ಅಂಥದ್ದೊಂದು ಪಾಠ ಮಾಡಬೇಕು, ಆ ಒಂದು ಗಂಟೆಯ ಪಾಠ ಇಡೀ ಜಗತ್ತನ್ನೇ ಬದಲಾಯಿಸಿ ಬಿಡಬೇಕು, ಆ ಪಾಠ ಎಂದೆಂದೂ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯಬೇಕು, ಅದು ನನ್ನ ಕೊನೆಯ ಪಾಠವಾಗಿರಬೇಕು, ಏಕೆಂದರೆ ಆ ಪಾಠದ ನಂತರ ಈ ಜಗತ್ತಿಗೆ ಹೇಳಲು ಏನೇನೋ ಇರಬಾರದು, ಎಲ್ಲವೂ ಅದರಲ್ಲಿ ಇರಬೇಕು. ಹೀಗೆ ಅಂದುಕೊಂಡ ಅಂದುಕೊಳ್ಳಬಲ್ಲ ಶಿಕ್ಷಕರು ಬೋಧಕರು ಮಾರ್ಗದರ್ಶಕರು ಎಷ್ಟೋ ಮಂದಿ ಆಗಿ ಹೋಗಿದ್ದಾರೆ.
ಸಾಕ್ರೆಟಿಸ್, ಅರಿಸ್ಟಾಟಲ್, ಬುದ್ಧ, ಬಸವೇಶ್ವರ, ದಾಸರು ,ಶರಣರು ,ಋಷಿಮುನಿಗಳು, ಸಂತರು, ಸಮಾಜ ಸುಧಾರಣೆಗೆ ಮಾಡಿದ ಪ್ರಯತ್ನಗಳೆಷ್ಟು. ಅವರ ಬಲಿದಾನ ತ್ಯಾಗ ಪರಿಶ್ರಮಗಳು,,,, ಕಡು ನೋವನ್ನು ನುಂಗಿ ನಗುವ ಚೆಲ್ಲಿದ ಆ ಮಹನೀಯ ಮಹೋದಯ ಗುರು ವರೇಣ್ಯರಿಗೆ ಶಿಕ್ಷಕರ ದಿನಾಚರಣೆ ದಿನದಂದು ನಮೋನಮಃ
ನಾಗರೀಕ ಸಮಾಜವನ್ನು ಕಟ್ಟುವ ಕನಸು ಕಂಡು . ದ್ವೇಷ ಅಸೂಯೆ ಸ್ವಜನ ಪಕ್ಷಪಾತ ಆಸೆ ಪ್ರಲೋಭನೆಗಳಿಗೆ ಅಂಕು ಶವಿರಿಸಿ, ಬಡತನ ದಾರಿದ್ರ ಅಜ್ಞಾನಗಳನ್ನು ಬಡಿದೋಡಿಸುವ ಶಿಕ್ಷಣದ ಅಗತ್ಯತೆ ಇಂದಲ್ಲ, ಶತಮಾನಗಳಿಂದ ಪ್ರಸ್ತುತಿ ಇರುವುದು ನಿಮಗೆಲ್ಲ ತಿಳಿಯದ ವಿಷಯವೇನಲ್ಲ.
ಹಾಗಾದರೆ ಎಡವಿದ್ದೆಲ್ಲಿ ಗಾಂಧೀಜಿಯವರ ಸಪ್ತ ಸೂತ್ರಗಳಲ್ಲಿ ಕಂಡುಬರುವ ಶೀಲವಿಲ್ಲದ ಶಿಕ್ಷಣ ,ಆತ್ಮಸಾಕ್ಷಿ ರಹಿತ ಭೋಗ, ದ ಅಂಶಗಳು ಸಮಾಜದಲ್ಲಿ ನಡೆಯುವ ಅನೈತಿಕತೆ ಅನಾಚಾರಗಳಿಗೆ ಹಿಡಿದ ಕೈಗನ್ನಡಿಯಂತೆ. 20ನೇ ಶತಮಾನದ ಆರಂಭದಲ್ಲಿ ಭಾರತದ ಸವಾಲುಗಳು, ಅವುಗಳನ್ನು ಮೆಟ್ಟಿ ನಿಲ್ಲುವ ಬಗೆಯನ್ನು ವಾಸ್ತವಗಳ ಆಧಾರದಲ್ಲಿ ಮನಗಂಡ ಸರ್ಕಾರಗಳು ಎನ್‌ಸಿಎಫ್ -2019 ನಲ್ಲಿ ಕಂಡುಬರುವ ವರ್ತನಾವಾದ .ಎನ್‌ಇಪಿ-2020 ನಲ್ಲಿ ಬಂದ ಸೃಜನಶೀಲತೆ ಹಾಗೂ ಶಿಶುಕೇಂದ್ರಿತ ಶಿಕ್ಷಣದ ಆಶಯಗಳು, ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಮನುಷ್ಯನ ಸಹಜ ಜೀವನಕ್ಕೆ ಏನೆಲ್ಲಾ ಅವಕಾಶಗಳನ್ನು ಕಲ್ಪಿಸಿಕೊಂಡಿರುವ ಈ ನಮ್ಮ ಸಮಾಜಕ್ಕೆ ಇನ್ನೂ ಏನೋ ಬೇಕಿತ್ತು ಇನ್ನು ಏನೋ ಸುಧಾರಣೆಯಾಗಬೇಕಿತ್ತು ಇನ್ನು ಏನೋ ಬದಲಾವಣೆ ಆಗಬೇಕಿತ್ತು ಎನ್ನುವ ಮನೋತುಡಿತ ಯಾವುದೇ ಶಿಕ್ಷಕರಲ್ಲಿ ಇನ್ನೂ ಕಡಿಮೆಯಾಗಿಲ್ಲ.
ಬದುಕಿನ ಪರಿಪೂರ್ಣತೆಗೆ , ಬಡತನ ನಿವಾರಣೆಗೆ ,ಅಜ್ಞಾನವನ್ನು ದೂರಮಾಡುವ ದ್ವೇಷ ಅಸೂಯೆಗಳನ್ನು ಕಡಿಮೆ ಮಾಡುವ ಪರಸ್ಪರರನ್ನು ಒಪ್ಪಿಕೊಳ್ಳುವ ಮನೋಸ್ಥಿತಿ ಹಾಗೂ ಇಂದಿನ ದಿನಮಾನಗಳಲ್ಲಿ ಸ್ತ್ರೀಯರನ್ನು ಕಾಣುವ ದೃಷ್ಟಿಕೋನಗಳು ,ಬಡವರ ಹಿಂದುಳಿದವರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಬದುಕಿನ ಇತಿಮಿತಿಗಳ ಎಲ್ಲೆಗಳನ್ನು ಮೀರಿದ ಪ್ರಲೋಭನೆಗಳನ್ನು ನಿವಾರಿಸುವಲ್ಲಿ ,ನಮ್ಮ ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಇದೆ ಎಂಬುದನ್ನು ಎಲ್ಲ ಶಿಕ್ಷಕರು ಇಂದು ಮನಗಾಣಬೇಕಿದೆ
ಇವೆಲ್ಲದರ ಮಧ್ಯೆ ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆ ಮಹಾನ್ ಜ್ಞಾನಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ರವರ ಚಿಂತನೆ ಆಶಯಗಳನ್ನು ಮನಗಂಡು ವಿದ್ಯಾರ್ಥಿಗೆ ನಿಜವಾಗಲೂ ಆತ್ಮ ತೃಪ್ತಿ ನೀಡುವಂತಹ ಪಾಠ ಬೋಧನೆ ಮಾಡುವಲ್ಲಿ ಪ್ರಾಮಾಣಿಕವಾಗಿ ಸದಾ ನಿರತರಾಗಿ ತೊಡಗಿಕೊಂಡಿರುವಂತಹ ಶಿಕ್ಷಕ ಸಮುದಾಯಕ್ಕೆ ನಮ್ಮದೊಂದು ಸಲಾಂ
ಎಷ್ಟೋ ಜನ ಶಿಕ್ಷಕರು ಪ್ರಶಸ್ತಿಗಳಿಗೆ ಅರ್ಜಿ ಹಾಕಲು ಸಂಕೋಚ ಪಡುವ ಎಲೆಮರೆಕಾಯಿಯಾಗಿ ಸೇವೆ ಸಲ್ಲಿಸುವ ಮಕ್ಕಳ ಕಣ್ಣುಗಳಲ್ಲಿ ಭಗವಂತನನ್ನು ಕಾಣುವ ಪಾಠ ಬೋಧನೆಗಳು ಮುಗಿದಾಗ ಮಕ್ಕಳ ಮನದಲ್ಲಿ ಉಂಟಾಗುವ ಉತ್ತೇಜನಕಾರಿ ಭಾವನೆಗಳು ಶಿಕ್ಷಕರ ಬದುಕಿಗೆ ಕೃತಜ್ಞತಾ ಭಾವಗಳಲ್ಲಿ ಮಿಂದು ಧನ್ಯತೆಯ ಮನೋಸ್ಥಿತಿಯನ್ನು ಹೊಂ ದಿರುವ ಸಾವಿರಾರು ಶಿಕ್ಷಕರನ್ನು ನಾವಿಂದು ಸ್ಮರಿಸಬೇಕಲ್ಲವೇ
ಇವೆಲ್ಲದರ ಮಧ್ಯೆ ಸರಿ ತಪ್ಪುಗಳನ್ನು ತಿಳಿಸಿಕೊಟ್ಟು ಒಳಿತು ಕೆಡುಕುಗಳ ಅರಿವನ್ನು ಮೂಡಿಸಿದ ಮಹಾನ್ ಗುರುಗಳಿಗೆ ಕೈ ಹಿಡಿದು ನಡೆಸಿದ ನಮ್ಮ ಪ್ರೀತಿಯ ಪ್ರೈಮರಿ, ಹೈಸ್ಕೂಲ್, ಕಾಲೇಜು, ಶಿಕ್ಷಕರಿಗೆ ಸೆಪ್ಟೆಂಬರ್ ಐದರಂದು ನೀವೊಂದು ಶುಭಾಶಯ ಕೋರಿದರೆ ಅದೇ ಅವರಿಗೆ ರಾಷ್ಟ್ರ ಪ್ರಶಸ್ತಿ ಪಡೆದಷ್ಟು ಸಂಭ್ರಮ.
– ಬಿ.ಎಂ. ದಾರುಕೇಶ, ಉಪನ್ಯಾಸಕರು, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಚಿತ್ರದುರ್ಗ