ಗಣೇಶೋತ್ಸವ ಸಂಭ್ರಮಕ್ಕೆ ಕ್ಷಣಗಣನೆ

ಗಣೇಶೋತ್ಸವ ಸಂಭ್ರಮಕ್ಕೆ ಕ್ಷಣಗಣನೆ

ಹಬ್ಬದ ಖರೀದಿ ಭರಾಟೆ ಜೋರು, ಮಾರುಕಟ್ಟೆಯಲ್ಲಿವೆ ನಾನಾ ಬಗೆಯ ವಿಗ್ರಹಗಳು

ದಾವಣಗೆರೆ, ಸೆ. 17- ಗಣೇಶನ ಪ್ರತಿಷ್ಟಾಪನೆ ಇಂದೋ ನಾಳೆಯೋ ಎಂಬ ಗೊಂದಲದ ನಡುವೆಯೇ ಉತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.

ಜಿಲ್ಲಾಡಳಿತ  ಪಿಒಪಿ ಗಣೇಶನ ವಿಗ್ರಹ ಮಾರಾಟ ಮಾಡದಂತೆ ಕಟ್ಟು ನಿಟ್ಟಿನ ಆದೇಶ ನೀಡಿದೆ. ಮಹಾನಗರ ಪಾಲಿಕೆ ವತಿಯಿಂದ ಗಣೇಶನ ವಿಸರ್ಜನೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಕೆಲವು ಉದ್ಯಾನವನಗಳಲ್ಲಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಲಾಗಿದೆ.

ಸ್ಥಳೀಯ ಕಲಾವಿದರೂ ಸೇರಿದಂತೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ವಿವಿಧ ರೀತಿಯ ಗಣೇಶ ವಿಗ್ರಹಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಲ್ಪಟ್ಟಿವೆ. 

ವಾರದ ಕೊನೆಯ ದಿನವೂ ಆಗಿದ್ದರಿಂದ ಭಾನುವಾರ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.  ಮಾವಿನ ಸೊಪ್ಪು,  ಸೇವಂತಿಗೆ, ಚಂಡೆ ಹೂ ಗಳನ್ನು ಹಳ್ಳಿಗರು ಪ್ರಮುಖ ರಸ್ತೆ, ವೃತ್ತಗಳಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದರು. ಮಾರುಕಟ್ಟೆಯಲ್ಲಿ ಗಣೇಶನ ಪೆಂಡಾಲ್‌ಗೆ ಬೇಕಾದ ಅಲಂಕಾರಿಕ ವಸ್ತುಗಳ ಖರೀದಿಯೂ ನಡೆಯಿತು.

ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೇ.30ರಷ್ಟು ಬಣ್ಣ ರಹಿತ ವಿಗ್ರಹಗಳನ್ನೇ ಮಾರಾಟಕ್ಕೆ ತರಲಾಗಿತ್ತು. 

ಬೀದಿ ಬದಿ ಗಣೇಶನ ಪ್ರತಿಷ್ಠಾಪನೆಗೆ ತಡರಾತ್ರಿ ವರೆಗೂ ಯುವಕರು ಸಿದ್ಧತೆಯಲ್ಲಿ ತೊಡಗಿದ್ದರು. ಸಂಘ-ಸಂಸ್ಥೆಗಳು ಇಂದು ಸೋಮವಾರವೇ ಗಣೇಶೋತ್ಸವ ಆಚರಿಸಲಿವೆ. ಆದರೆ ಮನೆಗಳಲ್ಲಿ ಪ್ರತಿಷ್ಟಾಪನೆ ಕುರಿತು ಗೊಂದಲಗಳಿವೆ. ಕೆಲವರು ಸೋಮವಾರ ಮತ್ತೆ ಕೆಲವರು ಮಂಗಳವಾರ ಉತ್ಸವ ಆಚರಣೆಗೆ ಮುಂದಾಗಿದ್ದಾರೆ.

error: Content is protected !!