಲು ಕುಡಿಸುವಾಗ ಚಂದ್ರನನ್ನು ತೋರಿಸುತ್ತಿದ್ದರು. ಅದರಿಂದ ಪ್ರೇರಣೆ ಪಡೆದ ನಮ್ಮ ವಿಜ್ಞಾನಿಗಳು ಚಂದ್ರನಿಗೆ ಲಗ್ಗೆ ಹಾಕಿ ಚಂದ್ರಯಾನವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಶ್ಲ್ಯಾಘಿಸಿದರು.

ಭೂಮಿ ಮೇಲೆ ಬದುಕುವವರಿಗೆ ಪ್ರಜ್ಞೆ ಬೇಕಿದೆ. ಹೇಗೆ ಜೀವಿಸಬೇಕೆಂಬ ಪ್ರಜ್ಞೆ ಇರಬೇಕು. ಅಂತಹ ಪ್ರಜ್ಞೆ ಮೂಡಿಸುವುದೇ ಧರ್ಮ ಹಾಗೂ  ಭಾರತೀಯ ಸಂಸ್ಕೃತಿ. ಲಿಂ.ಜಗದ್ಗುರುಗಳು ಅಂತಹ ಪ್ರಜ್ಞಾವಂತರನ್ನಾಗಿ ನಿಮ್ಮನ್ನು ಮಾಡಬೇಕೆಂದು ಸ್ವಾತಂತ್ರ್ಯ ಪೂರ್ವ ದಿಂದ ಅವರು ಮಾಡಿದ ಪ್ರಯತ್ನ, ಶಾಲೆಗಳು ಇಂದು ಬೃಹತ್ತಾಗಿ ಬೆಳೆದಿವೆ. ನಿಮ್ಮ ಮೇಲೆ ತುಂಬಾ ಆಶಾಭಾವನೆ ಇದೆ ಎಂದು ಹೇಳಿದರು.

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ತಾಲ್ಲೂಕಿನ ಏತ ನೀರಾವರಿ ಯೋಜನೆ ಸಂಬಂಧಿಸಿದ ಗರ್ಭಗುಡಿ ಬ್ಯಾರೇಜ್ ಕಾಮಗಾರಿ ಪೂರ್ಣಗೊಳಿಸಲು ಸಿರಿಗೆರೆ ಶ್ರೀಗಳವರ ಮಾರ್ಗದರ್ಶನ ಅಗತ್ಯವಾಗಿದ್ದು, ಮುಂದಿನ ವರ್ಷಗಳಲ್ಲಿ ಹರಪನಹಳ್ಳಿ ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಆಚರಿಸಲು ಅವಕಾಶ ಮಾಡಿಕೊಡಿ ಎಂದರು.

ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಸ್ಪೋಕನ್ ಇಂಗ್ಲೀಷ್ ಮುಖ್ಯ. ಹಿರಿಯ ಶ್ರೀಗಳವರು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ ಮುನ್ನುಡಿಯಾಗಿದ್ದಾರೆ ಎಂದರು.

ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಮಾತನಾಡಿ,. ಶ್ರೀ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಮಾ ಜದ ಪರಿವರ್ತಕರಾಗಿ ಜೀವನದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಸಿರಿಗೆರೆ ಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಭವ್ಯ ಭಾರತದ ಮಾದರಿ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾದ ಜರ್ಮನಿಯ ಆನಿ ಫಿಟ್ಜರ್ ಕನ್ನಡದಲ್ಲಿಯೇ ಮಾತನಾಡಿ ಮೆಚ್ಚುಗೆ ಗಳಿಸಿದರು. ಕೊಪ್ಪಳ ವಿಶ್ವವಿದ್ಯಾನಿಲಯ ಕುಲಪತಿ ಡಾ. ಬಿ.ಕೆ.ರವಿ ಮಾತನಾಡಿದರು. ಕಲಾವಿದರಾದ ಆನಂದ ಎಸ್.ಪಾಟೀಲ್ ಅವರ ತಂಡ ವಚನಗೀತೆ ಹಾಡಿದರು. ಬರ್ಗಿ ಕುಮುಟಾದ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷ ಮಿತ್ರ ಮಂಡಳಿ ಯಕ್ಷಗಾನ ಹಾಗೂ ತರಳಬಾಳು ಕಲಾಸಂಘದ ತಂಡದವರು ಸೋಲಿಗರ ನೃತ್ಯ, ಕರಗ ಕೋಲಾಟ ನೃತ್ಯಪ್ರದರ್ಶನ ಪ್ರದರ್ಶಿಸಿದರು.

ಇಸ್ರೋ ವಿಜ್ಞಾನಿಗಳಾದ  ರಾಮನಗೌಡ ವಿ ನಾಗನಗೌಡ, ಗೋವಿಂದರಾಜ್ ಶೆಟ್ಟಿ, ಹೇಮಲತಾ ಶ್ರೀ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್, ಹೆಚ್.ವಿ.ವಾಮದೇವಪ್ಪ ಉಪಸ್ಥಿತರಿದ್ದರು.

error: Content is protected !!