ಭಯವಿಲ್ಲದ… `ಬುಲ್ಲೆಟ್ ರಾಣಿ’

ಬುಲ್ಲೆಟ್ ರಾಣಿ. ಯಾವುದೋ ಒಂದು ಸಿನಿಮಾ ಟೈಟಲ್ ಎನಿಸುತ್ತಿದೆಯಲ್ಲವೇ? ಈ ರಾಣಿ ಆ ಚಿತ್ರದ ನಾಯಕಿ ಹೆಸರಿರಬಹುದು ಎಂದು ನೀವು ಊಹಿಸಿರಲೂಬಹುದು. ಆದರೆ, ಈ ವೀರ ವನಿತೆ ರೀಲ್ ನಾಯಕಿಯಲ್ಲ, ರಿಯಲ್ ನಾಯಕಿ. ಕಷ್ಟದಲ್ಲಿದ್ದವರಿಗೆ ನೆರವಾಗಲು ಬುಲ್ಲೆಟ್ ನಲ್ಲಿ ಬರುವ ಬ್ರೇವ್ ಲೇಡಿ. ಈಕೆಯ ಹೆಸರು ದಶಮಿ ರಾಣಿ ಮೋಹನ್. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ರಾಣಿ ಎಂದು ಕರೆಯುತ್ತಾರೆ.

ಮೊನ್ನೆ ಲಾಕ್‌ಡೌನ್ ಸಮಯದಲ್ಲಿ ದಾವಣಗೆರೆಯ ಕ್ಯಾನ್ಸರ್ ರೋಗಿಯೊಬ್ಬರಿಗೆ ಆರೋಗ್ಯ ವಿಷಮಗೊಂಡಿತ್ತು. ಅವರಿಗೆ ತುರ್ತಾಗಿ ಕಿಮೋಥೆರಪಿ ಚಿಕಿತ್ಸೆ ನೀಡಬೇಕಿತ್ತು. ತಕ್ಷಣ ಅವರನ್ನು ಬೆಂಗಳೂರಿಗೆ ಕರೆದೊಯ್ಯುವುದು ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಸಾಧ್ಯವಿರಲಿಲ್ಲ. ದಾವಣಗೆರೆಯಲ್ಲಿಯೇ ಆ ರೋಗಿಗೆ ಚಿಕಿತ್ಸೆ ಕೊಡಿಸಲು ಕಿಮೋಥೆರಪಿಗೆ ಬೇಕಾದ ಔಷಧ ಲಭ್ಯವಿರಲಿಲ್ಲ. ಸರಿ, ಬೆಂಗಳೂರಿನಿಂದ ತರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾಗ ಬೆಂಗಳೂರಿನಲ್ಲಿದ್ದ ಆ ರೋಗಿಯ ಸಂಬಂಧಿ ಅರವಿಂದ್ ವಿ. ಶೆಟ್ರು ಈ ದಶಮಿ ಮೋಹನ್ ಅವರಿಗೆ ಕರೆ ಮಾಡಲು ಸೂಚಿಸಿದರು. ದಶಮಿಯವರನ್ನು ರಾತ್ರಿ ಸಂಪರ್ಕಿಸಿದ ಕೂಡಲೇ ಆಕೆ ಚಿಂತಿಸಬೇಡಿ ಆ ಔಷಧಿಯನ್ನು ಮರುದಿನ ಮಧ್ಯಾಹ್ನವೇ ತಲುಪಿಸುವುದಾಗಿ ತಿಳಿಸಿದರು.

ಆಕೆ ಬರುವ ವಿಷಯ ಗೊತ್ತಾದ ಕೂಡಲೇ ನಮ್ಮ ತಂಡ ದಶಮಿಯ ಬಗ್ಗೆ ಈ ಹಿಂದೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ, ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗಿದ್ದ ಮಾಹಿತಿಯನ್ನು ಸಂಗ್ರಹಿಸಿತು. ನಮಗೆ ಆಕೆಯನ್ನು ಭೇಟಿಯಾಗಿ ಸಂದರ್ಶನ ಮಾಡಬೇಕು, ಅವರ ಫೋಟೋ ಕ್ಲಿಕ್ಕಿಸಿ, ಪೂರ್ಣ ವಿವರವನ್ನು ಪಡೆಯಬೇಕೆಂಬ ಕಾತುರವಾಯಿತು. ಮಧ್ಯಾಹ್ನ ಅವರಿಗೆ ಸಂಬಂಧಿಯೊಬ್ಬರ ಮನೆಯಲ್ಲಿ ಊಟಕ್ಕೂ ಏರ್ಪಾಡಾಯಿತು. ಆ ಮನೆಯಲ್ಲಿಯೇ ಆಕೆಯನ್ನು ಭೇಟಿಯಾಗುವುದೆಂದು ತೀರ್ಮಾನ ಮಾಡಿದೆವು. ಮಧ್ಯಾಹ್ನ ಒಂದು ಗಂಟೆಗೆ ನಮಗೆ ರೋಗಿಯ ಸಂಬಂಧಿಕರಿಂದ ಫೋನ್ ಕರೆ ಬಂದಿತು.  ದಶಮಿ ಆಗಲೇ ಬೈಪಾಸ್ ಕ್ರಾಸ್ ಗೆ ಬಂದು ಅಲ್ಲಿಗೇ ರೋಗಿಯ ಕಡೆಯವರನ್ನು ಕರೆಯಿಸಿ ಕಿಮೋಥೆರಪಿ ಔಷಧಿಯನ್ನು ತಲುಪಿಸಿ ಹಿಂತಿರುಗಿದ್ದರು! ನಮಗೆಲ್ಲಾ ನಿರಾಸೆಯಾಗಿತ್ತು. ನಂತರ ಗೊತ್ತಾಗಿದ್ದು ಆಕೆ ಈ ಲಾಕ್ ಡೌನ್ ಸಮಯದಲ್ಲಿ ಯಾರನ್ನೂ ಭೇಟಿಯಾಗುವುದು ಉಚಿತವಲ್ಲ. ಮಾತಿಗೆ ಕೂರುವ ಸಮಯವೂ ಇದಲ್ಲ. ಔಷಧ ತಲುಪಿಸಿ ತಕ್ಷಣ ಹಿಂತಿರುಗಿದರೆ, ಮತ್ತೆ ಬೇರೆಯ ತುರ್ತು ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ಹಿಂದಿರುಗಿದ್ದರು. ಕ್ಷಣ ಕಾಲ ಯೋಚಿಸಿದೆವು. ಆಕೆಯ ನಿರ್ಧಾರ ಸರಿಯೆನಿಸಿತು. ದಶಮಿ ಬಗ್ಗೆ ಹೆಮ್ಮೆಯೆನಿಸಿತು. ಅವರಿಗೆ ಫೋನ್ ಮಾಡೋಣವೇ? ಎಂದು ಯೋಚಿಸಿದೆವು. ಆಕೆ ಬೈಕ್ ರೈಡ್ ಮಾಡುತ್ತಿರುವಾಗ ಹಾಗೆ ಮಾಡುವುದು ಸರಿಯಲ್ಲ ಎಂದು ಸುಮ್ಮನಾದೆವು. ಕೂಡಲೇ ಆಕೆಯ ಮಾಹಿತಿ ನೀಡಿದ್ದ ಅರವಿಂದ್ ಶೆಟ್ರಿಗೆ ಫೋನ್ ಮಾಡಿದೆವು. ದಶಮಿ ಬೆಂಗಳೂರಿಗೆ ಹಿಂತಿರುಗಿದಾಗ ಬಿಡುವಿನಲ್ಲಿ ನಮಗೆ ಫೋನ್ ನಲ್ಲಿ ಮಾತನಾಡಿಸಲು ಸಾಧ್ಯವೇ? ಎಂಬ ಬೇಡಿಕೆ ಇಟ್ಟಿದ್ದೆವು. ಬೆಂಗಳೂರಿನ ಚಂದ್ರಾ ಲೇ-ಔಟ್ ನಲ್ಲಿ ಅವರ ಮನೆಯ ಹತ್ತಿರವೇ ದಶಮಿ ಮನೆ ಇದೆ ಎಂಬ ಮಾಹಿತಿ ಇತ್ತು. ರಾತ್ರಿ ಸುಮಾರು ಎಂಟು ಗಂಟೆಗೆ ದಶಮಿ ಫೋನ್ ಬಂದಿತು. ಹೇಳಿ ಸಾರ್ ಏನು ಮಾಹಿತಿ ಬೇಕಿತ್ತು ಎಂದು ಕೇಳಿದರು. ಮೇಡಂ ನೀವೀಗ ವಿಶ್ರಾಂತಿ ತೆಗೆದುಕೊಳ್ಳಿ. ನಾವು ಕೆಲವು ಪ್ರಶ್ನೆಗಳಿರುವ ಪಟ್ಟಿಯನ್ನು ನಿಮಗೆ ವಾಟ್ಸ್ಯಾಪ್ ಮೂಲಕ ಕಳುಹಿಸುತ್ತೇವೆ. ಬಿಡುವಾದಾಗ ಅವುಗಳಿಗೆ ಉತ್ತರಿಸಿ ಕಳುಹಿಸಿ. ಅವುಗಳಿಗೆ ಪೂರಕವಾದ ಕೆಲವು ಫೋಟೋಗಳನ್ನು ಕಳುಹಿಸಿ ಎಂದು ಕೇಳಿಕೊಂಡೆವು. ಒಂದೆರಡು ದಿನಗಳ ನಂತರ ದಶಮಿ ವಾಟ್ಸ್ಯಾಪ್ ಮೂಲಕ ನಮ್ಮ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದ್ದರು.

ಬೆಂಗಳೂರಿನ ವಿಜಯನಗರ ಪಶ್ಚಿಮ ವಲಯದ ಪೊಲೀಸ್ ವ್ಯಾಪ್ತಿಯಲ್ಲಿ ನಾನು ರೆಡ್ ಕ್ರಾಸ್ ಸೊಸೈಟಿಯ ಜೊತೆಗೆ ಸರಕಾರದ ಸಾರ್ವಜನಿಕ ಮಾಹಿತಿ ಮತ್ತು ಸಂಪರ್ಕ ಇಲಾಖೆಯ ಕೋವಿಡ್ – 19 ಸಹಾಯ ವಾಣಿಗೆ ಸ್ವಯಂ ಸೇವಕಿಯಾಗಿ ಏಪ್ರಿಲ್ ಒಂದರಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನ 650 ಸಿ.ಸಿ ರಾಯಲ್ ಎನ್ ಫೀಲ್ಡ್ ಬೈಕ್ ಮೂಲಕ ದೂರದ ಹಳ್ಳಿಗಳಿಗೆ, ನಗರದ ಹೊರ ವಲಯದಲ್ಲಿನ ನಿವಾಸಿಗಳಿಗೆ, ವಿಶೇಷವಾಗಿ ವೃದ್ಧರಿಗೆ ಅವಶ್ಯಕ ಔಷಧಿಗಳನ್ನು, ಆಹಾರದ ಪೊಟ್ಟಣಗಳನ್ನು ಇಲಾಖೆಯ ಮೂಲಕ ಹಾಗೂ ವೈಯಕ್ತಿಕವಾಗಿ ದೂರವಾಣಿಯಲ್ಲಿ ಸಂಪರ್ಕಿಸಿ ಬೇಡಿಕೆ ಇಟ್ಟವರಿಗೆ ತಲುಪಿಸುತ್ತೇನೆ. ವಲಸೆ ಬಂದವರಿಗೆ, ಕೊಳಚೆ ನಿವಾಸಿಗಳಿಗೆ ಕೋವಿಡ್ ಸಾಂಕ್ರಾಮಿಕ ರೋಗದ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದೇನೆ. ಇದಲ್ಲದೇ ಮೊದಲಿನಿಂದಲೂ ಬೆಂಗಳೂರಿನ ವಿಜಯ ನಗರದಲ್ಲಿ ಬಿಪ್ಯಾಕ್ ಬಿಕ್ಲಿಪ್ ಲೀಡರ್ ಆಗಿಯೂ ಕೆಲಸ ಮಾಡುತ್ತಿದ್ದೇನೆ. ಮಹಿಳಾ ಸಬಲೀಕರಣ ಮತ್ತು ಸ್ತನದ ಕ್ಯಾನ್ಸರ್, ಆರೋಗ್ಯ ಹಾಗೂ ಸ್ವಚ್ಛತೆ ಕುರಿತು ಅರಿವು ಮೂಡಿಸುತ್ತಿದ್ದೇನೆ. ಇಲ್ಲಿಯವರೆಗೆ ಸುಮಾರು ನಾಲ್ಕು ಸಾವಿರ ಕಿಲೋ ಮೀಟರ್ ಬೈಕ್ ಸವಾರಿ ಮಾಡಿ ಐವತ್ತಕ್ಕೂ ಹೆಚ್ಚು ರೋಗಿಗಳಿಗೆ ಔಷಧಿಯನ್ನು ತಲುಪಿಸಿದ್ದೇನೆ. ಐದು ನೂರಕ್ಕೂ ಹೆಚ್ಚು ವಲಸೆ ಮಹಿಳಾ ಕಾರ್ಮಿಕರಿಗೆ ಮತ್ತು ಬಡ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ಸ್ ತಲುಪಿಸಿದ್ದೇನೆ. ಇನ್ನೂರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಧಾನ್ಯ ಹಾಗೂ ಅವಶ್ಯಕ ವಸ್ತುಗಳನ್ನು ತಲುಪಿಸಿದ್ದೇನೆ. ಬೆಂಗಳೂರಿನ ಕೊಳಚೆ ಪ್ರದೇಶಗಳಲ್ಲದೇ ಹೊರವಲಯದಲ್ಲಿ ರಾಜ್ಯದ ವಿವಿಧೆಡೆ ಹಾಗೂ ಬೆಂಗಳೂರಿಗೆ ಹತ್ತಿರವಿರುವ ತಮಿಳುನಾಡಿಗೆ ಸೇರಿದ ಕೆಲವು ಸ್ಥಳಗಳಲ್ಲಿ ಅವಶ್ಯಕ ವಸ್ತುಗಳನ್ನು ತಲುಪಿಸಿ ಬಂದಿದ್ದೇನೆ. ಈ ಕಾರ್ಯಗಳಲ್ಲಿ ಎರಡು ಮರೆಯಲಾಗದ ಘಟನೆಗಳನ್ನು ಹೇಳ ಬಯಸುತ್ತೇನೆ. 

ಒಂಬತ್ತು ತಿಂಗಳ ಒಂದು ಮಗು ತೀವ್ರ ಉಸಿರಾಟದ ತೊಂದರೆಯಲ್ಲಿತ್ತು. ಆ ಮಗುವಿನ ತಂದೆ ಒಬ್ಬ ಬಡ ಪೇಂಟರ್. ಲಾಕ್‌ಡೌನ್ ಸಂದರ್ಭವಿದ್ದುದರಿಂದ ಏನು ಮಾಡಬೇಕೆಂದು ತೋಚದೇ ತಲೆಯ ಮೇಲೆ ಕೈ ಇಟ್ಟುಕೊಂಡು ಚಿಂತಾಗ್ರಸ್ತನಾಗಿದ್ದ. ತಾಯಿಯ ರೋಧನೆ ಮುಗಿಲು ಮುಟ್ಟಿತ್ತು. ಅಲ್ಲಿ ನೆರವಿಗೆ ಹೋಗಿ ಎಂದು ನನಗೆ ಕರೆ ಬಂದಿತು. ತುರ್ತಾಗಿ ಅಲ್ಲಿಗೆ ಹೋದೆ. ಪರಿಸ್ಥಿತಿಯನ್ನು ಅವಲೋಕಿಸಿದಾಗ ನನಗೂ ಸಂಕಟವಾಯಿತು. ಎದೆಗುಂದದೆ ಮೊದಲು ಆ ಮಗುವಿನ ಪೋಷಕರಿಗೆ ಧೈರ್ಯ ತುಂಬಿದೆ. ತಕ್ಷಣವೇ ಸೂಕ್ತ ವೈದ್ಯರ ಹತ್ತಿರ ಕರೆದು ಕೊಂಡು ಹೋಗೋಣವೆಂದು ಸೂಚಿಸಿ ಕಾರ್ಯಪ್ರವರ್ತಳಾದೆ. ರಕ್ಷಣಾ ಪೊಲೀಸ್ ನೆರವಿನಿಂದ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಏರ್ಪಾಡು ಮಾಡಿದೆ.

ಒಂದು ವಾರದಲ್ಲಿ ಮಗು ಚೇತರಿಸಿಕೊಳ್ಳಲು ಆರಂಭಿಸಿತು. ತುಂಬಾ ಬಡ ಕುಟುಂಬವಾದ್ದರಿಂದ ಅವರಿಗೆ ಉಚಿತ ಆಹಾರ ಸಾಮಗ್ರಿಗಳನ್ನೂ ವಿತರಿಸಿದೆ. ಪ್ರತಿವಾರ ಆ ಮಗುವಿನ ಆರೋಗ್ಯವನ್ನು ವಿಚಾರಿಸಲು ಹೋಗುತ್ತಿದೆ. ಉಸಿರಾಟದ ತೊಂದರೆಯಿಂದ ಆಗ ಆಕ್ರಂಧನದಿಂದ ಅಳುತ್ತಿದ್ದ ಮಗು, ಈಗ ನಗುತ್ತಿದ್ದನ್ನು ನೋಡಿ ಸಮಾಧಾನವಾಯಿತು. ನಾನು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆಯೆನಿಸಿತು.

 ತೀರಾ ಸಂಕಷ್ಟದ ಸಮಯದಲ್ಲಿ ಸಹಾಯದ ಹಸ್ತ ಎಷ್ಟು ಮುಖ್ಯ ಎನ್ನುವುದು ಬಾಲ್ಯದಲ್ಲಿ ಪಟ್ಟ ಕಷ್ಟಗಳಿಂದ ನನಗೆ ಮನವರಿಕೆಯಾಗಿತ್ತು. ನಾನು ಮೂಲತಃ ಚಿತ್ರದುರ್ಗದವಳು. ಅಲ್ಲಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವಳು. ಮೊದಲಿಗೆ ನಮ್ಮದು ಸಾಂಪ್ರದಾಯಿಕ ಅವಿಭಕ್ತ ಕುಟುಂಬ. 

ಹಾಗಾಗಿ ನಾನು ಹೆಚ್ಚು ಹೊರಗೆ ಓಡಾಡುವಂತಿರಲಿಲ್ಲ. ಯಾವುದೇ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಯಾವುದೋ ಪುಟ್ಟ ಮನಸ್ತಾಪದಿಂದಾಗಿ ನಮ್ಮ ಬಂಧುಗಳು ನಮ್ಮಿಂದ ದೂರವಾದರು. ನಾನು ಮತ್ತು ನನ್ನ ಸಹೋದರ ಮಂಜುನಾಥ್, ತಂದೆ ಜಯದೇವಪ್ಪ, ತಾಯಿ ಸೌಭಾಗ್ಯಮ್ಮ ನಾಲ್ವರೇ ಒಟ್ಟಿಗೆ ಇರಬೇಕಾಯಿತು. ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ನಮ್ಮ ತಂದೆ ಕಷ್ಟಪಟ್ಟು ದುಡಿಯುತ್ತಿದ್ದರು. ತಾಯಿ ನಮ್ಮೆಲ್ಲರ ಪೋಷಣೆ ಮಾಡುತ್ತಿದ್ದರು. ತಂದೆಗೆ ವಿಪರೀತವಾದ ಸಕ್ಕರೆ ಕಾಯಿಲೆಯಿತ್ತು. ಒಮ್ಮೊಮ್ಮೆ ಅವರಿಗೆ ರಾತ್ರಿ ತೊಂದರೆಯಾದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ನೆರವಿಗೆ ಬರುತ್ತಿರಲಿಲ್ಲ. ಚಿಕ್ಕವರಿದ್ದ ನಾನು, ನನ್ನ ತಮ್ಮ ಬೆಳಗಾಗುವುದನ್ನು ಕಾದು ನಂತರ ಆಟೋದಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆವು. ಅಷ್ಟು ಹೊತ್ತಿಗೆ ಅವರಿಗೆ ಕಾಯಿಲೆ ವಿಷಮ ಪರಿಸ್ಥಿತಿ ತಲುಪುತ್ತಿತ್ತು. ನಂತರ ತಂದೆ ವಿಧಿವಶರಾದರು. ಆಗ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು. ನನ್ನ ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ದುಡಿಯಲು ಆರಂಭಿಸಿದ. ನನ್ನ ಅಕ್ಕ ಚೆನ್ನಾಗಿ ಓದಬೇಕು. ಅವಳಿಗೆ ಒಳ್ಳೆಯ ಕಡೆ ಗಂಡು ನೋಡಿ ಮದುವೆ ಮಾಡಬೇಕು ಎಂಬುದು ಅವನ ಕನಸಾಗಿತ್ತು. ನನ್ನ ತಾಯಿ ತಾಳ್ಮೆಯಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ನನಗೆ ಓದಲು ಸ್ಫೂರ್ತಿ ತುಂಬುತ್ತಿದ್ದರು. ನಾನೂ ಕಷ್ಟಪಟ್ಟು ಓದ ತೊಡಗಿದೆ. ಬಿಡುವು ಸಿಕ್ಕಾಗ ಚಿಕ್ಕ ಮಕ್ಕಳಿಗೆ ಟ್ಯೂಷನ್ ಮಾಡಿ ನನ್ನ ವ್ಯಾಸಂಗದ ಫೀಸ್ ಕಟ್ಟಲು ಸ್ವಲ್ಪ ಮಟ್ಟಿಗೆ ಪ್ರಯತ್ನಿಸುತ್ತಿದ್ದೆ. ಚಿಕ್ಕಂದಿನಿಂದ ಅನುಭವಿಸುತ್ತಿದ್ದ ಕಷ್ಟಗಳು, ನಮ್ಮ ಕೆಲವು ಬಂಧುಗಳ ಹಿಯಾಳಿಸುವಿಕೆ, ಅವಮಾನಗಳು ನನ್ನನ್ನು ಗಟ್ಟಿಗೊಳಿಸುತ್ತಾ ಹೋದವು. ದುರ್ಗದ ಸರಕಾರಿ ಕಾಲೇಜಿನಲ್ಲಿ ಬಿ.ಎಸ್‌ಸಿ ವ್ಯಾಸಂಗ ಮುಗಿಸಿ ದಾವಣಗೆರೆಯ ತೋಳಹುಣಸೆಯಲ್ಲಿ ಎಂ.ಎಸ್‌ಸಿ ವ್ಯಾಸಂಗವನ್ನೂ ಮುಗಿಸಿದೆ. ನಂತರ ನನಗೆ ಮದುವೆ ಮಾಡಿದರು. ನನ್ನ ಗಂಡ ಮೋಹನ್ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್. ತುಂಬಾ ಒಳ್ಳೆಯ ವ್ಯಕ್ತಿ ನನಗೆ ತುಂಬಾ ಪ್ರೋತ್ಸಾಹ ನೀಡಿ ಬಿ.ಎಡ್. ಓದಿಸಿದರು. ಆರಂಭದಲ್ಲಿ ಕೆಲವು ವರ್ಷ ವಿಜಯನಗರದ ಸುತ್ತಮುತ್ತ ಇರುವ ಶಾಲೆಗಳಲ್ಲಿ ಪಾರ್ಟ್ ಟೈಮ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ. 

ಮಗಳು ಕೆನಿಷಾ ಹುಟ್ಟಿದ ನಂತರ ಈಗ ಬಂಟ್ ಸಂಘದ ಆರ್.ಎನ್.ಎಸ್. ವಿದ್ಯಾನಿ ಕೇತನ ಪ್ರೌಢ ಶಾಲೆಯಲ್ಲಿ ವಿಜ್ಞಾನದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ.

 ನನ್ನ ವೃತ್ತಿಯ ಜೊತೆಗೆ ಬಿಡುವಿದ್ದಾಗ ಬಿ.ಪ್ಯಾಕ್ ಲೀಡರ್ ಶಿಪ್ ಟ್ರೈನಿಂಗ್ ತೆಗೆದುಕೊಂಡು ನಾನಿರುವ ವಾರ್ಡ್ ನಲ್ಲಿ ಸಣ್ಣಪುಟ್ಟ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಅತ್ತೆ ಅಪರ್ಣಾ, ಮಾವ ಸೋಮಪ್ಪನವರು ಯಾವಾಗಲೂ ನನ್ನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿ ಬೆಂಬಲ ನೀಡುತ್ತಾರೆ. 

ನಾನು ಬಿಜಿಯಾದಾಗಲೆಲ್ಲಾ ಅವರೇ ನನ್ನ ಮಗಳನ್ನು ನೋಡಿಕೊಳ್ಳುವುದು. ಮದುವೆಗೂ ಮುಂಚೆ ನನಗೆ ಯಾವ ಹವ್ಯಾಸವನ್ನೂ ರೂಢಿಸಿಕೊಳ್ಳಲು ಆಗಿರಲಿಲ್ಲ. ಮದುವೆಯಾದ ನಂತರವೇ ನಾನು ಬೈಕ್ ಓಡಿಸುವುದನ್ನು ಕಲಿತದ್ದು. ದೀರ್ಘ ರಜೆಗಳಿದ್ದಾಗ ಏಕಾಂಗಿಯಾಗಿ ಬೈಕ್ ಸವಾರಿ ಮಾಡುತ್ತೇನೆ. ದೇಶವಿಡೀ ಸಂಚರಿಸಿದ್ದೇನೆ. ಸಹಾಯದ ಹಸ್ತಗಳಿದ್ದರೆ ಹೆಣ್ಣು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಒಂದು ಉದಾಹರಣೆ. ಇದೇ ಏಪ್ರಿಲ್ ಒಂದರಿಂದ ಕೋವಿಡ್-19 ಸಹಾಯವಾಣಿಯಲ್ಲಿ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಲಾಕ್ ಡೌನ್ ಸಮಯದಲ್ಲಿ ಬಿಡುವಿಲ್ಲದೇ ನಾನು ಔಷಧಿಗಳನ್ನು, ಆಹಾರ ಸಾಮಗ್ರಿಗಳನ್ನು ಅಸಹಾಯಕರಿಗೆ ತಲುಪಿಸಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಈ ಸಂದರ್ಭದಲ್ಲಿ ಮರೆಯಲಾಗದ ಇನ್ನೊಂದು ಘಟನೆಯನ್ನು ಹಂಚಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

ಒಂದು ದಿನ ಹಿರಿಯ ಪೊಲೀಸ್ ಸಹಾಯವಾಣಿಯ ಕಮೀಷನರ್ ಸಂಧ್ಯಾರಿಂದ ಕರೆ ಬಂದಿತು. ಬೆಂಗಳೂರಿನ ದಾಸರಹಳ್ಳಿಯ ಬಳಿ ಮಹಿಳೆಯ ಕುಟುಂಬಕ್ಕೆ ತಕ್ಷಣ ಔಷಧಿ ಒದಗಿಸಬೇಕಾಗಿದೆ ಎಂಬ ಬೇಡಿಕೆ ಇತ್ತು. ತಡಮಾಡದೇ ಬೈಕ್ ಏರಿ ಔಷಧ ತೆಗೆದುಕೊಂಡು ದಾಸರಹಳ್ಳಿಯ ಕಡೆ ಹೊರಟೆ. ಅಲ್ಲಿಯ ಮೆಟ್ರೋ ಸ್ಟೇಷನ್ ಬಳಿ ಬಾಲಕನೊಬ್ಬ ಕಾಯುತ್ತಿದ್ದ. ಆತ ಮಹಿಳೆಯ ಮನೆಗೆ ಕರೆದುಕೊಂಡು ಹೋದ. ತುಂಬಾ ಚಿಕ್ಕದಾದ ಕೇವಲ ಒಂದೇ ಕೋಣೆಯ ಮನೆಯದು. ಆ ವೃದ್ಧೆಯ ಮಗಳು ಅಂಗವಿಕಲೆ ಜೊತೆಗೆ ಆಕೆಗೆ ಸಕ್ಕರೆ ಕಾಯಿಲೆ. ಹದಿನೈದು ವರ್ಷದ ಮೊಮ್ಮಗಳಿಗೆ ಮನೋ ವೈಕಲ್ಯವಿದೆ. ಮನೆಯಲ್ಲಿ ನೋಡಿಕೊಳ್ಳುವ ಗಂಡಸರು ಯಾರೂ ಇಲ್ಲ. ಅವರ ಸಂಕಟ ನೋಡಿ ಬೇಸರವೆನಿಸಿತು. 

ನಾನು ಔಷಧಿಯನ್ನು ತಲುಪಿಸಿದಾಗ ಅವರಿಗೆ ಸಮಾಧಾನ ವಾಗಿತ್ತು. ತಾಯಿ ಇದಕ್ಕೆ ಹಣವೆಷ್ಟು ಎಂದು ಆ ವೃದ್ಧೆ ಕೇಳಿದಾಗ ಹಣ ಪಡೆಯಲು ಮನಸ್ಸಾಗಲಿಲ್ಲ. ಮೊದಲು ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ ಎಂದು ಸಮಾಧಾನ ಮಾಡಿದಾಗ ಆ ವೃದ್ಧೆಯ ಕಣ್ಣಲ್ಲಿ  ಆನಂದ ಭಾಷ್ಪ… ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ನಿತ್ಯದ ದುಡಿಮೆಯಿಲ್ಲದೆ ಹಸಿವಿನಿಂದ ಕಂಗೆಟ್ಟಿತ್ತು ಆ ಕುಟುಂಬ. ಸ್ವಲ್ಪ ಆಹಾರ ಸಾಮಗ್ರಿಗಳನ್ನು ತಲುಪಿಸಲು ಸಾಧ್ಯವೇ ಎಂದು ಆಕೆ ಕೇಳಿದಾಗ ಖಂಡಿತಾ ಪ್ರಯತ್ನಿಸುತ್ತೇನೆ ಎಂದು ಭರವಸೆ ಕೊಟ್ಟು ಅಲ್ಲಿಂದ ಹೊರಟೆ. ದಾರಿಯಲ್ಲಿ ಆಹಾರದ ಸಾಮಗ್ರಿಗಳನ್ನು ಒಂದು ಕ್ಯಾಬ್ ನಲ್ಲಿ ತುಂಬಿಕೊಂಡು ಹತ್ತಿರದ ಪ್ರದೇಶದ ಬಡ ಜನರಿಗೆ ವ್ಯಕ್ತಿಯೊಬ್ಬ ಹಂಚುತ್ತಿದ್ದದ್ದು ಕಂಡು, ಅಲ್ಲಿಗೆ ಹೋಗಿ ಆ ವ್ಯಕ್ತಿಯ ಪರಿಚಯ ಮಾಡಿಕೊಂಡೆ. ಆತನ ಹೆಸರು ರಿಯಾಜ್. ಅಲ್ಲಿ ತನ್ನ ಸಮಾಜದ ಬಡವರಿಗೆ ಆಹಾರ ಸಾಮಗ್ರಿಗಳನ್ನು ಹಂಚುತ್ತಿದ್ದ. ನಾನೂ ಕೋವಿಡ್ ಸಹಾಯ ವಾಣಿಯ ಮೂಲಕ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗಿ ಆತ ಸಂತೋಷಗೊಂಡ. ಆಗ ನಾನು ಸಂಕಷ್ಟದಲ್ಲಿರುವ ವೃದ್ಧೆಯ ಬಗ್ಗೆ ಹೇಳಿ ಆಕೆಗೆ ಸಹಾಯ ಮಾಡಲು ಸಾಧ್ಯವೇ ರಿಯಾಜ್ ಎಂದು ಕೇಳಿಕೊಂಡೆ. ಆತ ಖಂಡಿತಾ, ಬನ್ನಿ ಹೋಗೋಣ ಎಂದು ಅಲ್ಲಿಯ ಜನರಿಗೆ ವಿತರಿಸಿದ ತಕ್ಷಣ ತನ್ನ ಕ್ಯಾಬ್ ತಗೆದುಕೊಂಡು ನನ್ನ ಜೊತೆ ಬಂದ. ಆ ವೃದ್ಧೆಯ ಕುಟುಂಬಕ್ಕೆ ಆಹಾರ ಸಾಮಗ್ರಿಗಳನ್ನು ವಿತರಿಸಿದ. ಜಾತಿ, ಧರ್ಮವನ್ನು ಮೀರಿದ ಮನುಷ್ಯತ್ವ ಇನ್ನೂ ಇದೆ ಎಂದು ರಿಯಾಜ್ ತೋರಿಸಿಕೊಟ್ಟ.

ಕಷ್ಟದಲ್ಲಿದ್ದವರಿಗೆ ನೆರವಾಗಲು ಎಷ್ಟೋ ಮನಸ್ಸುಗಳಿವೆ. ಹಲವು ವ್ಯಕ್ತಿಗಳು ಕಣ್ಣಿಗೆ ಕಾಣಿಸುತ್ತಾರೆ. ಬಹಳಷ್ಟು ಜನ ಅಗೋಚರವಾಗಿರುತ್ತಾರೆ. ನಾನು ಬೈಕಿನಲ್ಲಿ ಮುನ್ನೂರು ಕಿಲೋಮೀಟರ್ ದೂರದ ಸ್ಥಳಗಳಿಗೆ ಅವಶ್ಯಕವಾದ ಔಷಧಿ ಹಾಗೂ ಇತರೆ ಸಾಮಗ್ರಿಗಳನ್ನು ತಲುಪಿಸಿದ್ದೇನೆ. ಅವುಗಳನ್ನು ಪಡೆದವರ ಮುಖದಲ್ಲಿ ಧನ್ಯತಾ ಭಾವವನ್ನು ನೋಡಿದ್ದೇನೆ. ಕೆಲವರು ಅಷ್ಟು ದೂರದಿಂದ ಬಂದಿದ್ದೀರಿ ಊಟ ಮಾಡಿಕೊಂಡು ಹೋಗಿ ಎಂದು ಮನೆಗೆ ಆಹ್ವಾನಿಸಿದ್ದಾರೆ. ಸಾಮಾಜಿಕ ಅಂತರದ ಬಗ್ಗೆ ಅವರಿಗೆ ತಿಳಿಸಿ ಥ್ಯಾಂಕ್ಸ್ ಹೇಳಿ ಬಂದಿದ್ದೇನೆ. ಮಕ್ಕಳು, ಮಹಿಳೆಯರು, ಹಿರಿಯರು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದಾಗ ನನ್ನಲ್ಲಿರುವ ಮನುಷ್ಯತ್ವ ಹೆಚ್ಚು ಉತ್ತೇಜಿತವಾಗುತ್ತದೆ. ಸಾವಿರ, ಸಾವಿರ ಕಿಲೋ ಮೀಟರ್ ಬೈಕ್ ಸವಾರಿಯ ಮೂಲಕ ಮನುಷ್ಯತ್ವ ನೋಡುತ್ತಿದ್ದೇನೆ.  ಸವಾರಿಯ ಮೂಲಕ ಮನುಷ್ಯತ್ವವನ್ನು ಸಾರುತ್ತಿದ್ದೇನೆ ಎಂಬ ತೃಪ್ತಿ ನನಗಿದೆ…


ಕೋವಿಡ್ ಅಧ್ಯಯನ ತಂಡ
[email protected]

 

error: Content is protected !!