ಮಕ್ಕಳು ಗೊತ್ತಿಲ್ಲದಿರುವುದನ್ನು ಪ್ರಶ್ನಿಸಿ ಉತ್ತರ ಪಡೆಯುವುದನ್ನು ಕಲಿತುಕೊಳ್ಳಬೇಕು

ಮಕ್ಕಳು ಗೊತ್ತಿಲ್ಲದಿರುವುದನ್ನು ಪ್ರಶ್ನಿಸಿ  ಉತ್ತರ ಪಡೆಯುವುದನ್ನು ಕಲಿತುಕೊಳ್ಳಬೇಕು

ಗೋಣಿವಾಡದ ಸೋಮೇಶ್ವರ ವಸತಿ ಶಾಲೆಯಲ್ಲಿ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ

ದಾವಣಗೆರೆ, ಜ. 6- ಮಕ್ಕಳು ಗೊತ್ತಿಲ್ಲದೇ ಇರುವುದನ್ನು ಪ್ರಶ್ನಿಸಿ ಉತ್ತರ ಪಡೆಯುವುದನ್ನು ಕಲಿತುಕೊಳ್ಳಬೇಕು, ನಾನು ಪ್ರಶ್ನಿಸಿಯೇ ಇಲ್ಲಿವರೆಗೆ ಬಂದಿದ್ದೇನೆ ಎಂದು ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಹೇಳಿದರು.

ನಗರದ ಹೊರವಲಯದ ಗೋಣಿವಾಡದ ಸೋಮೇಶ್ವರ ವಸತಿ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಸೋಮೇಶ್ವರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ. ರಾಜ್‌ಕುಮಾರ್ ಅವರಿಂದ ಕಂಠೀರವ ಸ್ಟುಡಿಯೋದಲ್ಲಿ ಹಾಡನ್ನು ಹೇಳಿಸಿದ ಕೀರ್ತಿ ನನಗಿದೆ. 1985ರಲ್ಲಿ ಮೈಸೂರಿನ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ನಾನು ಮತ್ತು ಚಿತ್ರನಟ ದಿ.ಶಂಕರ್ ನಾಗ್ ಕಾರ್ಯನಿರ್ವಹಿಸಿರುವ ಹೆಮ್ಮೆ ಇನ್ನೂ ಹಸಿರಾಗಿದೆ. 70 ಜನ ದಲಿತ ಕಲಾವಿದರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ, 3 ಜನ ದಲಿತ ಕವಿಗಳಿಗೆ ಪದ್ಮಶ್ರೀ ಪ್ರಶಸ್ತಿ ಕೊಡಿಸಿದೆ. ಹಂಪಿ ಉತ್ಸವದಲ್ಲಿ ಮೇದಾರ ಜಾತಿಯವರಿಂದ ಚಪ್ಪರ ಹಾಕಿಸಿದ್ದನ್ನು ಕೀಳಿಸಿದರು, ಆದರೂ ಬಿಡದೇ ಬೆಟ್ಟ ಗುಡ್ಡಗಳಿಗೆ ಲೈಂಟಿಂಗ್ ಹಾಕಿ ಹಂಪಿ ಉತ್ಸವವನ್ನು ನೆರೆವೇರಿಸಿದೆನು ಎಂದು ತಮ್ಮ ಬದುಕಿನ ಕೆಲ ಘಟನೆಗಳನ್ನು ನೆನೆದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಣ್ವಕುಪ್ಪೆ ಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತ ದೇಶ ವಿಶ್ವಕ್ಕೆ ಗುರುವಾಗಿ ಬೆಳೆದಿದೆ. ಇಲ್ಲಿನ ಸಾಂಸ್ಕೃತಿಕ ಪರಂಪರೆ ಅನುಗ್ರಹಿಸಿದ ಕೀರ್ತಿ ಶರಣರಿಗೆ, ತಪಸ್ವಿಗಳಿಗೆ ಸಲ್ಲುತ್ತದೆ. ನಾವುಗಳು ಶ್ರೇಷ್ಠ, ಪುಣ್ಯದ ಕೆಲಸ ಮಾಡಿದ್ದರ ಫಲವಾಗಿ ಮನುಷ್ಯರಾಗಿ ಜನಿಸಿದ್ದೇವೆ. ಹಾಗಾಗಿ ಪುಣ್ಯ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸಬೇಕು.  ಆಗ ಜೀವನದಲ್ಲಿ  ಎಷ್ಟೇ ಕಷ್ಟಗಳು ಬಂದರೂ ಬಗೆಹರಿಸುವಂತಹ ಭಗವಂತನ ಕಾರುಣ್ಯ ಇರುತ್ತದೆ ಎಂದರು.

ನಿವೃತ್ತ ಸೇನಾಧಿಕಾರಿಯೂ ಆಗಿರುವ ವೈದ್ಯ ಡಾ. ಹಾಲೇಶ್, ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ, ಡಿಡಿಪಿಐ ಜಿ. ಕೊಟ್ರೇಶ್, ಸರ್‌ಎಂವಿ ಕಾಲೇಜು ಕಾರ್ಯದರ್ಶಿ ಶ್ರೀಧರ್, ಶಾಲೆ ಕಾರ್ಯದರ್ಶಿ ಕೆ.ಎಂ. ಸುರೇಶ್, ಅಧ್ಯಕ್ಷ ಅಶೋಕ್ ರೆಡ್ಡಿ, ಪ್ರಾಚಾರ್ಯ ವೀಣಾ ಸುರೇಶ್ ಇತರರು ಇದ್ದರು.  

ವಾಲ್ಮೀಕಿ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ. ವೀರಣ್ಣ ಮತ್ತು ಪತ್ನಿ ಲಕ್ಷ್ಮಿದೇವಿ, ಕುಕ್ಕುವಾಡ ಆಂಜನೇಯ ಸೌಹಾರ್ದ ಸಂಘದ ಅಧ್ಯಕ್ಷ ರುದ್ರೇಗೌಡರಿಗೆ ಸೋಮೇಶ್ವರ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

error: Content is protected !!