ಜಗಳೂರು, ಸೆ. 14 – 125 ವರ್ಷಗಳಲ್ಲಿಯೇ ತೀವ್ರ ಮಳೆ ಕೊರತೆಯಾಗಿದ್ದು, ಮುಂಗಾರು ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದರಿಂದಾಗಿ ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದು ರೈತರಿಗೆ ನೆರವಾಗಲಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಇಂದು ಕಂದಾಯ, ತೋಟಗಾರಿಕೆ, ಕೃಷಿ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಗಳೂರು ತಾಲ್ಲೂಕು ಆರಂಭದಲ್ಲಿ ಮದ್ಯಮಾವಧಿ ಪಟ್ಟಿಗೆ ಸೇರಿದ್ದರಿಂದ ರೈತರು ಗೊಂದಲಕ್ಕೀಡಾಗಿದ್ದರು. ನಾನೂ ಸೇರಿದಂತೆ ತಾಲ್ಲೂಕು ಮಟ್ಟದ ಕಂದಾಯ, ತೋಟಗಾರಿಕೆ, ಕೃಷಿ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಮೂರು ಹೋಬಳಿಯಲ್ಲಿ ಮಳೆ ಬಾರದೇ ಬೆಳೆ ಒಣಗಿ ಹೋಗಿರುವ ಜಮೀನುಗಳಿಗೆ ಬೇಟಿ ನೀಡಿದ್ದೆವು. ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಬೆಳೆಗಳು ಒಣಗಿ ಹೋಗಿರುವ ಬಗ್ಗೆ ಸರ್ಕಾರಕ್ಕೆ ವರಧಿ ನೀಡಲಾಗಿತ್ತು. ಈಗ ಸರ್ಕಾರ ಜಗಳೂರನ್ನು ಬರಪೀಡಿತ ಪ್ರದೇಶವಾಗಿ ಘೋಷಣೆ ಮಾಡಿದೆ ಎಂದರು.
ಈಗಾಗಲೇ ಮುಂಗಾರು ಬೆಳೆಗಳು ಸಂಪೂರ್ಣ ಒಣಗಿಹೋಗಿವೆ. ಹಿಂಗಾರು ಮಳೆಯದರೆ ಕಡಲೆ, ಬಿಳಿಜೋಳ, ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ರೈತರು ಸಿದ್ದರಾಗಿದ್ದಾರೆ. ಆದ್ದರಿಂದ ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ದಾಸ್ತಾನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ತಾಲ್ಲೂಕಿನ ಮೇವಿನ ಕೊರತೆ ಕಂಡು ಬಂದರೆ ಮುಂಜಾಗೃತಿಯಾಗಿ ಗೋಶಾಲೆಯನ್ನು ತೆರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೃಷಿ ಸಚಿವರನ್ನು ಬೇಟಿ ಮಾಡಿ ತಾಲ್ಲೂಕಿನ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಅಪ್ಪರ್ ಭದ್ರಾ ಮೇಲ್ದಂಡೆ ನಿರ್ಮಾಣದ 15 ಜನರ ತಂಡ ಗುರುವಾರ ಬಂದು ಕೆಲವು ಭಾಗದಲ್ಲಿ ಕಾಮಗಾರಿ ಕುಂಠಿತವಾಗಿರುವ ಬಗ್ಗೆ ಕಾಮಗಾರಿ ನಮಗೆ ಮಾಹಿತಿಯನ್ನು ನೀಡಿದ್ದಾರೆ. ಈ ಸಂಬಂಧ ಚಿತ್ರದುರ್ಗ ಜಲ್ಲಾಧಿಕಾರಿಗಳಿಗೂ ಅಲ್ಲಿನ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ. ಅಪ್ಪರ್ ಭದ್ರಾ ನೀರು ಒದಗಿಸಲು 24 ಕಡೆ ಪಂಪ್‍ಹೌಸ್ ನಿರ್ಮಿಸಲಾಗುವುದು. 20 ಕಡೆ ರೈತರ ಭೂಮಿಯನ್ನು ಖರೀದಿಸಿ ಪಂಪಹೌಸ್ ಮಾಡಬೇಕಿದೆ. ಅತಿ ಶೀರ್ಘದಲ್ಲೇ ಅಂದರೆ ಜೂನ್ ತಿಂಗಳಲ್ಲಿ ಚಿತ್ರದುರ್ಗದ ಭಾಗದವರೆಗೆ ತರುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಸಿರಿಗೆರೆ ಶ್ರೀಗಳ ಮಾರ್ಗದರ್ಶನದಲ್ಲಿ 57 ಕೆರೆಗಳ ನೀರು ತುಂಬಿಸುವ ಯೋಜನೆಯು ಭರದಿಂದ ನಡೆಯು ತ್ತಿದೆ. ಈಗಾಗಲೇ 11 ಕೆರೆಗಳಿಗೆ ನೀರು ಬರುತ್ತಿದೆ. ಮುಂ ದಿನ ದಿನಗಳಲ್ಲಿ ಇತರೇ ಕೆರೆಗಳಿಗೂ ನೀರು ಹರಿಸ ಲಾಗುವುದು. ರೈತರು ಆತಂಕಪಡುವುದು ಬೇಡ ಎಂದರು.
ನೆನಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಚುರುಕು ನೀಡಬೇಕು. ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಟೆಂಡರ್ ಆಗಿದ್ದರೂ ಗುತ್ತಿಗೆದಾರರು ಕೆಲಸ ಮಾಡದೇ ಬಿಟ್ಟಿದ್ದಾರೆ. ಅವರನ್ನು ಕರೆಯಿಸಿ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳಿ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಒತ್ತಾಯಿಸಿದ್ದರು. ಈ ಬಗ್ಗೆಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕರುತಿಳಿಸಿದರು.
ಈಸಂದರ್ಭದಲ್ಲಿ ತಹಸೀಲ್ದಾರ್ ಅರುಣ್ ಕಾರಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ಧೇಶಕ ತೋಟದಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶಿರ್ ಅಹಮ್ಮದ್, ಕೆಪಿಸಿಸಿ ಸದಸ್ಯ ಕಲೇಶ್‍ರಾಜ್ ಪಟೇಲ್, ಮುಖಂಡರಾದ ಸುದೀರ್‍ರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ, ಮಹಮದ್‍ಗೌಸ್, ಮುಂತಾದವರು ಇದ್ದರು.