ಹೊನ್ನಾಳಿ, ಮಾ.27 – ಜಿಲ್ಲಾಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸವಲತ್ತುಗಳು ಇನ್ನು ಮುಂದೆ ತಾಲೂಕು ಕೇಂದ್ರದಲ್ಲೇ ದೊರೆಯಲಿವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಗುರುವಾರ 23.50 ಕೋಟಿ ರೂ. ವೆಚ್ಚದ 250 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಹಿಂದೆ 30 ಹಾಸಿಗೆ ಇದ್ದ ಸಾರ್ವಜನಿಕ ಆಸ್ಪತ್ರೆಯನ್ನು ಅಂದಿನ ಉಪಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಆರ್.ಅಶೋಕ್ ಅವರು 100 ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರು. ಅದೇ ರೀತಿ ಈ ಬಾರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ನನ್ನ ಮನವಿ ಮೇರೆಗೆ 100 ಹಾಸಿಗೆ ಇದ್ದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು ಅವರಿಗೆ ಅವಳಿ ತಾಲೂಕಿನ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆಂದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ತಾಲೂಕಿನ ಜನರು ಅನಾರೋಗ್ಯಕ್ಕೆ ತುತ್ತಾದರೆ ಅನಿವಾರ್ಯವಾಗಿ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಬರುತ್ತಿದ್ದರು. ಈಗ 250 ಹಾಸಿಗೆ ಆಸ್ಪತ್ರೆಯಾಗಿರುವುದರಿಂದ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ನೂತನ ಆಸ್ಪತ್ರೆಗೆ 17 ಜನ ನುರಿದ ವೈದ್ಯರು ನೇಮಕ ಗೊಳ್ಳಲಿದ್ದು, 80 ಜನ ಶೂಶ್ರುಷಕರು ನೇಮಕಗೊಳ್ಳಲಿದ್ದು, ಇದರಿಂದ ದಿನದ 24 ಗಂಟೆಯೂ ಕೂಡ ಸಾರ್ವಜನಿಕರಿಗೆ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ತಾಲೂಕು ಆಸ್ಪತ್ರೆಯಲ್ಲಿ ವಿವಿಧ ರೀತಿಯ ಚಿಕಿತ್ಸಾ ಸೌಲಭ್ಯಗಳು ದೊರೆಯಲಿವೆ ಎಂದರು.
ಪುರಸಭೆ ಅಧ್ಯಕ್ಷೆ ಸುಮಾ ಮಂಜುನಾಥ್ ಇಂಚರ, ಸದಸ್ಯರಾದ ಬಾಬು ಓಬಳದಾರ್, ಕೆ.ವಿ.ಶ್ರೀಧರ್, ರಂಗನಾಥ್, ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಚಂದ್ರಪ್ಪ, ವೈದ್ಯರಾದ ಡಾ.ರಾಜ್ಕುಮಾರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳಿದ್ದರು.