ನಿಜಾ ಗಣಪತಿ ಲೆಕ್ಕಕ್ಕೆ ಸೇರ್ಸಂಗಿಲ್ಲ

ನಿಜಾ ಗಣಪತಿ ಲೆಕ್ಕಕ್ಕೆ ಸೇರ್ಸಂಗಿಲ್ಲ

ನಮ್ಮ ವಿದ್ಯಾರ್ಥಿ ದೆಸೆಯಲ್ಲಿ ನಮಗಿಂತ ಚಿಕ್ಕ ಮಕ್ಕಳು ಗಣೇಶ ಚತುರ್ಥಿಯ ದಿನ ಡಬ್ಬಿಯಲ್ಲೋ, ಕಾಗದದ ಪೊಟ್ಟಣದಲ್ಲೋ ಒಂದಷ್ಟು ಅಕ್ಷತೆ ಕಾಳನ್ನು ಹಿಡಿದುಕೊಂಡು ಮನೆ-ಮನೆಗೂ ಹೋಗಿ, ಹೋಗಿ ಎನ್ನುವುದಕ್ಕಿಂತ ನುಗ್ಗಿ ಗಣಪತಿಯ ಮೇಲೆ ಅಕ್ಷತೆ ಎರಚಿ ಲೆಕ್ಕ ಮಾಡುತ್ತಾ ಮಾರನೆಯ ದಿನ `ನಂದು ನೂರು ಆದ್ವು’, `ನಂದು ಇನ್ನೂರಾದ್ವು’ ಎಂದೆಲ್ಲಾ ಲೆಕ್ಕ ಹೇಳುವ ಸಂಭ್ರಮ ನಡೆಯುತ್ತಿತ್ತು. 

ಹಾಗೆ ಹೇಳುವಾಗ ಒಮ್ಮೆ ಮಕ್ಕಳು `ನಿಜಾ ಗಣೇಶ ಲೆಕ್ಕಕ್ಕೆ ಸೇರ್ಸಂಗಿಲ್ಲ’ ಎಂದವು. ಏನಿದು `ನಿಜಾ ಗಣೇಶ?!’ ಎಂದು ವಿಚಾರಿಸಿದಾಗ ತಿಳಿಯಿತು. ಹಾಗೆ ಮನೆ ಮನೆಗೂ ಹೋಗುವ ಮಕ್ಕಳು ದೇವಸ್ಥಾನಗಳಿಗೂ ಹೋಗಿ ಅಲ್ಲಿ ಇಟ್ಟಿರುವ ಗಣಪತಿಗೂ ಅಕ್ಷತೆ ಎರಚಿ ತಮ್ಮ ಲೆಕ್ಕಕ್ಕೆ ಸೇರಿಸಿಕೊಳ್ಳುತ್ತಿದ್ದರು. ಚೌಕಿಪೇಟೆಯಲ್ಲಿ ಬರುವಾಗ ಬಕ್ಕೇಶ್ವರ ದೇವಸ್ಥಾನದಲ್ಲಿ ಇಟ್ಟ ಗಣಪತಿಗೂ ಅಕ್ಷತೆ ಹಾಕಿ  ಮುಂದೆ ಬಂದು ಜೈನ ಬಾಂಧವರ ಶ್ರೀ ಸುಪಾರ್ಶ್ವನಾಥ  ದೇವಸ್ಥಾನ ಅಂದರೆ ರೂಢಿಯಲ್ಲಿ ಮಾರ್ವಾಡಿ ದೇವಸ್ಥಾನ ಎಂದು ಕರೆಯುತ್ತಿದ್ದರು. ಆಗ ಅದು ಹಳೆಯ ಕಟ್ಟಡ, ಮಹಡಿಯ ಮೇಲಿನ  ಸುಪಾರ್ಶ್ವನಾಥ ಸ್ವಾಮಿಯ ಪುಟ್ಟ ಮೂರ್ತಿಯ ಮೇಲೂ ಒಂದಷ್ಟು ಅಕ್ಷತೆ ಎರಚಿ ಅದನ್ನೂ ತಮ್ಮ ಗಣಪತಿಯ ಲೆಕ್ಕಕ್ಕೆ ಸೇರಿಸಿಕೊಳ್ಳುತ್ತಿದ್ದರು. 

ಆ ಸಂದರ್ಭದಲ್ಲಿ ವಿಗ್ರಹಕ್ಕೆ `ಆಂಗಿ’ ಎಂಬುದಾಗಿ ವಿಶೇಷ ಅಲಂಕಾರ ಮಾಡಿರುತ್ತಿದ್ದರು. ಮಕ್ಕಳು ಹೀಗೆ ನುಗ್ಗಿ ಅಕ್ಷತೆ ಎರಚುವುದರಿಂದ ಅಲಂಕಾರಕ್ಕೆ ಘಾಸಿಯಾಗುತ್ತದೆ ಎಂದು ದೇವಸ್ಥಾನದ ಅರ್ಚಕರು ಆಗ ಆ ದೇವಸ್ಥಾನದಲ್ಲಿ ವ್ರತದ ಅಡುಗೆ ಮಾಡುವ ರಾಜಸ್ಥಾನ ಮೂಲದ `ಸೋಪಾ’ ಎಂಬ ಅಡುಗೆಭಟ್ಟನಿಗೆ ದೇವಸ್ಥಾನದ ಮುಂಭಾಗದಲ್ಲಿ ಕೂರಲು ಹೇಳಿ, ಅಕ್ಷತೆ ಹಾಕಲು ಧಾವಿಸುವ ಮಕ್ಕಳನ್ನು ತಡೆದು `ಇಲ್ಲಿ ಗಣೇಶ ಇಲ್ಲ ಹೋಗಿ’ ಎಂದು ಹೇಳಲು ಸೂಚಿಸಿದರು.

ರಾಜಸ್ಥಾನದಿಂದ ಬಂದ ಸೋಪನಿಗೆ ಕನ್ನಡ ಬರುತ್ತಿರಲಿಲ್ಲ. ಅಕ್ಷತೆ ಎರಚಲು ಧಾವಿಸುವ ಮಕ್ಕಳನ್ನು ತಡೆದು ಆತ  `ಗಣೇಶ ನೀ ಜಾ’ ಎನ್ನುತ್ತಿದ್ದ. `ನೀ’ ಎಂದರೆ `ಇಲ್ಲ’, `ಜಾ’ ಎಂದರೆ `ಹೋಗು’ ಎಂದರ್ಥ ಇರಬೇಕು.  ಆದರೂ ಕೆಲ ಮಕ್ಕಳು ಸೋಪನ ಮೇಲೇ ನಾಲ್ಕು ಅಕ್ಷತೆ ತೂರಿ ಅದನ್ನೂ ಗಣೇಶನ ಲೆಕ್ಕಕ್ಕೆ ಸೇರಿಸಿ ಮಾರನೇ ದಿನ ಹೇಳುತ್ತಿದ್ದರು. ಅದಕ್ಕೇ ಮತ್ತೆ ಕೆಲ ಮಕ್ಕಳು `ನಿಜಾ ಗಣೇಶ ಲೆಕ್ಕಕ್ಕೆ ಸೇರ್ಸಂಗಿಲ್ಲ’ ಎಂದು ಹೇಳಿದ್ದು.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!