2001ರ ಡಿಸೆಂಬರ್ ನಲ್ಲಿ ಶ್ರೀಮತಿ ಮಾಯಾ ರಾವ್ ಹಾಗೂ ನಾಗಾಭರಣರ ಅಮೃತ ಹಸ್ತದಿಂದ ಬೆಳಗಿದ ಕಲಾಜ್ಯೋತಿ, ಚಿರಂತನ ಸಂಸ್ಥೆ ಇಲ್ಲಿಯವರೆಗೂ ತನ್ನ ಬೆಳಕಿನಿಂದ ಕಲಾ ಪ್ರಪಂಚದಲ್ಲಿ ದಾವಣಗೆರೆಗೆ ಹೊಸ ಗುರುತನ್ನು ನೀಡಿದೆ. ದಾವಣಗೆರೆ ಎಂದರೆ ಬೆಣ್ಣೆ ದೋಸೆ, ಕಾರಮಂಡಕ್ಕಿ ಅಷ್ಟೇ ಎಂದು ಮೂಗು ಮುರಿಯುತ್ತಿದ್ದ ಕಲಾ ದಿಗ್ಗಜರಿಗೆ ದಾವಣಗೆರೆಯಲ್ಲಿ ಭಾರತೀಯ ಶಾಸ್ತ್ರೀಯ ಕಲೆಗಳನ್ನು ಆರಾಧಿಸುವ, ಕಲಿಯುವ ಹಾಗೂ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುವ ಕಲಾವಿದರಿದ್ದಾರೆ ಎಂಬುದನ್ನು ಮನವರಿಕೆ ಮಾಡಿಸಿದ ಹೆಮ್ಮೆ ಚಿರಂತನ ಸಂಸ್ಥೆಯದ್ದು.
ಮೂರು ಜನ ಸ್ನೇಹಿತರ ಕನಸಿನಿಂದ ಅಂದು ಆರಂಭವಾದ ಸಂಸ್ಥೆ ಇಂದು 16,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ, ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಕಥಕ್, ತಬಲ, ವೀಣೆ, ಪಿಟೀಲು, ಕೊಳಲು, ಕೀಬೋರ್ಡ್, ಗಿಟಾರ್, ಚಿತ್ರಕಲೆ ಹೀಗೆ ಹಲವಾರು ಕಲೆಗಳಲ್ಲಿ ತರಬೇತಿಗಳನ್ನು ನೀಡುತ್ತಾ ಬಂದಿದೆ. ಹಿರಿಯ ಅನುಭವಿ ಗುರುಗಳು ಮೈಸೂರು, ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ ಮುಂತಾದ ಕಡೆಗಳಿಂದ ಪ್ರತಿ ಶನಿವಾರ ಮತ್ತು ಭಾನುವಾರ ದಾವಣಗೆರೆಗೆ ಆಗಮಿಸಿ ತಮ್ಮ ಕಲೆಯನ್ನು ದಾವಣಗೆರೆಯ ವಿದ್ಯಾರ್ಥಿಗಳಿಗೆ ಇಂದಿಗೂ ಧಾರೆ ಎರೆಯುತ್ತಿದೆ.
ಕೇವಲ ಕಲಾ ಶಿಕ್ಷಣವನ್ನು ನೀಡುವುದಷ್ಟೇ ಅಲ್ಲದೆ ಕಲಾ ಜಗತ್ತಿನ ದಿಗ್ಗಜರನ್ನು, ಮೇರು ಕಲಾವಿದರನ್ನು ದಾವಣಗೆರೆಗೆ ಕರೆಸಿ ಅವರಿಂದ ಕಾರ್ಯಕ್ರಮ ಪ್ರಸ್ತುತಪಡಿಸಿ, ಮುಂದಿನ ಪೀಳಿಗೆಗೆ ಕಲೆಯ ಆಳದ ಅರಿವನ್ನು ಉಂಟು ಮಾಡುವುದಕ್ಕಾಗಿ ದೇಶದ ಹಲವು ಖ್ಯಾತ ಕಲಾವಿದರನ್ನು ದಾವಣಗೆರೆಗೆ ಪ್ರಥಮ ಬಾರಿಗೆ ಕರೆಸಿದ ಕೀರ್ತಿ ಚಿರಂತನದ್ದು.
ಹರಿಪ್ರಸಾದ್ ಚೌರಾಸಿಯ, ಕದ್ರಿ ಗೋಪಾಲನಾಥ್, ಉಷಾ ಉತುಪ್, ಕೈವಲ್ಯ ಕುಮಾರ್ ಗುರವ್, ನಿರುಪಮಾ ರಾಜೇಂದ್ರ, ಸಂಗೀತ ಕಟ್ಟಿ, ಪ್ರವೀಣ್ ಗೋಡ್ಕಿಂಡಿ, ನಾಗರಾಜರಾವ್ ಹವಾಲ್ದಾರ್, ಪ್ರವೀಣ ಡಿ. ರಾವ್ ಹೀಗೆ ಅನೇಕ ಖ್ಯಾತನಾಮರು ಬಂದು ಕಾರ್ಯಕ್ರಮ ನೀಡಿ ಶುದ್ಧ ಸಂಗೀತ, ನೃತ್ಯದ ವಿವಿಧ ರೂಪಗಳನ್ನು ತೋರಿಸಿದ್ದಾರೆ.
21 ವರ್ಷಗಳ ಸುದೀರ್ಘ ಕಲಾ ಪಯಣದಲ್ಲಿ ಎಷ್ಟೇ ಏಳು ಬೀಳುಗಳು ಬಂದರೂ ಧೈರ್ಯಗುಂದದೆ ಜೋಡೆತ್ತುಗಳಂತೆ ಅಧ್ಯಕ್ಷೆ ದೀಪಾರಾವ್ ಹಾಗೂ ಕಾರ್ಯದರ್ಶಿ ಮಾಧವ ಪ್ರಸಾದ ಪದಕಿ ದುಡಿದಿದ್ದಾರೆ.
ಕೇವಲ ನೃತ್ಯ ಸಂಗೀತದಲ್ಲಷ್ಟೇ ತಮ್ಮ ಚಟುವಟಿಕೆಗಳನ್ನು ಸೀಮಿತಗೊಳಿಸದೆ ರಂಗಭೂಮಿ ಯಲ್ಲೂ ಸಾಕಷ್ಟು ಕೃಷಿ ನಡೆಸಿದ್ದಾರೆ. ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳು, ಕಿರ್ಲೋಸ್ಕರ್ ಸತ್ಯರವರ ತಂಡ, ಸಿಹಿ ಕಹಿ ಚಂದ್ರು ತಂಡ, ಯಶವಂತ ಸರ ದೇಶಪಾಂಡೆ ಅವರ ತಂಡಗಳನ್ನು ದಾವಣಗೆರೆಗೆ ಕರೆಸಿ ಹಲವು ನಾಟಕ ಪ್ರದರ್ಶನಗಳನ್ನು ಚಿರಂತನ ಆಯೋಜಿಸಿದೆ. ದಾವಣಗೆರೆಯಲ್ಲಿ ರಂಗಾಯಣದ ಪರ್ವ ನಾಟಕ ಪ್ರದರ್ಶನದ ಆಯೋಜನೆಯಲ್ಲಿಯೂ ಚಿರಂತನ ಮುಖ್ಯ ಪಾತ್ರ ವಹಿಸಿದೆ. ದಾವಣಗೆರೆಯ ನೃತ್ಯ ಪಟುಗಳನ್ನು ಸಾಗರದಾಚೆಯ ಹಲವು ಪ್ರತಿಷ್ಠಿತ ವೇದಿಕೆಗಳಿಗೆ ಕರೆದೊಯ್ದ ಹೆಮ್ಮೆ ಚಿರಂತನದ್ದು.
ಕನ್ನಡಿಗರು ದುಬೈ, ಕರ್ನಾಟಕ ಸಂಘ, ಶಾರ್ಜಾ ಕನ್ನಡ ಸಂಘ, ಕನ್ನಡಿಗರು ಯುಕೆ ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಈ ಅಂತರಾಷ್ಟ್ರೀಯ ಕಾರ್ಯ ಕ್ರಮಗಳು ಹೊರನಾಡಿನಲ್ಲಿ ಕನ್ನಡದ ಕೀರ್ತಿಪತಾಕೆಯನ್ನು ಹಾರಿಸುವಲ್ಲಿ ಯಶಸ್ವಿಯಾಗಿವೆ. ಸಂಗೀತ, ನೃತ್ಯ ನಾಟಕಗಳಲ್ಲಿ ಅಷ್ಟೇ ಅಲ್ಲದೆ ಚಿರಂತನ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿ ಸಿದೆ. ಪ್ರಮುಖವಾಗಿ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಹೇಳಿಕೊಡುವ ಬೇಸಿಗೆ ಶಿಬಿರಗಳು, ನೃತ್ಯ, ಸಂಗೀತ, ಯಕ್ಷಗಾನ ಶಿಬಿರಗಳು, ವಿಚಾರ ಸಂಕಿರಣ ಗಳನ್ನು ಆಯೋಜಿಸಿದೆ. ಇದೆಲ್ಲದರ ಜೊತೆಗೆ ಸಮಾಜ ಮುಖಿ ಕೆಲಸಗಳಲ್ಲಿ ಪಾಲ್ಗೊಂಡು ಹಿಮೋಫೀಲಿಯಾ ರೋಗಿ ಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದೆ. ಅದಲ್ಲದೆ ಕ್ಯಾನ್ಸರ್ ಪೀಡಿತರಿಗಾಗಿ, ಅಂಧ ಮಕ್ಕಳಿಗಾಗಿ, ವಿಕಲಚೇತನರಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಹಾಯ ಹಸ್ತ ನೀಡಿದೆ. ರಕ್ತದಾನ ಶಿಬಿರಗಳು ಹಾಗೂ ನಗರದ ಸೌಂದರ್ಯ ಹೆಚ್ಚಿಸುವ ಗೋಡೆ ಬರಹಗಳು, ಪೇಂಟಿಂಗ್‌ಗಳ ಮುಖಾಂತರ ನಗರಕ್ಕೆ ವಿಶೇಷ ಕೊಡುಗೆ ನೀಡಿದೆ.
ಚಿರಂತನ 21 ವರ್ಷಗಳ ಸಾರ್ಥಕ ಪ್ರಯಾಣ ಮುಗಿಸಿ 22ಕ್ಕೆ ಕಾಲಿಡುತ್ತಿದೆ. ಪ್ರತಿಬಾರಿಯಂತೆ ಈ ಬಾರಿಯೂ ಒಂದು ವಿಭಿನ್ನ ಕಾರ್ಯಕ್ರಮವನ್ನು ತಮ್ಮ ಮುಂದೆ ತರುತ್ತಿದೆ. ಇಂದು ಸಂಜೆ 5 ಗಂಟೆಗೆ ಬಾಪೂಜಿ ಸಭಾಂಗಣದಲ್ಲಿ ಚಿರಂತನ ಉತ್ಸವ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ದಲ್ಲಿ ಸುಮಾರು 100 ಕಲಾವಿದರುಗಳು ಕಲಾ ಪ್ರದರ್ಶನವನ್ನು ನೀಡುತ್ತಿದ್ದಾರೆ.
ದೀಪಾ ರಾವ್
ಮಾಧವ ಪ್ರಸಾದ್ ಪದಕಿ