ಹಾಡಗಲೇ ಮನೆಗೆ ನುಗ್ಗಿ ದರೋಡೆ

ಬಾಲಾಜಿ ಲೇ ಔಟ್‌ನಲ್ಲಿ ಮಧ್ಯಾಹ್ನ ನಡೆದ ಘಟನೆ, 

ಮಹಿಳೆ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ 5 ಲಕ್ಷ ರೂ. ಕಿತ್ತುಕೊಂಡು ಪರಾರಿ

ದಾವಣಗೆರೆ, ಸೆ.13- ನಗರದ ಕುಂದುವಾಡ ರಸ್ತೆಯಲ್ಲಿನ ಬಾಲಾಜಿ ಲೇ ಔಟ್ ಲೇಕ್ ವಿವ್ಯೂ ಬಡಾವಣೆಯೊಂದರ ಮನೆಯಲ್ಲಿ ಹಾಡು ಹಗಲೇ ದರೋಡೆ ನಡೆದಿದೆ.

ಶ್ರೀನಾಥ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಮುಂಭಾಗ ಒಂದೆರಡು ಬಾರಿ ಸಂಚರಿಸಿ, ಮನೆಯಲ್ಲಿ  ಪುರುಷರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಳ್ಳ, ಶ್ರೀನಾಥ್ ಪತ್ನಿ ರಾಜೇಶ್ವರಿ ಮಧ್ಯಾಹ್ನ ಕಸ ಹಾಕಲು ಹೊರ ಬಂದಾಗ ಮನೆಯೊಳಗೆ ನುಗ್ಗಿ ಸ್ಟೋರ್‌ ರೂಂ ಒಳಗೆ ಅವಿತುಕೊಂಡಿದ್ದಾನೆ.

ರಾಜೇಶ್ವರಿ ಅವರಿಗೆ ಸಂದೇಹ ಬಂದು ನೋಡಿದಾಗ ಅವರ ಮೇಲೆ ಏಕಾ ಏಕಿ ಕಲ್ಲಿನಿಂದ ತಲೆಗೆ ಚಚ್ಚಿದ್ದಾನೆ. ನಂತರ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಕ್ಕೂ ಮುನ್ನ ರಾಜೇಶ್ವರಿ ಅವರ ಚಿಕ್ಕ ಮಗುವನ್ನೂ ಬೆದರಿಸಿ ಕೊಠಡಿಯಲ್ಲಿ ಮಲಗಿಸಿದ್ದ  ಎನ್ನಲಾಗಿದೆ.

ನಂತರ ಮಹಿಳೆಯನ್ನು ಗಾಡ್ರೇಜ್ ಬೀರು ಬಳಿ ಕರೆದೊಯ್ದು ಅದರಲ್ಲಿದ್ದ , ಮಗನ ಆಸ್ಪತ್ರೆ ಖರ್ಚಿಗೆಂದು ಇಟ್ಟುಕೊಂಡಿದ್ದ ಐದು ಲಕ್ಷ ರೂ. ಪಡೆದು ಮನೆಯಿಂದ ಓಡಿ ಹೋಗಿದ್ದಾನೆ. ಸದ್ಯ ರಾಜೇಶ್ವರಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾ ಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸ್ ಶ್ವಾನ ಕುಂದುವಾಡ ಕೆರೆ ವರೆಗೆ ಹೋಗಿ ನಿಂತಿದೆ ಎನ್ನಲಾಗಿದೆ. ದರೋಡೆಕೋರನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ದರೋಡೆಕೋರನ ಹುಡುಕಾಟದಲ್ಲಿದ್ದಾರೆ. 

ಎಸ್ಪಿ ಉಮಾ ಪ್ರಶಾಂತ್ ಗಾಯಾಳು ರಾಜೇಶ್ವರಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಶೀಘ್ರವೇ ಕಳ್ಳನನ್ನು ಬಂಧಿಸಿ, ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಘಟನೆಯ ಪೂರ್ಣ ವಿವರನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿರುವ ಪಾಲಿಕೆ ಮಾಜಿ ಮೇಯರ್ ಪಿ.ಜಿ. ಅಜಯ್ ಕುಮಾರ್, ನಗರದ ಹೊರ ವಲಯದ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

error: Content is protected !!