ಸುಮಾರು 55 ವರ್ಷಗಳ ಹಿಂದೆ, ಡಿಸೆಂಬರ್ ತಿಂಗಳ ಕೊನೆ, ಚಳಿ ವಿಪರೀತವಾಗಿತ್ತು. ಚೌಕಿ ಗುಂಡಿ ಈರಣ್ಣ ಹೊದ್ದುಕೊಳ್ಳಲು ರಾತ್ರಿ ಕಂಬಳಿ ತೆಗೆದು ಕೊಡವಿದ. ಕಂಬಳಿಯಿಂದ ಪಟಾಕಿಗಳು ಉದುರಿದವು!.
ದೀಪಾವಳಿಗೆ ತಂದ ಪಟಾಕಿಯಲ್ಲಿ ಸ್ವಲ್ಪ ಉಳಿಸಿದ್ದ ವೀರಣ್ಣ ಆಗ ಮಳೆ ಇದ್ದುದರಿಂದ ಹಸಿ ಆಗಬಾರದೆಂದು ಅವನ್ನು ಕಂಬಳಿಯೊಳಗೆ ಸುತ್ತಿ ಇಟ್ಟು ಮರೆತುಬಿಟ್ಟಿದ್ದ. ಅದರಲ್ಲಿ ಪಟಾಕಿ ರೈಲು ಸಹಾ ಇತ್ತು. ಅದನ್ನು ಹೇಗೆ ಹಚ್ಚುವುದೆಂದು ಅವನಿಗೆ ಗೊತ್ತಾಗಲಿಲ್ಲ. ತೆಗೆದುಕೊಂಡು ಬಂದು ತನ್ನ ಸ್ನೇಹಿತ ಚೌಕಿಪೇಟೆಯ ದಿವಂಗತ ಪಟ್ಟೇದ ಚನ್ನಬಸಪ್ಪರ ಮಗ ಶಂಭುಗೆ ತೋರಿಸಿದ.
ಪಟಾಕಿ ರೈಲು ಚೌಕಾಕೃತಿಯಲ್ಲಿದ್ದು, ಅದರೊಳಗಿನ ರಂಧ್ರದೊಳಗೆ ದಾರ ಪೋಣಿಸಿ, ದಾರದ ಎರಡೂ ತುದಿಯನ್ನು ಆಚೀಚೆ ಕಟ್ಟಿ, ಪಟಾಕಿ ತುದಿಯ ಮದ್ದಿಗೆ ಬೆಂಕಿ ಹಚ್ಚಿದಾಗ ಸುರ್ ಎಂದು ಶಬ್ಧ ಮಾಡುತ್ತಾ ದಾರದುದ್ದಕ್ಕೂ ವೇಗವಾಗಿ ಎರಡು ಸಲ ಅದು ಹೋಗಿ ಬರುತ್ತದೆ ಇದು ಪಟಾಕಿ ರೈಲು.
ಶಂಭು ಪಟಾಕಿ ರೈಲನ್ನು ಮನೆಯ ಮುಂದಿನ ಹಾಸಿಗೆ ಅಂಗಡಿ ಸುಬ್ರಾಯ ಶೆಟ್ಟರಿಗೆ ತೋರಿಸಿದ. ಸುಬ್ರಾಯ ಶೆಟ್ಟರು ಪಟಾಕಿ ರೈಲನ್ನು ಹಚ್ಚುವ ವಿಧಾನ ಹೇಳುವ ಬದಲು ಹಚ್ಚಿಯೇ ತೋರಿಸುತ್ತೇನೆಂದು ಅಣ್ಣಿಗೇರಿ ರುದ್ರಪ್ಪನವರ ಮನೆ ಅಂದರೆ ಈಗಿನ ಶಾಮನೂರು ಶಿವಶಂಕರಪ್ಪನವರ ಕಲ್ಲಪ್ಪ ಅಂಡ್ ಸನ್ಸ್ ಅಂಗಡಿಯ ಪಕ್ಕದ ಮನೆ ಮುಂದಿನ ಲೈಟು ಕಂಬದಿಂದ ಹಿರೇಮಠದ ಈಶ್ವರಯ್ಯನವರ ಮನೆ ಅಂದರೆ ಲಾಯರ್ ಜಯದೇವಯ್ಯ ಹಿರೇಮಠ ರವರ ತಂದೆ, ಲಾಯರ್ ಜಗದೀಶ್ ಹಿರೇಮಠರ ಅಜ್ಜನವರ ಮನೆ ಮುಂದಿನ ಕಂಬದವರೆಗೂ ದಪ್ಪ ದಾರವನ್ನು ಕಟ್ಟಿ ರೈಲಿಗೆ ಬೆಂಕಿ ತಾಗಿಸಿದರು. ಆ ಹೊತ್ತಿಗಾಗಲೇ ಇದನ್ನೆಲ್ಲಾ ನೋಡಲು ಬೀದಿಯ ಮಕ್ಕಳಷ್ಟೇ ಅಲ್ಲ ದೊಡ್ಡವರು ಸಹಾ ಅಲ್ಲಿ ಸೇರಿದರು.
ರೈಲು ಶಬ್ಧ ಮಾಡುತ್ತಾ ದಾರದ ಮೇಲೆ ಆಚೀಚೆ ಹೋಗಿ ಬಂದಿತು. ಎಲ್ಲರೂ ಸಂತೋಷದಿಂದ ಕೇಕೆ ಹೊಡೆದರು. ಉತ್ಸಾಹಗೊಂಡ ಸುಬ್ರಾಯ ಶೆಟ್ಟರು `ಬರೀ ಒಂದು ಕಡೀ ಏನು, ಎಲ್ಡೂ ಕಡಿ ರೈಲು ಕ್ರಾಸಿಂಗ್ ಆಗಾದನ್ನು ನೋಡ್ರಿ’ ಎಂದು ಎರಡು ಕಂಬಗಳ ನಡುವೆ ಎರಡು ಸಾಲು ದಾರ ಕಟ್ಟಿ ಆ ಕಡೆಯಿಂದ ಒಂದು ರೈಲು ಈ ಕಡೆಯಿಂದ ಒಂದು ರೈಲಿಗೆ ಒಂದೇ ಸಮಯಕ್ಕೆ ಬೆಂಕಿ ತಾಗಿಸುವಂತೆ ವ್ಯವಸ್ಥೆ ಮಾಡಿದರು.
ದಾವಣಗೆರೆ ಹಳೆ ಊರಿನ ಚಳಿಗಾಲದ ಸ್ವಾರಸ್ಯಗಳು…
ಬಾಲ್ಯದಲ್ಲಿನ ದೀಪಾವಳಿಯ ಕೆಲವು ಸ್ವಾರಸ್ಯಗಳು, ನೆನಪುಗಳು
ಎರಡು ದಾರಗಳ ಮೇಲೆ ಆ ಕಡೆಯ ರೈಲು ಈ ಕಡೆ, ಈ ಕಡೆಯ ರೈಲು ಆ ಕಡೆ ಹೋಗುವಾಗ ಮಧ್ಯದಲ್ಲಿ ಕ್ರಾಸಿಂಗ್ ಸಹಾ ಆಯಿತು!!. ನೆರೆದವರು ಮತ್ತೂ ಜೋರಾಗಿ ಕೇಕೆ ಹಾಕಿದರು, ಗದ್ದಲವೋ ಗದ್ದಲ.
ಅದೇ ವೇಳೆಗೆ ಸೈಕಲ್ ಮೇಲೆ ಪೊಲೀಸ್ ದುರುಗಪ್ಪ ಬರುತ್ತಿದ್ದವರು `ಏನಿದು ರಸ್ತ್ಯಾಗೆ ಗಲಾಟಿ?’ ಎನ್ನುತ್ತಲೇ ಎಲ್ಲರೂ ಓಡಿ ಹೋಗಿ ಮನೆಯೊಳಗೆ ಸೇರಿಕೊಂಡರು. ಸುಬ್ರಾಯ ಶೆಟ್ಟರು ಮಾತ್ರ ಅಲ್ಲೇ ನಿಂತಿದ್ದರು. `ಏನ್ ಶೆಟ್ರೆ ರಸ್ತ್ಯಾಗೆ ಗಲಾಟಿ ಹಚ್ಚೀರಿ?’ ಎಂದು ಪೊಲೀಸ್ ಗದರಿದರು. `ನಾನು ಗಲಾಟಿ ಹಚ್ಚಿಲ್ರಿ, ಗದ್ಲಾ ಮಾಡದಲೆ ಪಟಾಕಿ ಹಚ್ಚರಲೇ ಅಂತ ಹೇಳ್ತಾ ಇದ್ದೆ’ ಎಂದರು.
`ಚೊಲೋ ಕೆಲಸ ಮಾಡಿದ್ರಿ, ಪೇಟೆಯಾಗೆ ನಿಮ್ಮಂತೋರು ಇರಬೇಕು’ ಎಂದು ಶೆಟ್ಟರಿಗೆ ಶಹಭಾಷ್ ಹೇಳಿ ಪೊಲೀಸ್ ದುರ್ಗಪ್ಪ ಸೈಕಲ್ ಏರಿ ಹೋದರು. ಸುಬ್ರಾಯ ಶೆಟ್ಟರು ಪಟಾಕಿ ರೈಲು ಬಿಟ್ಟಿದ್ದಷ್ಟೇ ಅಲ್ಲ ಪೊಲೀಸ್ ಗೂ ರೈಲು ಬಿಟ್ಟರು!!.
ದುರ್ಗದ ರತ್ನಮ್ಮ ಎಂಬುವವರ ಮಗ ಷಣ್ಮುಖ ಪಟಾಕಿ ರೈಲಿನ ಈ ಸಂಭ್ರಮವನ್ನೆಲ್ಲ ಮನೆಯಿಂದಲೇ ನಿಂತು ನೋಡುತ್ತಿದ್ದ.
ನಾಲ್ಕಾರು ದಿನ ಬಿಟ್ಟು ದುರ್ಗದ ರತ್ನಮ್ಮ ಸುಬ್ರಾಯ ಶೆಟ್ಟರ ಬಳಿ ಬಂದು `ಚಲೋ ಕೆಲಸ ಮಾಡಿದ್ರೀ ಶೆಟ್ಟರೆ, ನಮ್ ಷಣ್ಮುಖಿ ಪಿಯುಸಿ ಮಾಡಿ ಮನೆಯಾಗೇ ಕುಂತಿದ್ದ, ಯಾವ ಕೆಲಸಕ್ಕೂ ಅರ್ಜಿ ಹಾಕಕ್ಕೆ ಮನಸ್ಸು ಮಾಡ್ತಿರಲಿಲ್ಲ, ಮೊನ್ನಿ ನಿಮ್ ಪಟಾಕಿ ರೈಲು ನೋಡ್ದೋನು ರೈಲ್ವೆ ಇಲಾಖಿ ಕೆಲಸಕ್ಕೆ ಅರ್ಜಿ ಹಾಕಿದ’ ಎಂದರು. ಇದಾಗಿ ಕೆಲ ತಿಂಗಳುಗಳ ನಂತರ ತಿಳಿದು ಬಂದಿತು ಷಣ್ಮುಖನಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸವೂ ಸಿಕ್ಕಿ, ಮೈಸೂರಿಗೆ ಹೋಗಿ ಕೆಲಸಕ್ಕೂ ಸೇರಿದ್ದಾನೆ ಎಂದು.
ಹೆಚ್.ಬಿ. ಮಂಜುನಾಥ್, ಹಿರಿಯ ಪತ್ರಕರ್ತ, ದಾವಣಗೆರೆ.