ಚಿತ್ರೋತ್ಸವಕ್ಕೆ ಚಾಲನೆ, ಗಾಜಿನ ಮನೆಯಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಸಲಹೆ
ದಾವಣಗೆರೆ, ಸೆ.13- ಕಲಾ ಚಟುವಟಿಕೆಗಳು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗದೇ ಜನರು ನಡುವೆ ನಡೆಯುವಂತಾಗಬೇಕು ಎಂದು ಬಾಪೂಜಿ ಶಿಕ್ಷಣ ಸಂಸ್ಥೆಯ ಸದಸ್ಯರೂ, ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಚಿತ್ರೋತ್ಸವ-2023 ಉದ್ಘಾಟಿಸಿ ಅವರು ಮಾತನಾಡಿದರು.
ಕಲಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಗಾಜಿನ ಮನೆ ನಿರ್ಮಿಸಿದ್ದರು. ಮುಂದಿನ ದಿನಗಳಲ್ಲಿ ದಸರಾ ಹಬ್ಬಗಳಲ್ಲಿ ಗಾಜಿನ ಮನೆಯಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಸಾಣೇಹಳ್ಳಿಯಲ್ಲಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅವರು ನಾಟಕ ಶಿಬಿರಗಳನ್ನು ಆಯೋಜಿಸುವಂತೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಮಕ್ಕಳಿಗೆ ಚಿತ್ರಕಲಾ ತರಬೇತಿ ಶಿಬಿರ ಹಮ್ಮಿಕೊಳ್ಳುವಂತೆ ಹೇಳಿದ ಪ್ರಭಾ ಮಲ್ಲಿಕಾರ್ಜುನ್, ನನ್ನ ಮಗನಿಗೂ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಅವನು ಹತ್ತು ವರ್ಷದವನಿದ್ದಾಗ ಬೇಸಿಗೆ ಶಿಬಿರಕ್ಕೆ ಕಳುಹಿಸಿದ್ದೆ ಎಂದು ನೆನಪಿಸಿಕೊಂಡರು.
ಬೇಸಿಗೆ ಶಿಬಿರದಿಂದ ಕಲೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಸಹಕಾರಿಯಾಗುತ್ತದೆ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಿಮಗಾಗಿ ಸಮಯ ಮೀಸಲಿಡಿ
ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಕ್ಯಾನ್ಸರ್, ಬಿಪಿ, ಸಕ್ಕರೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸು ವಂತೆ ಡಾ.ಪ್ರಭಾ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಐದು ವರ್ಷಗಳ ಹಿಂದೆ ಪ್ರತಿ ಲಕ್ಷ ಯುವಕರಲ್ಲಿ 100 ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿತ್ತು. ಈಗ ಅದರ ಪ್ರಮಾಣ 103ಕ್ಕೆ ಏರಿದೆ. ಉತ್ತಮ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವ ಎಲ್ಲಾ ಅರಿವಿದ್ದರೂ ಆಚರಣೆಗೆ ತರುವಲ್ಲಿ ನಿರ್ಲಕ್ಷ್ಯ ವಹಿಸು ವುದರಿಂದ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಿತ್ಯ ದೈಹಿಕ ಹಾಗೂ ಮಾನಸಿಕ ವ್ಯಾಯಾಮ, ಉತ್ತಮ ಆಹಾರ, ಶಿಸ್ತು ಬದ್ಧ ಜೀವನ ರೂಢಿಸಿಕೊಳ್ಳಿ, ನಿಮಗಾಗಿ ಸಮಯ ಮೀಸಲಿಡಿ ಎಂದು ಹೇಳಿದರು.
ಕಲೆ ದೇಶದ ಹೆಮ್ಮೆಯ ಪ್ರತೀಕ
ಅಜಂತಾ-ಎಲ್ಲೋರಗಳಲ್ಲಿ ನಮ್ಮ ಕಲಾ ಪರಂಪರೆ ಅನಾವರಣ ಗೊಂಡಿದೆ. ಅಲ್ಲಿನ ಗೋಪುರದ ಮಾದರಿ ಆಸಕ್ತಿಕರ ವಿಷಯವಾಗಿದೆ. ಇಂತಹ ಕಲೆ ನಮ್ಮ ದೇಶದ ಹೆಮ್ಮೆಯ ಪ್ರತೀಕ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ರಾಜಕಾರಣಿಗಳು ತೆಗೆದುಕೊಂಡ ನಿರ್ಧಾರಗಳು ಜನ ಸಾಮಾನ್ಯರ ಮೇಲೆ ಉಂಟುಮಾಡುವ ಪ್ರಭಾಗಳ ಕುರಿತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಆರ್.ಕೆ. ಲಕ್ಷ್ಮಣ್ ಅವರ ಕಾರ್ಟೂನ್ಗಳು ನನ್ನ ಗಮನ ಸೆಳೆಯುತ್ತಿದ್ದವು ಎಂದು ಇದೇ ವೇಳೆ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಪಿ.ಎಸ್. ಕಡೇಮನಿ ಮಾತನಾಡುತ್ತಾ, ರಾಜ್ಯದಲ್ಲಿ 111 ಕಲಾ ಕಾಲೇಜುಗಳ ಪೈಕಿ 40 ಕಾಲೇಜುಗಳು ಮಾತ್ರ ಉಳಿದುಕೊಂಡಿವೆ. ಈ ಪೈಕಿ 12 ಕಾಲೇಜುಗಳು ಮಾತ್ರ ಸರ್ಕಾರದಿಂದ ಅನುದಾನ ಪಡೆಯುತ್ತಿವೆ. 25 ವರ್ಷ ಕಳೆದರೂ ಉಳಿದ ಕಾಲೇಜುಗಳು ಅನುದಾನಕ್ಕೊಳಪಟ್ಟಿಲ್ಲ ಎಂದು ಹೇಳಿದರು.
ಕಳೆದ 15 ವರ್ಷಗಳಿಂದ ಹೈಸ್ಕೂಲ್‌ಗಳಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆ ಭರ್ತಿ ಮಾಡಿಲ್ಲ. ಎಲ್ಲರಲ್ಲೂ ಕಲೆ ಬಗ್ಗೆ ಆಸಕ್ತಿ ಇರುವುದಿಲ್ಲ. ಆಸಕ್ತಿ ಇದ್ದವರನ್ನು ಬೆಳೆಸಿ, ಪ್ರೋತ್ಸಾಹಿಸಲು ಶಿಕ್ಷಕರ ಅಗತ್ಯವಿದೆ. ಅವರಾದರೂ ಅರೆ ಹೊಟ್ಟೆಯಲ್ಲಿ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ಒಂದೇ ಅವಕಾಶಕ್ಕಾಗಿ ಕಾಯಬಾರದು. ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು. ಕೃತಿ ಚೋರರಾಗದೆ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮಾತನಾಡುತ್ತಾ, ಮುಂದಿನ ವರ್ಷ ದೃಶ್ಯಕಲಾ ಮಹಾವಿದ್ಯಾಲಯವು 60 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಪ್ರಾಚಾರ್ಯ ಡಾ.ಜೈರಾಜ್ ಎಂ.ಚಿಕ್ಕಪಾಟೀಲ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ರಾಜ್ಯದಲ್ಲಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಏಕೈಕ ಕಾಲೇಜು ನಮ್ಮದಾಗಿದ್ದು, 127 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರವೇಶಾತಿ ಹೆಚ್ಚಾಗಿರುವುದು ಹೆಮ್ಮೆಯ ವಿಚಾರ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳೂ ಆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸುಲೋಚನಾ ವೇಣುಗೋಪಾಲ್, ಹಿರಿಯ ವ್ಯಂಗ್ಯಚಿತ್ರ ಕಲಾವಿದ ಹೆಚ್.ಬಿ.ಮಂಜುನಾಥ್, ಸಾಹಿತಿ ಬಾ.ಮ. ಬಸವರಾಜಯ್ಯ ಹಾಗು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೋಧನಾ ಸಹಾಯಕ ದತ್ತಾತ್ರೇಯ ಎನ್.ಭಟ್ ನಿರೂಪಿಸಿದರು. ವಿದ್ಯಾರ್ಥಿ ಮುರಳಿ ಕೃಷ್ಣ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ ವಂದಿಸಿದರು.