ನಮ್ಮ ಪ್ರತಿದಿನದ ಸೂಪರ್ ಹೀರೋ – `ಅವಳು’

ನಮ್ಮ ಪ್ರತಿದಿನದ ಸೂಪರ್ ಹೀರೋ – `ಅವಳು’

ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವಾದ್ಯಂತ ನಾವು ಮಹಿಳಾ ದಿನವನ್ನು ಆಚರಿಸುತ್ತೇವೆ. ಇದು ಮಹಿಳೆಯರ ಸಾಧನೆ, ಅವರ ಹಕ್ಕುಗಳನ್ನು ಮತ್ತು ಸಮಾನತೆಯ ಮೇಲೆ ಬೆಳಕು ಚೆಲ್ಲುವ ದಿನವಾಗಿದೆ. ಮಹಿಳೆಯರ ಸಾಧನೆಯ ಬಗ್ಗೆ ಮಾತನಾಡುವಾಗ ನಾವು ಹೆಚ್ಚಾಗಿ ಚಿತ್ರನಟಿಯರು, ಆಟಗಾರರು, ವಿಜ್ಞಾನಿಗಳು ಅಥವಾ ಸುದ್ದಿಗಳಲ್ಲಿ ಕಂಡು ಬರುವ ಶಕ್ತಿಪೂರ್ಣ ಮಹಿಳೆಯರ ಬಗ್ಗೆ ಚರ್ಚಿಸುತ್ತೇವೆ. ಈ ದಿನ, ನಾವು ಯಾವ ದೊಡ್ಡ ಪದವಿಗಳನ್ನೂ ಹೊಂದಿರದ ಅಥವಾ ಇತಿಹಾಸದ ಪುಟಗಳಲ್ಲಿನ ಹೆಸರಾಂತ ಮಹಿಳೆಯರ ಬಗ್ಗೆ ಮಾತ್ರ ಅಲ್ಲ, ನಮ್ಮ ಮನೆಯಲ್ಲಿರುವ, ಉದ್ಯೋಗದಲ್ಲಿರುವ, ಪರಿಸರದಲ್ಲಿ ನಿರಂತರವಾಗಿ ಶ್ರಮಿಸುವ ಸಾಮಾನ್ಯ ಮಹಿಳೆಯರ ಸಾಧನೆಗಳನ್ನು ಮತ್ತು ಅವರ ಪ್ರೇರಣೆಯನ್ನು ಪ್ರಶಂಸಿಸೋಣ.

 ಈಕೆ ಯಶಸ್ವೀ ಯೋಧಿನಿಯೇ ಸರಿ : ಬೆಳಿಗ್ಗೆ ಎದ್ದು ಮನೆ, ಮಕ್ಕಳು, ಅಡುಗೆ, ಮನೆಗೆಲಸ, ಎಲ್ಲವನ್ನೂ ಸಮರ್ಪಕವಾಗಿ ಮುಗಿಸಿ, ತನ್ನ ಕನಸುಗಳಿಗಾಗಿ ಸ್ವಲ್ಪ ಸಮಯ ಮೀಸಲಿಡುವಳು. ಕಚೇರಿಯಲ್ಲೂ ಸಹ ಉತ್ತಮ ನಿರ್ವಾಹಕಿಯಾಗಿ, ನಾಯಕಿಯಾಗುವ ಶಕ್ತಿಯನ್ನು ಹೊಂದಿದ್ದಾಳೆ. ಅವಳು ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿದಾಗ, ಅವಳು ಎದುರಿಸುವ ಮೊದಲ ಪ್ರಶ್ನೆ, `ನಿನ್ನ ಕೈಯಲ್ಲಿ ಇದು ಸಾಧ್ಯವೇ?’ ಎಂದು. ಆಕೆಯ ಪ್ರತ್ಯುತ್ತರ, `ನಾನು ಆಗಲೇ ಆರಂಭಿಸಿದ್ದೇನೆ’ ಎಂದೇ ಇರುತ್ತದೆ.

 ಪ್ರತಿದಿನ ಜೀವನದಲ್ಲಿ ಮಹಿಳೆಯರಿಗೆ ಹೋರಾಟ ಒಂದು ಭಾಗವೇ ಆಗಿದೆ. `ಈ ಕೆಲಸ ನಿನಗೆ ತಕ್ಕುದಲ್ಲ!’, `ಮದುವೆಯ ನಂತರ ಕನಸುಗಳನ್ನು ತ್ಯಜಿಸಬೇಕು!’, `ಹೆಣ್ಣುಮಕ್ಕಳಿಗೆ ಅಷ್ಟೊಂದು ಓದು ಏಕೆ?’, `ನೀನು ಗಿಡ್ಡಗೆ ಇರುವೆ, ಗಂಡು ಸಿಗುವುದು ಕಷ್ಟ!’,  `ನೀನು ಹೆಣ್ಣು, ನಿನಗೆ ಹೆಚ್ಚು ಭದ್ರತೆ ಅಗತ್ಯ’, ಇದರ ಜೊತೆ ಮತ್ತೆ ಕೆಲವು ಮಾತುಗಳು ಆಕೆಯನ್ನು ಹಿಂದೆ ತಳ್ಳಲು ಪ್ರಯತ್ನಿಸುತ್ತವೆ

ಇವೆಲ್ಲವನ್ನೂ ಮೀರಿ ತನ್ನ ಹಾದಿಯನ್ನು ತಾನೇ ನಿರ್ಮಿಸುತ್ತಾ ತನ್ನ ಎಲ್ಲಾ ಕನಸುಗಳನ್ನು ಉಳಿಸಿಕೊಂಡು ಮುನ್ನಡೆಯಬೇಕಿದೆ. ಒಬ್ಬ ಮಹಿಳೆ ಆಕೆಯ ಬೆಳವಣಿಗೆಗೆ ನಿರ್ಧಾರಗಳನ್ನು ಮುಕ್ತವಾಗಿ ತೆಗೆದುಕೊಳ್ಳಲು ಸಾಧ್ಯವಾದರೆ, ಅದೇ ಒಂದು ದೊಡ್ಡ ಗೆಲುವಾಗಿರುತ್ತದೆ.

ನಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳು ನಮಗೆ ಪ್ರೇರಣೆ. ಅಕ್ಕ, ತಂಗಿ, ತಾಯಿ, ಸ್ನೇಹಿತೆ—ಇವರೆಲ್ಲರೂ ಸ್ಪಷ್ಟ ದೃಷ್ಟಿಯುಳ್ಳ, ನಿರ್ಧಾರಶೀಲ ಹಾಗೂ ಸಬಲ ವ್ಯಕ್ತಿತ್ವದ ಮಾದರಿಯಾಗಿದ್ದಾರೆ. ಅವರ ಸಹಜ ಶಕ್ತಿ, ಅವರ ನಿರ್ಧಾರದ ದೃಢತೆ, ಅವರು ಕುಟುಂಬ, ಉದ್ಯೋಗ, ಸ್ನೇಹ, ಸಂಬಂಧ ಇವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುವ ಶಕ್ತಿ, ಅವರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ಆರ್ಥಿಕವಾಗಿ, ಮಹಿಳೆಯರು ಕುಟುಂಬಗಳನ್ನು ಸರಿಯಾಗಿ ನಿರ್ವಹಿಸಿ, ಪುನರ್ನಿರ್ಮಾಣ ಮಾಡುವ ಮೂಲಕ ಜೀವನವನ್ನು ಸುಧಾರಿಸಿದ್ದಾರೆ. ಅನೇಕ ಮಹಿಳೆಯರು ಸ್ವಯಂ ಉದ್ಯಮಿಯಾಗಿ, ತಮ್ಮ ಪ್ರೌಢಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಅವುಗಳ ಕಾರ್ಯಚಟುವಟಿಕೆಗಳಿಂದ ಇತರರಿಗೂ ಪ್ರೇರಣೆ ದೊರೆಯುತ್ತಿದೆ.

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಧೈರ್ಯ ಮತ್ತು ಮುನ್ನಡೆ ಮೂಲಕ ಗಮನ ಸೆಳೆದಿದ್ದಾರೆ. ಅನೇಕ ಮಹಿಳೆಯರು ರಾಜಕೀಯ ನಾಯಕಿಯರಾಗಿ ಸಮಾಜದಲ್ಲಿ ಬದಲಾವಣೆಗೆ ಕಾರಣರಾಗಿದ್ದಾರೆ. ಅವರು ದೇಶದ ಆರ್ಥಿಕ, ಸಾಮಾಜಿಕ ಹಾಗೂ ಶಿಕ್ಷಣ ಧೋರಣೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಸಾಮಾಜಿಕವಾಗಿ ಮಹಿಳೆಯರು ತಮ್ಮ ಕುಟುಂಬ, ಸಮುದಾಯ ಮತ್ತು ಸಮಾಜದಲ್ಲಿ ದಿಟ್ಟವಾಗಿ ಬದಲಾಗಲು ಹೋರಾಟ ಮಾಡುತ್ತಿದ್ದಾರೆ. ಸಾಂಸ್ಕೃತಿಕವಾಗಿ ಅವರು ತಮ್ಮ ಪ್ರತಿಭೆ, ಕಲೆ ಮತ್ತು ಸಂಸ್ಕೃತಿಯನ್ನು ಅಳವಡಿಸಿ, ಹೊಸ ಕನಸುಗಳಿಗೆ ದಾರಿ ತೆರೆದಿದ್ದಾರೆ. ಮಹಿಳೆಯರು ಸಾಹಿತ್ಯ, ಕಲೆ, ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ.

 ಹೀಗೆ ಮಹಿಳೆಯರ ಜೀವನದಲ್ಲಿ ಹಲವಾರು ಜವಾಬ್ದಾರಿಗಳು ಮತ್ತು ಸವಾಲುಗಳನ್ನು ಎದುರಿಸುತ್ತಾ ನಿತ್ಯ ತಮ್ಮ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಒಬ್ಬ ಮಹಿಳೆಗೆ ಭದ್ರತೆ ಮತ್ತು ಗೌರವ ಅತ್ಯಂತ ಮುಖ್ಯ. ಅವಳನ್ನು, ಅವಳ ಆಯ್ಕೆ ಗಳನ್ನು, ಅವಳ ವ್ಯಕ್ತಿತ್ವವನ್ನು, ಗೌರವಿಸುವು ದರಿಂದ ಆಕೆಯ ಆತ್ಮವಿಶ್ವಾಸ ಇನ್ನೂ ಹೆಚ್ಚುತ್ತದೆ. ಆಕೆಗೆ ಆರ್ಥಿಕವಾಗಿ ಪ್ರೋತ್ಸಾಹಿ ಸಿ ಅವಳ ಕಲಿಕೆಯ ಮತ್ತು ಉದ್ಯೋಗದ ಅವಕಾಶಗಳನ್ನು ಉತ್ತಮಗೊಳಿಸೋಣ. ಅವಳ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಅವಳನ್ನು ಬೆಂಬಲಿಸಿದರೆ ಆಕೆಯ ಶಕ್ತಿ ಇಮ್ಮಡಿಸುತ್ತದೆ.

ತನ್ನ ಮಕ್ಕಳ ಜೊತೆ, ಕುಟುಂಬದ ಜೊತೆ, ಸ್ನೇಹಿತರ ಜೊತೆಗೆ, ಸಮಯ ಕಳೆಯುವುದರಿಂದ ಆಕೆಯ ಆತ್ಮವಿಶ್ವಾಸವನ್ನು ಉತ್ತೇಜಿಸಿದಂತಾಗುತ್ತದೆ. ದಿನನಿತ್ಯದ ಕೆಲಸಗಳಿಂದ ಆಕೆಗೆ ಸಮಯ ಸಮಯಕ್ಕೆ ವಿರಾಮ ಸಿಕ್ಕರೆ, ಆಕೆಯೂ ಸಹ ತನ್ನ ಆಸಕ್ತಿಗಳನ್ನು, ಹವ್ಯಾಸಗಳನ್ನು ಗುರುತಿಸಿಕೊಂಡು ಮಾನಸಿಕ ಹಾಗು ದೈಹಿಕ ಆರೋಗ್ಯದೆಡೆಗೆ ಹೆಜ್ಜೆ ಹಾಕಬಹುದು.

ಪೆಣ್ಣಲ್ಲವೇ ತಮ್ಮನೆಲ್ಲ ಪಡೆದ ತಾಯಿ

ಪೆಣ್ಣಲ್ಲವೇ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು?

1680ರಲ್ಲಿ ಸಂಚಿಯ ಹೊನ್ನಮ್ಮ ನವರು ಈ ಮಾತುಗಳನ್ನು ಹೇಳಿದರು. 2025ರ ಈ ದಿನಕ್ಕೂ ಮಹಿಳೆಯರ ಬಗ್ಗೆ ಇರುವ ದೃಷ್ಟಿಕೋನದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದರೂ, ಅದು ಇನ್ನೂ ಪರಿಪೂರ್ಣವಾಗಿ ವಾಸ್ತವಕ್ಕೆ ಬಂದಿಲ್ಲ. ಕೆಲವು ಕಡೆ ಪ್ರಗತಿ ಕಂಡಿದ್ದೇವೆ, ಆದರೆ ಅವರ ಜೀವನದಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳು ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯ. ನಮ್ಮ ಮನೋವೃತ್ತಿಯಲ್ಲಿ ಇನ್ನಷ್ಟು ಬದಲಾವಣೆ ತರಬೇಕಿದೆ. ನಾವು ಮಹಿಳೆಯರಿಗೆ ಸಮಾನತೆ ಮತ್ತು ಗೌರವವನ್ನು ನೀಡಿದಾಗ ಮಾತ್ರ ನಿಜವಾದ ಬೆಳವಣಿಗೆ ಸಾಧ್ಯ.

 ನಮ್ಮ ಮನೆಯ ಹೆಣ್ಣು ಯಾವುದಕ್ಕೂ ಹೆದರುವುದಿಲ್ಲ. ಆಕೆಗೆ ನಿರಾಕರಣೆ, ಸವಾಲುಗಳು ಬಂದರೂ ಆಕೆಯ ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ. ನಾವು ಬದಲಾದರೆ ನಮ್ಮ ಮನೆಯಲ್ಲಿರುವ ಮಹಿಳೆಯರು ಸಂತೋಷದಿಂದ ಇರಲು ಹಾಗೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈ ಲೇಖನ ಓದುತ್ತಿರುವ ಪ್ರತಿಯೊಬ್ಬ ಪುರುಷನಿಗೆ – `ಮಹಿಳೆಯರನ್ನು ಅವರ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಮಾನವಾಗಿ ಗೌರವಿಸಿ ಮತ್ತು ಬೆಂಬಲಿಸಿ. ಲಿಂಗ ಭೇದವನ್ನು ವಿರೋಧಿಸಿ, ಸಮಾನ ಹಕ್ಕುಗಳಿಗಾಗಿ ಹೋರಾಡಿ. ಮಹಿಳೆಯರ ನಾಯಕತ್ವವನ್ನು ಉತ್ತೇಜಿಸಿರಿ, ಪರಸ್ಪರ ಗೌರವ ಹಾಗೂ ಅವಕಾಶಗಳನ್ನು ಸೃಷ್ಟಿಸಲು ಶ್ರಮಿಸಿರಿ’.

ಈ ಲೇಖನ ಓದುತ್ತಿರುವ ಪ್ರತಿಯೊಬ್ಬ ಮಹಿಳೆಗೆ – `ನೀವು ಪ್ರತಿದಿನ ಎದುರಿಸುತ್ತಿ ರುವ ಸವಾಲುಗಳು, ನಿಮ್ಮ ಸಾಮರ್ಥ್ಯದ ಚಿಹ್ನೆ. ನೀವು ನಿಮ್ಮದೇ ಆದ ಶಕ್ತಿವುಳ್ಳವರು. ನಿಜವಾದ ಗೆಲುವು ಪ್ರತಿದಿನದ ಸಣ್ಣ ಹೋರಾಟದಲ್ಲಿದೆ. ಚಿಕ್ಕ ಚಿಕ್ಕ ಸಾಧನೆಗಳೂ ಸಹ ಚಂದಿರನ ಮೇಲೆ ನಮ್ಮ ಹೆಜ್ಜೆ ಇಟ್ಟಂತೆ ಸರಿ. ಇಂದಿನಿಂದ ನಮ್ಮ ಸಾಧನೆಗಳನ್ನು ಗಣನೆಗೆ ತೆಗೆದುಕೊಳ್ಳಲು ತೊಡಗೋಣ’. 

ಎಲ್ಲಾ ಅದ್ಭುತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಅಭಿನಂದನೆಗಳು.   

– ಡಾ. ರೇಣು ಲೋಹಿತಾಶ್ವ, 

ಪ್ರಾಧ್ಯಾಪಕರು, ಫಿಸಿಯಾಲಜಿ ವಿಭಾಗ, ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯ, ದಾವಣಗೆರೆ.

error: Content is protected !!