ರೋಗಿಗಳಿಗೆ ಧೈರ್ಯ ತುಂಬಿ ಚಿಕಿತ್ಸೆ ನೀಡಬೇಕು

ರೋಗಿಗಳಿಗೆ ಧೈರ್ಯ ತುಂಬಿ ಚಿಕಿತ್ಸೆ ನೀಡಬೇಕು

ಮದರ್ ಥೆರೇಸಾ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್

ದಾವಣಗೆರೆ, ಆ. 29 – ನಗರದ ಸಿ.ಜಿ. ಆಸ್ಪತ್ರೆಯಲ್ಲಿರುವ ಸರ್ಕಾರಿ ಶುಶ್ರೂಷ ತರಬೇತಿ ಶಾಲೆ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಮದರ್ ಥೆರೇಸಾರ 113ನೇ ಜನ್ಮ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮದರ್ ಥೆರೇಸಾ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಹಿರಿಯ ಶುಶ್ರೂಷ ಅಧಿಕಾರಿ ಸುವರ್ಣ ಬಿ. ಅಂಕಲಗಿ, ಶುಶ್ರೂಷ ಬೋಧಕಿ ಡಿ. ಸೌಭಾಗ್ಯಮ್ಮ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಟಿ. ನಾಗರತ್ನ ಅವರಿಗೆ ಮದರ್ ಥೆರೇಸಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, ರೋಗಿಗಳನ್ನು ಅತ್ಯಂತ ಪ್ರೀತಿ, ಕರುಣೆಯಿಂದ ನೋಡಬೇಕು. ಅವರಲ್ಲಿ ಭಯದ ಬದಲು ದಯೆಯನ್ನು ಹುಟ್ಟಿಸುವಂತಾಗಬೇಕು. ಯಾವ ರೋಗಿಯನ್ನು ಅವನ ಕಾಯಿಲೆಗನುಸಾರ ದೂರವಿಡುವುದು, ಅವನನ್ನು ಅಸಹ್ಯವಾಗಿ ಕಾಣುವುದು ಸೇವೆಯಲ್ಲ. ನಿಜವಾಗಲು ಅವನ ನೋವನ್ನು ಅರಿತು ಅವನೊಂದಿಗೆ ಪ್ರೀತಿಯಿಂದ ಮಾತನಾಡಿ, ಚಿಕಿತ್ಸೆ ಮಾಡಿ ಧೈರ್ಯ ತುಂಬಬೇಕು ಎಂದು ಹೇಳಿದರು.

ಕುಷ್ಠ, ಕ್ಷಯ ಹಾಗೂ ಏಡ್ಸ್ ರೀತಿಯ ರೋಗಗಳಿಗೆ ಗುರಿಯಾದವರಿಗೆ ಮದರ್ ಥೆರೇಸಾ ಅಪಾರ ನೆರವು ನೀಡಿದ್ದರು. ಕುಷ್ಠ ರೋಗಿಗಗಳನ್ನು ಸಮಾಜದಿಂದ ದೂರವಿಡುತ್ತಿದ್ದ ಕಾಲದಲ್ಲಿ, ರೋಗಿಗಳಿಗೆ ಸಾಂತ್ವನ ಹೇಳಿ ನೆರವು ನೀಡುತ್ತಿದ್ದರು ಎಂದು ಹೇಳಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಸೇವೆಯೇ ಪರಮ ಧರ್ಮವಾಗಿದೆ. ಮದರ್ ಥೆರೇಸಾ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಮತ್ತಿತರರು ಸಮಾಜ ಸೇವೆಯ ಮಹತ್ವ ಸಾರಿದ್ದಾರೆ. ಶುಶ್ರೂಷಕರು ಸೇವೆಯಲ್ಲಿ ತೊಡಗುವ ಅದೃಷ್ಟ ಪಡೆದಿದ್ದಾರೆ. ಸೇವೆಯನ್ನು ಸಂತೋಷದಿಂದ ಪಾಲಿಸಬೇಕು ಎಂದರು.

ನಿವಾಸಿ ವೈದ್ಯಾಧಿಕಾರಿ  ಡಾ. ನಾಗೇಂದ್ರಪ್ಪ ಮಾತನಾಡಿ, ವೈದ್ಯ ಮತ್ತು ಶುಶ್ರೂಷಕರದ್ದು ಪವಿತ್ರ ವೃತ್ತಿ.   ಶುಶ್ರೂಷಕರು ವೈದ್ಯ ಮತ್ತು ರೋಗಿಗಳಿಗೆ ಸೇತುವೆಯಾಗಿ ಕೆಲಸ ಮಾಡಬೇಕು. ಮುಗುಳ್ನಗೆಯೊಂದಿಗೆ ನಿಸ್ವಾರ್ಥದಿಂದ ಸೇವೆಗೈದಾಗ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ. ನಾಗವೇಣಿ, ಶುಶ್ರೂಷ ಅಧೀಕ್ಷಕಿ ವರಲಕ್ಷ್ಮಿ ಬಿ. ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು. ಸರ್ಕಾರಿ ಶುಶ್ರೂಷ ತರಬೇತಿ ಶಾಲೆಯ ಪ್ರಾಂಶು ಪಾಲೆ ಎಸ್. ನಳಿನಾಕ್ಷಿ ಅಧ್ಯಕ್ಷತೆ ವಹಿಸಿದ್ದರು.

ಎಂ.ಕೆ. ಇಂದಿರಮ್ಮ ಪ್ರಾರ್ಥಿಸಿದರು. ಡಿ. ಸೌಭಾಗ್ಯಮ್ಮ ಸ್ವಾಗತಿಸಿದರು. ಆರ್. ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಎಂ.ಕೆ. ಕುಮಾರ್ ವಂದಿಸಿದರು.

error: Content is protected !!