ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ದಾಳಿ ಸಲ್ಲದು

ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ದಾಳಿ ಸಲ್ಲದು

ಹರಪನಹಳ್ಳಿ, ಮೇ 5-  ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳು ದಾಳಿ ಮಾಡುತ್ತಿರುವುದು ಸರಿಯಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಡಿ.ರಾಮನಮಲಿ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಪರಿಷತ್ತು ಸಾಹಿತಿಗಳಿಗೆ. ಕವಿಗಳಿಗೆ, ಕನ್ನಡದ ಜನತೆಗೆ ಹಬ್ಬದ ವಾತಾವರಣ ನಿರ್ಮಿಸಿ ಜ್ಞಾನಾರ್ಜನೆಯನ್ನು ನೀಡುತ್ತಾ ಬಂದಿದೆ. ರಾಜ, ಮಹಾರಾಜರುಗಳು, ವಿಶೇಶ್ವರಯ್ಯನಂತಹವರಿಂದ ಇಲ್ಲಿಯವರೆಗೆ ಅನೇಕ ಸಾಹಿತಿಗಳು, ಬರಹಗಾರರು, ಕವಿಗಳು, ಕನ್ನಡ ಅಭಿವೃದ್ಧಿಗಾಗಿ ತಮ್ಮದೇ ಆದ ಕೊಡುಗೆ ನೀಡಿ, ಕನ್ನಡ ಬದಲಾವಣೆಗಾಗಿ ನಿರಂತರವಾಗಿ ದುಡಿದಿದ್ದಾರೆ. ಕನ್ನಡ ನೆಲ, ಜಲ ಸಂರಕ್ಷಣೆ ಮಾಡುವ ಧ್ಯೇಯವನ್ನು ಕಸಾಪ ಹೊಂದಿದ್ದು, ಇಲ್ಲಿಯವರೆಗೂ ಕಸಾಪದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಕಸಾಪ ಹಿತರಕ್ಷಣೆ ಕಾಯುತ್ತಾ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದ ಅವರು, ಅನೇಕ ರಾಜ್ಯಾಧ್ಯಕ್ಷರು ಉತ್ತಮವಾದ ಕೆಲಸಗಳನ್ನು ಕಸಾಪದಲ್ಲಿ ಮಾಡಿದ್ದಾರೆ, ಮುಂದಿನ ಪೀಳಿಗೆಗಾಗಿ ಕನ್ನಡ ಉಳಿಸುವ ಕೆಲಸ ನಮ್ಮೆಲ್ಲರಿಂದ ಆಗಲಿ ಎಂದು ಹೇಳಿದರು.

ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ, ಕನ್ನಡ ಭಾಷೆ ತಾಯಿ ಭಾಷೆಯಾಗಬೇಕು. ನಿರಂತರ ಸಂಪರ್ಕ ಸಾಧನ, ಬದುಕಿನ ದ್ರವ್ಯವಾಗಬೇಕಿದೆ. ಮಾತೃಭಾಷೆ ಬದುಕಿನ ಭಾಗವಾಗಬೇಕು. ರಾಜ್ಯದಲ್ಲಿ ಪಂಪನಿಂದ ಇಲ್ಲಿಯವರೆಗೂ ಕನ್ನಡ ಭಾಷೆಯು ಕಥೆ, ನಾಟಕ, ಕವನ, ಸಾಹಿತ್ಯದಲ್ಲಿ ಸಾಕಷ್ಠು ಅಭಿವೃದ್ದಿಯಾಗಿದ್ದು, ಅದರಲ್ಲೂ 12ನೇ ಶತಮಾನದ ಶರಣರು ಜನಸಾಮಾನ್ಯರ ಭಾಷೆಯಾಗಿ ಮೂಢನಂಬಿಕೆ, ಕಂದಾಚಾರಗಳನ್ನು ಹೊಗಲಾಡಿಸಲು ವಚನಗಳ ಮೂಲಕ ಭಾಷೆಯ ಅಭಿವೃದ್ಧಿಗೆ ಶ್ರಮಿಸಿದರು ಎಂದರು.

ಹರಪನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಭವ್ಯವಾದ  ಇತಿಹಾಸವಿದ್ದು, ಕನ್ನಡವು ನಮ್ಮ ಬದುಕಿನ ಭಾಗ, ನಮ್ಮ ಆಲೋಚನೆ,  ಸಂಸ್ಕಾರ,  ಸಂಸ್ಕೃತಿ, ಜೀವನ ಶೈಲಿ, ಬದುಕು, ಬರಹ, ಎಲ್ಲೆಡೆಯೂ ಕನ್ನಡವಿದೆ. ಕನ್ನಡ ನಮ್ಮ ನಮ್ಮ ಅಸ್ಮಿತೆ, ಕನ್ನಡ ಸಾಹಿತ್ಯ ಪರಿಷತ್ ನಾಲ್ಕು ಸದಸ್ಯತ್ವದಿಂದ ಆರಂಭವಾಗಿ ಇಂದು 2.5 ಲಕ್ಷಕ್ಕೂ ಅಧಿಕ ಸದಸ್ಯತ್ವ ಹೊಂದಿ ಹೆಮ್ಮರವಾಗಿದ್ದು, ದೇಶ, ಹೊರದೇಶಗಳಲ್ಲಿ ಕನ್ನಡದ ಕಂಪು ಪಸರಿಸುವ ಕೆಲಸ ಮಾಡುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಬಿ.ರಾಮಪ್ರಸಾದ ಗಾಂಧಿ, ಗೌರವ ಕಾರ್ಯದರ್ಶಿಗಳಾದ ಆರ್.ಪದ್ಮರಾಜ ಜೈನ್, ಜಿ.ಮಹಾದೇವಪ್ಪ, ತೆಲಿಗಿ ಹೋಬಳಿ ಘಟಕದ ಅಧ್ಯಕ್ಷ ವೀರಭದ್ರಪ್ಪ, ಸದಸ್ಯರಾದ ಪಿ.ಕರಿಬಸಪ್ಪ, ಹೆಚ್.ದೇವರಾಜ, ಶಿಕ್ಷಕರಾದ ರಮೇಶ ಹಾಗೂ ಇತರರು ಇದ್ದರು.

error: Content is protected !!