ರಾಣೇಬೆನ್ನೂರು ಶನೇಶ್ಚರ ಮಠದಲ್ಲಿ ದೀಪೋತ್ಸವ

ಶ್ರೀಗಳ ಬದುಕು ತ್ಯಾಗಮಯವಾದುದು: ಶಾಸಕ ಅರುಣ್‌ಕುಮಾರ್‌ ಪೂಜಾರ್‌

ರಾಣೇಬೆನ್ನೂರು, ಡಿ.12- ಸ್ವಂತ ಬದುಕನ್ನು ತ್ಯಾಗ ಮಾಡಿ, ಜಗತ್ತಿನ ಜೀವ ಸಂಕುಲಕ್ಕೆ ಒಳಿತನ್ನು ಬಯಸುವ ಶ್ರೀ ಶಿವಯೋಗಿ ಸ್ವಾಮಿಗಳ ಧಾರ್ಮಿಕ ಕಾರ್ಯಗಳಿಂದ ಕೊರೊನಾ ಮಾಯವಾಗ ಲಿದೆ ಎಂದು ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಹೇಳಿದರು.

ಇಲ್ಲಿನ ಶನೇಶ್ಚರ ಮಠದಲ್ಲಿ ಎಂಟನೇ ವರ್ಷದ ತಿಲ ಲಕ್ಷ ದೀಪೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಒಂದು ತಿಂಗಳ ಹಿಂದೆ ಲೋಕ ಕಲ್ಯಾಣ ಹಾಗೂ ಕೊರೊನಾ ಮಾರಿಯ ಉಪದ್ರವ ಕಡಿಮೆ ಮಾಡಲು ಪ್ರಾರಂಭಿಸಿದ ಮೃತ್ಯುಂಜಯ ಮಹಾಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು 384 ದಿನಗಳ ಕಾಲ ನಡೆಸಿ, ಮುಂದಿನ ಲಕ್ಷ ದೀಪೋತ್ಸವಕ್ಕೆ ಮಂಗಲಗೊಳಿಸುವ ಶ್ರೀಗಳ ಸಂಕಲ್ಪದಿಂದ ನನ್ನ ಕ್ಷೇತ್ರ ಪಾವನಗೊಳ್ಳಲಿದೆ ಎಂದು ಶಾಸಕರು ಹೇಳಿದರು.

ಕೇವಲ ವಾಣಿಜ್ಯ ನಗರವೆಂದು ಗುರುತಿಸಿಕೊಳ್ಳುತ್ತಿದ್ದ ರಾಣೇಬೆನ್ನೂರು ನಗರ, ಶನೇಶ್ಚರ ಮಠ ಹಾಗೂ ಶಿವಯೋಗಿ ಶ್ರೀಗಳ ಪ್ರಯತ್ನದಿಂದ ಧಾರ್ಮಿಕ  ಹಾಗೂ ಇಲ್ಲಿನ ಜನತೆಯ ಸಂಕಷ್ಟ ನಿವಾರಣೆ ಕೇಂದ್ರವಾಗಿ ರೂಪುಗೊಂಡಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಠದ ಸಮಿತಿಯ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ ಹೇಳಿದರು.

ಮಠದ ಅಭಿವೃದ್ಧಿಗೆ ಶಾಸಕರು ಹಾಗೂ ನಗರ ಪ್ರಾಧಿಕಾರ ಕೈಗೊಂಡ ಕಾರ್ಯಗಳ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಮಾತನಾಡಿದರು.

ಸಾಂಕೇತಿಕ ದೀಪಗಳನ್ನು ಬೆಳಗಿಸಿ, ಸಮಾರಂಭದ ಸಾನ್ನಿಧ್ಯವನ್ನು ಶಿವಯೋಗಿ ಶ್ರೀಗಳು ವಹಿಸಿದ್ದರು. ನಗರಸಭೆ ಸದಸ್ಯ ಪ್ರಕಾಶ್‌ ಪೂಜಾರ್‌, ಮೈಸೂರು ಜಿಲ್ಲಾ ನ್ಯಾಯಾಧೀಶ ಶಿವಯೋಗಿ ಹಿರೇಮಠ ಪಾಲ್ಗೊಂಡಿದ್ದರು. ಬಿಜೆಪಿ ಮುಖಂಡ ಸಿದ್ದು ಚಿಕ್ಕಬಿದರಿ ಸ್ವಾಗತಿಸಿದರು.

ಶಾಸಕರಿಂದ ತುಪ್ಪ : ಒಂದು ವರ್ಷ ನಡೆಯುವ ಮೃತ್ಯುಂಜಯ ಮಹಾ ಹೋಮಕ್ಕೆ ಬೇಕಾಗುವ ಒಂದು ಸಾವಿರ ಕೆಜಿ ತುಪ್ಪವನ್ನು ಕೊಡಿಸಿರುವ ಶಾಸಕ ಅರುಣಕುಮಾರ್,
ಕಳೆದ ವರ್ಷದ ತಿಲ ಲಕ್ಷ ದೀಪೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದನ್ನು ಪ್ರಸ್ತಾಪಿಸಿ, ಅವರನ್ನು ಮತ್ತು ಅಥಿತಿಗಳನ್ನು ಮಠದ ವತಿಯಿಂದ ಶ್ರೀಗಳು ಗೌರವಿಸಿದರು.

error: Content is protected !!