ದಾವಣಗೆರೆ ಹಳೆ ಊರಿನ ಶಿವರಾತ್ರಿ ಸ್ವಾರಸ್ಯಗಳು…
ನಮ್ಮ ಬಾಲ್ಯದಲ್ಲಿ ಹಳೆ ಊರಿನ ಅಡಿವೆಯ್ಯನ ಗಲ್ಲಿಯಲ್ಲಿ ಹುಂಡೆಕಾರ್ ಕುಂಬಿ ವೀರಭದ್ರಪ್ಪನವರ ಸಾಲು ಮನೆಗಳಲ್ಲಿ ಬಾಡಿಗೆದಾರರಾಗಿ ವಾಸವಾಗಿದ್ದ ಶಂಕ್ರಮ್ಮ ಮತ್ತು ಜಾನಕಮ್ಮರ ನಡುವೆ ಶಿವ-ವಿಷ್ಣು ಕುರಿತಾಗಿ ಆಗಾಗ ಮಾತಿನ ಸಂಘರ್ಷ ನಡೆಯು ತ್ತಿತ್ತು. ಅಕ್ಕ ಪಕ್ಕದ ಮನೆಗಳ ಅವರೀರ್ವರಲ್ಲೂ ಸ್ನೇಹ ಬಾಂಧವ್ಯ ಇತ್ತಾದರೂ ಶಿವ-ವಿಷ್ಣು ವಿಚಾರ ಬಂದಾಗ ಮಾತ್ರ ಅಭಿಪ್ರಾಯ ಭೇದ ಬರುತ್ತಿತ್ತು. ಬಹುಶಃ ಎರೆ ಸೀಮೆ ಕಡೆಯಿಂದ ಬಂದು ನೆಲೆಸಿದ ಶಂಕ್ರಮ್ಮನವರದು ಸಾತ್ವಿಕ ವೀರಶೈವ ಲಿಂಗಾಯತ ಕುಟುಂಬ.
ಉಡುಪಿಯಿಂದ ಬಂದು ನೆಲೆಸಿದ ಜಾನಕಮ್ಮನವರದ್ದು ಸಾತ್ವಿಕವಾದ ವೈಷ್ಣವ ಬ್ರಾಹ್ಮಣ ಕುಟುಂಬ. ಶಂಕ್ರಮ್ಮನವರ ಗಂಡ ಏನು ಉದ್ಯೋಗ ಮಾಡುತ್ತಿದ್ದರೋ ನನಗೆ ತಿಳಿಯದು. ಇವರ ಒಬ್ಬ ಮಗನ ಹೆಸರು ಮಹೇಶ. ಜಾನಕಮ್ಮನವರ ಗಂಡ ರಾಮಚಂದ್ರ ಆಚಾರ್ಯರು ಚಿಕ್ಕ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದರು. ಇವರಿಗೆ ಬಹುಷಃ ರಾಜಗೋಪಾಲ ಆಚಾರ್ಯ `ರಾಜು’ ಎಂದು ಕರೆಯುತ್ತಿದ್ದರು ಓರ್ವ ಮಗ. ರಾಮಚಂದ್ರ ಆಚಾರ್ಯರ ಅಣ್ಣ ಸೀತಾರಾಮಾಚಾರ್ಯರು ಒಳ್ಳೆಯ ಬಾಣಸಿಗರಾಗಿದ್ದರು. ಮಂಡಿಪೇಟೆ ಬಳಿ ಚಾಮರಾಜಪೇಟೆಯಲ್ಲಿರುವ ಕಾಸಲ ಶ್ರೀನಿವಾಸ ಶೆಟ್ಟರ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಹಾಗೂ ಶ್ರೀ ರಾಘವೇಂದ್ರ ಗುರುಗಳ ಆರಾಧನೆ ಅಲ್ಲದೆ ದಾವಣಗೆರೆಯ ಮಾಧ್ವ ಪರಂಪರೆಯ ಬಹುತೇಕ ಕುಟುಂಬಗಳ ವಿಶೇಷ ಸಮಾರಂಭದ ಅಡುಗೆಗಳನ್ನು ಸೀತಾರಾಮಾಚಾರ್ಯರೇ ರುಚಿಯಾಗಿ ಶುಚಿಯಾಗಿ ಮಾಡುತ್ತಿದ್ದರು. ಹಳೆ ಅಂಡರ್ ಬ್ರಿಡ್ಜ್ ಸಮೀಪ ಎಲ್ಲೋ ಅವರ ಮನೆಯಿತ್ತು.
ಜಾನಕಮ್ಮನವರನ್ನು ನಾವೆಲ್ಲ `ಜಾನಕಿ ಅಕ್ಕ’ ಎಂದೇ ಕರೆಯುತ್ತಿದ್ದೆವು. ಅವರ ತವರು ಮನೆಯವರು ಮೂಲತಹ ಉಡುಪಿಯ ಗುಂಡಿಬೈಲು ಪ್ರದೇಶದವರಾಗಿದ್ದು ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕ ವೃತ್ತಿಯು ಈ ಐತಾಳರ ಕುಟುಂಬಕ್ಕೂ ಇತ್ತು.
ಸೋಮವಾರ ಹಾಗೂ ಅಮಾವಾಸ್ಯೆಗಳು ಬಂದಾಗ ಶಂಕ್ರಮ್ಮನ ಶಿವ ಭಕ್ತಿಯನ್ನು ಜಾನಕಮ್ಮ ಬೆರಗಿನಿಂದ ನೋಡುತ್ತಿದ್ದರೆ, ಏಕಾದಶಿ ದ್ವಾದಶಿಗಳು ಬಂದಾಗ ಜಾನಕಮ್ಮನ ವಿಷ್ಣು ಭಕ್ತಿಯನ್ನು ಶಂಕರಮ್ಮ ಬೆರಗಿನಿಂದ ನೋಡುತ್ತಿದ್ದರು. ಶಂಕ್ರಮ್ಮ ಜಾನಕಮ್ಮನವರ ನಡುವೆ ಶಿವ ವಿಷ್ಣು ಕುರಿತಾಗಿ ಅಭಿಪ್ರಾಯ ಭೇದಗಳು ಬಂದಾಗ “ಲಕ್ಷ್ಮೀದೇವಮ್ಮ ನೀವೇ ಹೇಳ್ರಿ, ಯಾವುದು ಸರಿ” ಎಂದು ನಮ್ಮ ತಾಯಿಯವರ ಬಳಿ ಕೇಳುತ್ತಿದ್ದರು. ನನ್ನ ಹಿರಿ ಸಹೋದರಿ ಕವಯತ್ರಿ ಹೆಚ್.ಬಿ. ಮುಕ್ತಾರವರ ಬಳಿಯೂ ಜಾನಕಮ್ಮನವರು ಒಮ್ಮೊಮ್ಮೆ ಶಿವ ವಿಷ್ಣು ಭೇದ ಕುರಿತಾಗಿ ಜೋರಾಗೇ ಚರ್ಚಿಸುತ್ತಿದ್ದುದು ಉಂಟು. ನಮ್ಮ ತಾಯಿಯವರಾದರೋ ಪರಮ ವೈಷ್ಣವ ಬ್ರಾಹ್ಮಣ ಕುಟುಂಬದಿಂದ ಬಂದವರು, ನಮ್ಮ ತಂದೆಯವರು ಶೈವ ಬ್ರಾಹ್ಮಣ ಕುಟುಂಬದವರು, ಅನ್ಯೋನ್ಯತೆ ಅಪಾರವಾಗಿತ್ತು. ಇದನ್ನೇ ಉದಾಹರಿಸಿ `ಶಿವ ವಿಷ್ಣುವಿನ ನಡುವೆ ಭೇದ ಸಲ್ಲದು’ ಎಂದು ಶಂಕ್ರಮ್ಮ ಜಾನಕಮ್ಮರಿಗೆ ನಮ್ಮಮ್ಮ ಹೇಳುತ್ತಿದ್ದರು. ಇದಾವುದೂ ಶಂಕ್ರಮ್ಮನ ಮಗ ಮಹೇಶಗಾಗಲೀ ಜಾನಕಮ್ಮನ ಮಗ ರಾಜುಗಾಗಲೀ ಅರ್ಥವಾಗುತ್ತಿರಲಿಲ್ಲ.
ಒಮ್ಮೆ ಶಿವರಾತ್ರಿಯಂದು ಶಂಕ್ರಮ್ಮನ ಮಗ ಮಹೇಶ ಎರೇಮಣ್ಣು ಕಲಸಿ ಪುಟ್ಟ ಶಿವಲಿಂಗ ಒಂದನ್ನು ಮಾಡಿ ರಾಜುಗೆ ತೋರಿಸಿದ. ರಾಜು ಅದಕ್ಕೆ `ಪೂಜೆ ಮಾಡೋಣ’ ಎಂದು ಮನೆಯಿಂದ ಗೋಪಿಚಂದನ ತಂದು ಈಶ್ವರ ಲಿಂಗಕ್ಕೆ ಅಂಗಾರ ಅಕ್ಷತೆಯ ನಾಮ ಬರೆದ, ಇಬ್ಬರೂ ಕೈಮುಗಿದರು. `ಮಕ್ಕಳು ಮಾಡಿದ್ದು ಅಪಚಾರವಾಯಿತೆ??’ ಎಂದು ಶಂಕ್ರಮ್ಮ ಜಾನಕಮ್ಮ ಇಬ್ಬರಿಂದಲೂ ಅಹವಾಲು ನಮ್ಮ ತಾಯಿ ಬಳಿ ಬಂದಿತು. `ಅಪಚಾರವಲ್ಲ ಸದಾಚಾರ, ಶಿವ ವಿಷ್ಣುವನ್ನು ಧರಿಸಿದ್ದೀರಿ, ವಿಷ್ಣು ಶಿವನನ್ನು ಕೂಡಿದ್ದಾನೆ, ಬದುಕು ಬೇಕೆಂದಾಗ ಸ್ಥಿತಿಕಾರಕ ವಿಷ್ಣು ಎಲ್ಲರಿಗೂ ಬೇಕೇ ಬೇಕು, ಬದುಕು ಸಾಕೆಂದಾಗ ಲಯಕಾರಕ ಶಿವ ಎಲ್ಲರಿಗೂ ಬೇಕೇ ಬೇಕು, ಒಂದನ್ನು ಬಿಟ್ಟು ಇನ್ನೊಂದಿಲ್ಲ, ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ, ಇಲ್ಲೇ ಸಮೀಪದ ಹರಿಹರಕ್ಕೆ ಹೋಗಿನೋಡಿ ಶಂಕರ ಮತ್ತು ನಾರಾಯಣ ಕೂಡಿಕೊಂಡು `ಹರಿಹರೇಶ್ವರರಾಗಿದ್ದಾರೆ, ಮಕ್ಕಳಿಗೆ ಅರ್ಥವಾಗುವ ಈ ತತ್ವ ನಿಮಗೇಕೆ ಅರ್ಥವಾಗುತ್ತಿಲ್ಲ!!?’ ಎಂದು ನಮ್ಮಮ್ಮ ಮುಸಿ ನಕ್ಕರು. `ಹೌದಲ್ಲವೇ’ ಎಂದು ಶಂಕ್ರಮ್ಮ ಜಾನಕಮ್ಮ ಪರಸ್ಪರ ಮುಖ ನೋಡಿಕೊಂಡು ನಕ್ಕರು.
ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ